Advertisement

ಲೂಟಿ ಮಾಡಿದವರು, ಠಾಣೆಗೆ ನುಗ್ಗಿದವರು ಅಮಾಯಕರೇ: ಸಿದ್ದರಾಮಯ್ಯಗೆ ಬಿಎಸ್ ವೈ ಪ್ರಶ್ನೆ

02:46 PM Apr 19, 2022 | Team Udayavani |

ದಾವಣಗೆರೆ: ಹಳೆ ಹುಬ್ಬಳ್ಳಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಬಾರದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಲೂಟಿ ಮಾಡಿದವರು, ಠಾಣೆಗೆ ನುಗ್ಗಿದವರು ಅಮಾಯಕರೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಿರೇಮಠ ಎಂಬುವರು ಮಸೀದಿ ಮೇಲೆ ಕೇಸರಿ ಧ್ವಜದ ಪೋಸ್ಟ್ ಹಾಕಿದ್ದು ಸಂಜೆ 6.30ಕ್ಕೆ. ಒಂದು ಗಂಟೆಯಲ್ಲಿ 7.30ಕ್ಕೆ ಅವನನ್ನು ಬಂಧಿಸಿದರೂ ಅಲ್ಪಸಂಖ್ಯಾತ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಆಸ್ಪತ್ರೆ, ದೇವಸ್ಥಾನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರಿಗೆ ಗಾಯಗಳಾಗಿವೆ. ಪಿಎಸ್‌ಐ ಕಾಡದೇವರಮಠ ಎಂಬುವರ ತಲೆಗೆ ಗಾಯಗಳಾಗಿವೆ. ವಾಹನಗಳು ಜಖಂ ಆಗಿವೆ. ಅಲ್ತಾಫ್ ಹಳ್ಳೂರು ಎಂಬ ಮುಸ್ಲಿಂ ಮುಖಂಡ ಘಟನೆಗೆ ಕಾರಣ ಎಂಬುದು ಜಗಜ್ಜಾಹೀರಾಗಿದ್ದರೂ ಕಾಂಗ್ರೆಸ್‌ ನವರು ಅಮಾಯಕರನ್ನು ಬಂಧಿಸಬೇಡಿ ಎನ್ನುತ್ತಿದ್ದಾರೆ. ಇಂತಹ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತದ್ದಲ್ಲ. ಇಂತಹ ಹೇಳಿಕೆಯಿಂದ ಪ್ರೋತ್ಸಾಹ ನೀಡಿದಂತಾಗುತ್ತದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಲ್ಲಿ ಕುಳಿತು ಹೇಳಿಕೆ ನೀಡುವ ಬದಲಿಗೆ ಹುಬ್ಬಳ್ಳಿಗೆ ಹೋಗಿ ವಾಸ್ತವತೆಯ ನೋಡಿ ಮಾತನಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ: ಯಡಿಯೂರಪ್ಪ ವಿಶ್ವಾಸ

ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳಾದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಜವಾಬ್ದಾರರಾಗುವುದಿಲ್ಲ. ಘಟನೆ ನಡೆದಿದ್ದು ಗೊತ್ತಾದ ತಕ್ಷಣ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಕೋಮು ಸಾಮರಸ್ಯ ಕಾಪಾಡಲು ಸರ್ಕಾರ ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆರಗ ಜ್ಞಾನೇಂದ್ರ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆರಗ ಜ್ಞಾನೇಂದ್ರ ಅವರನ್ನು ಬದಲಾಯಿಸಬೇಕು ಎಂದು ಹೇಳಿಕೆ ನೀಡಿರುವ ನಮ್ಮ ಪಕ್ಷದವರೊಂದಿಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಬಿಎಸ್ ವೈ ಉತ್ತರಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರದ್ದು ಯಾವುದೇ ತಪ್ಪಿಲ್ಲ. ಅನಿವಾರ್ಯ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದಾರೆ. ಆದಷ್ಟು ಬೇಗ ಆರೋಪದಿಂದ ಮುಕ್ತರಾಗಿ ಮತ್ತೆ ಮಂತ್ರಿ ಆಗುವರು ಎನ್ನುವ ವಿಶ್ವಾಸ ಇದೆ. ನಮ್ಮ ಎಲ್ಲ ನಾಯಕರು ಈಶ್ವರಪ್ಪ ಅವರ ಹಿಂದೆ ಇದ್ದಾರೆ. ಅವರನ್ನು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ. ಈಶ್ವರಪ್ಪ ಅವರು ಯಾವುದೇ ಅಪರಾಧ ಮಾಡಿಲ್ಲ. ನಮ್ಮ ಹೇಳಿಕೆಯಿಂದ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ತನಿಖೆ ನಡೆಯಲಿ ಸತ್ಯಾಂಶ ಹೊರ ಬರಲಿ ಎಂದ ಯಡಿಯೂರಪ್ಪ, ಸಂತೋಷ್ ಪಾಟೀಲ್ ಮನೆಗೆ ಹೋಗಿ ಬರುವುದಾಗಿಯೂ ತಿಳಿಸಿದರು.

Advertisement

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯಾರು ಆರೋಪ ಮಾಡಿದ್ದಾರೋ ದಾಖಲೆ ಕೊಡಲಿ ಕ್ರಮ ಕೈಗೊಳ್ಳಲಾಗುತ್ತವೆ ಎಂದರು.

ಸಚಿವ ಸಂಪುಟದ ಪುನಾರಚನೆ, ವಿಸ್ತರಣೆ ಎಲ್ಲವೂ ಕೇಂದ್ರದ ನಾಯಕರಿಗೆ ಬಿಟ್ಟಿದ್ದು. ನಮ್ಮ ನಾಯಕರು ದೆಹಲಿಗೆ ಹೋಗಿ ಪುನಾರಚನೆ, ವಿಸ್ತರಣೆ ಯಾವುದು ಮಾಡಿದರೆ ಒಳ್ಳೆಯದು ಎಂದು ಚರ್ಚೆ ಮಾಡುತ್ತಾರೆ ಎಂದ ಯಡಿಯೂರಪ್ಪ ಬಿ.ವೈ. ವಿಜಯೇಂದ್ರ ಮಂತ್ರಿ ಆಗುತ್ತಾರಾ ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಮುಂದೆ ಏನಾದರೂ ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಆಗಬಹುದಾ ಎಂಬ ಪ್ರಶ್ನೆಗೆ ಯಡಿಯೂರಪ್ಪ, ಅವರನ್ನೇ (ಕುಮಾರಸ್ವಾಮಿ) ಹೋಗಿ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next