ಬೆಂಗಳೂರು: ಒಂದು ಕಡೆಯಿಂದ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಪಾಕ್ ನೆಲದಲ್ಲಿರುವ ಉಗ್ರ ಶಿಬಿರಗಳನ್ನು ನಾಶ ಮಾಡುವ ಮೂಲಕ ದೇಶವಾಸಿಗಳ ಪ್ರಶಂಸೆಗೆ ಕಾರಣವಾಗಿದೆ. ಆದರೆ ಇನ್ನೊಂದು ಕಡೆ ಇದೇ ವಿಷಯವನ್ನು ನಮ್ಮ ರಾಜಕೀಯ ಪಕ್ಷಗಳು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಮಾಜೀ ಮುಖ್ಯಮಂತ್ರಿ ಮತ್ತು ಕರ್ನಾಟಕ ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಕೊಟ್ಟಿರುವ ಒಂದು ಹೇಳಿಕೆ ಇದೀಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
‘ಉಗ್ರ ಶಿಬಿರಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿದ ಬಳಿಕ ಇದೀಗ ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು 22 ಸೀಟು ಗೆಲ್ಲಲು ಇದು ನೆರವಾಗಲಿದೆ’ ಎಂಬ ಅರ್ಥದಲ್ಲಿ ಆಡಿರುವ ಮಾತು ಇದೀಗ ಅವರಿಗೆ ಮುಳುವಾಗುವ ಸಾಧ್ಯತೆ ಕಂಡುಬರುತ್ತಿದೆ.
ಒಂದು ಕಡೆ ನರೇಂದ್ರ ಮೋದಿ ಅವರು
‘ನಮ್ಮ ಸೇನೆ ಹಾಗೂ ಸೈನಿಕರ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ; ನಾವೂ ಸಹ ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಪದೇಪದೇ ಹೇಳುತ್ತಿದ್ದರೂ ಬಿ.ಎಸ್.ವೈ. ಸೇರಿದಂತೆ ಬಿ.ಜೆ.ಪಿ.ಯ ಹಲವು ನಾಯಕರು ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿರುವ ಅಂಶ ಸ್ಪಷ್ಟವಾಗುತ್ತಿದೆ. ಈ ವಿಷಯ ಇದೀಗ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
‘ನಮ್ಮ ಯೋಧರು ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ಥಾನಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಆದರೆ ಈ ಬಿ.ಜೆ.ಪಿ.ಯವರು ತಾವೇ ಗಡಿಯಲ್ಲಿ ಕಾದಾಡಿ ದೇಶವನ್ನು ಕಾಪಾಡುತ್ತಿರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ’ ಎಂದು
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಸೇನಾ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ರೀತಿಯಲ್ಲಿ ಬಿ.ಎಸ್.ವೈ. ನೀಡಿರುವ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ನಿವೃತ್ತ ಭೂ ಸೇನಾ ಮುಖ್ಯಸ್ಥ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವರಾಗಿರುವ ಜನರಲ್ ವಿ.ಕೆ.ಸಿಂಗ್ ಅವರು ಸೇನಾ ಕಾರ್ಯಾಚರಣೆಯಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದಂತೆ ಟ್ವೀಟ್ ಮೂಲಕ ಬಿ.ಎಸ್.ವೈ. ಅವರಿಗೆ ಕಿವಿಮಾತು ಹೇಳಿದ್ದಾರೆ.
‘ಯಡಿಯೂರಪ್ಪನವರೇ ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ ದಯವಿಟ್ಟು ಇಂತಹ ಹೇಳಿಕೆಗಳಿಂದ ದೂರವಿರಿ. ನಾವೀಗ ಒಂದಾಗಿದ್ದೇವೆ. ಕೇಂದ್ರ ಸರಕಾರವು ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆಯನ್ನು ನಡೆಸಿದ್ದು ನಮ್ಮ ದೇಶವನ್ನು ಕಾಪಾಡಲು ಹಾಗೂ ನಮ್ಮ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಲೇ ಹೊರತು ಹೆಚ್ಚಿನ ಸೀಟುಗಳನ್ನು ಗೆಲ್ಲಲು ಅಲ್ಲ’ ಎಂದವರು ಯಡಿಯೂರಪ್ಪನವರನ್ನು ನಯವಾಗಿ ತಿವಿದಿದ್ದಾರೆ.