ದಾವಣಗೆರೆ: ಮುಂದಿನ ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕಂದಾಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತ್ಯೋತ್ಸವ ಉದ್ಘಾಟಿಸಿ, ಮಾತನಾಡಿದ ಅವರು, ಮುಂದಿನ ಸೇವಾಲಾಲ್ ಜಯಂತಿ ವೇಳೆಗೆ ಸರ್ವೆ ಮುಗಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು.
ಸೂರಗೊಂಡನಕೊಪ್ಪಕ್ಕೆ ಮಂಜೂರಾಗಿರುವ ರೇಲ್ವೆ ಸ್ಟೇಷನ್ ಗೆ ಸಂತ ಸೇವಾಲಾಲರ ಜನ್ಮ ಸ್ಥಳ ಭಾಯಾಗಡ ಸ್ಥಳದ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಸುಕ್ಷೇತ್ರ ಸೂರಗೊಂಡನಕೊಪ್ಪವನ್ನು ಕೇವಲ ಧಾರ್ಮಿಕ ಕ್ಷೇತ್ರವಾಗಿ ಅಷ್ಟೇ ಅಲ್ಲದೇ ಪ್ರವಾಸಿತಾಣವಾಗಿ ಅಭಿವೃದ್ಧಿ ಗೊಳಿಸಲಾಗುವುದು ಎಂದರು.
ಬಂಜಾರ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸಂತ ಸೇವಾಲಾಲರು ಕಾರಣ. ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ. ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸೂರಗೊಂಡನಕೊಪ್ಪವನ್ನು ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ರೂ. ಹಾಗೂ ಈ ಕ್ಷೇತ್ರದ ರಸ್ತೆ ಅಭಿವೃದ್ಧಿ ಗೆ 10 ಕೋಟಿ ರೂ. ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಇದನ್ನೂ ಓದಿ:ಐಕ್ಯತೆಯಿಂದ ಕೆಲಸ ಮಾಡಬೇಕಿದೆ: ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ
ಬಂಜಾರ ಸಮುದಾಯ ಗುಳೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಡಿ ತಾಂಡಾ ರೋಜಗಾರ ಮಿತ್ರ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅಳಿವಿನಂಚಿನಲ್ಲಿರುವ ಬಂಜಾರ ಭಾಷೆ ಉಳಿಸಲು ಅಗತ್ಯ ಸಲಹೆ ನೀಡಲು ಈಗಾಗಲೇ ಹಂಪ ನಾಗರಾಜ ನೇತೃತ್ಚದಲ್ಲಿ ಸಮಿತಿ ರಚಿಸಲಾಗಿದೆ. ಬಂಜಾರ ಭಾಷಾ ಅಕಾಡೆಮಿ ಸ್ಥಾಪನೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.