ರಾಜ್ಯ ಬಿಜೆಪಿ ಭೀಷ್ಮ ಬಿ.ಎಸ್.ಯಡಿಯೂರಪ್ಪ ಅವರ ನಾಲ್ಕು ದಶಕದ ರಾಜಕೀಯ ಜೀವನ ಈಗ ಮತ್ತೊಂದು ಸ್ಥಿತ್ಯಂತರಕ್ಕೆ ತೆರೆದುಕೊಂಡಿದೆ. ಹೋರಾಟ ಹಾಗೂ ನಿರಂತರ ಶ್ರಮದ ಮೂಲಕ ರಾಜ್ಯ ರಾಜಕಾರಣದ ಮಾಸ್ ಲೀಡರ್ ಎಂದು ಕರೆಸಿ ಕೊಂಡಿದ್ದ “ರಾಜಾಹುಲಿ’ಯ ಗರ್ಜನೆ ಇನ್ನು ಮುಂದೆ ರಾಜ್ಯ ವಿಧಾನಸಭೆಯಲ್ಲಿ ಮೊಳಗುವುದಿಲ್ಲ.
Advertisement
ಹದಿನೈದನೇ ವಿಧಾನಸಭೆಯ ಕಲಾಪದ ಕೊನೆಯ ದಿನ ಯಡಿಯೂರಪ್ಪನವರು ಅಧಿಕೃತ ವಿದಾಯ ಭಾಷಣ ಮಾಡುವ ಮೂಲಕ ಚುನಾವಣ ರಾಜಕಾರಣ ಸಾಕಿನ್ನು ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಯಡಿ ಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿ ದಾಗಲೇ ಅವರ ರಾಜಕೀಯ ಭವಿಷ್ಯದ “ದಿಶೆ’ ಏನೆಂಬುದು ಬಹುತೇಕ ನಿರ್ಧಾರವಾಗಿಯೇ ಹೋಗಿತ್ತು. ಹೀಗಾಗಿ ಈ ವಿದಾಯ ಭಾಷಣ ಸುದೀರ್ಘ ಕಾಲ ಯುದ್ಧಭೂಮಿಯಲ್ಲಿ ಮೈ ಚಳಿ ಬಿಟ್ಟು ಕಾದಿದ ಸೇನಾನಿಯೊಬ್ಬ ಶಸ್ತ್ರ ಬದಿಗಿಟ್ಟಾಗ ಕಾಡುವ ನೀರವತೆಯ ರೀತಿ ಕೇಸರಿ ಪಾಳಯವನ್ನು ಕಾಡದೇ ಇದ್ದರೂ ವರ್ಚಸ್ವಿ ನಾಯಕತ್ವದ ನಿರ್ವಾತವೊಂದು ಬಿಜೆಪಿಯನ್ನು ಬಹುಕಾಲ ಕಾಡಲಿದೆ.
Related Articles
Advertisement
ಟಿಪ್ಪಣಿ: ಶ್ವೇತ ಸಫಾರಿಯ ಎರಡೂ ಕಿಸೆಯಲ್ಲಿ ಒಂದಿಷ್ಟು ಚೀಟಿ. ಟೇಬಲ್ ಮೇಲೆ ಒಂದಿಷ್ಟು ಕಡತ. ಆಡಳಿತ ಪಕ್ಷವಾಗಿರಲಿ, ವಿಪಕ್ಷವಾಗಿರಲಿ ಸದನದಲ್ಲಿ ಕುಳಿತಿರುವಷ್ಟೂ ಹೊತ್ತು ಮೈಕ್ ಕಿವಿಗೆ ಸಿಕ್ಕಿಸಿಕೊಂಡು ಟಿಪ್ಪಣಿ ಮಾಡಿಕೊಳ್ಳುತ್ತಲೇ ಕುಳಿತು ಕೊಳ್ಳುತ್ತಿದ್ದ ರಾಜ್ಯದ ಏಕೈಕ ರಾಜಕಾರಣಿಯೆಂದರೆ ಅದು ಬಿ.ಎಸ್.ಯಡಿಯೂರಪ್ಪ.ರಾಜ್ಯ ವಿಧಾನಸಭೆಯಲ್ಲಿ ಬಹುತೇಕ ನಾಯ ಕರು ಕಲಾಪಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳುವುದೇ ಇಲ್ಲ. ಆದರೆ ಯಡಿಯೂರಪ್ಪ ಮಾತ್ರ ಇದಕ್ಕೆ ಅಪವಾದ. ಅವರು ಸದನದಲ್ಲಿ ಎದ್ದು ನಿಂತು ಗುಡುಗಿದಷ್ಟೇ ಶಿಸ್ತುಬದ್ಧವಾಗಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಯಡಿ ಯೂರಪ್ಪನವರ ವೀರಾವೇಶದ ಭಾಷಣಗಳಿಗೆ ಈ ಪುಟ್ಟ ಪುಟ್ಟ ಬರಹ ಹಾಗೂ ಸದನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ಶ್ರದ್ಧೆಯೇ ಕಾರಣ ಎಂದರೂ ತಪ್ಪಾಗಲಾರದು. ಮಾತಿನ ಮೊನೆಯಲ್ಲಿ ತಿವಿಯುವ ಅಥವಾ ಅಪಾರ ವಾಕ್ಚಾತುರ್ಯವನ್ನು ಹೊಂದಿದ ಸಂಸದೀಯ ಪಟು ಯಡಿ ಯೂರಪ್ಪನವರಲ್ಲ. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸದನವನ್ನು ಅವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವರು ಮತ್ತೂಬ್ಬರಿಲ್ಲ. ಈ ಕಾರಣ ಕ್ಕಾಗಿಯೇ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಜನಜನಿತವಾಯಿತು. ಇನ್ನು ಮುಂದೆ ನಾನು ಶಾಸಕನಾಗಿ ಈ ಸದನ ಪ್ರವೇಶಿಸುವುದಿಲ್ಲ. ಇದೇ ನನ್ನ ಕೊನೆಯ ಕಲಾಪ ಎಂದು ಘೋಷಿಸಿದ ಮೇಲೂ ರಾಷ್ಟ್ರಗೀತೆ ಮೊಳಗುವವರೆಗೂ ಯಡಿಯೂರಪ್ಪ ಸದನದಲ್ಲೇ ಇದ್ದರು. ಅಷ್ಟರಮಟ್ಟಿಗೆ ಅವರು ಕೊನೆಯ ಕ್ಷಣದವರೆಗೂ ಜನಪ್ರತಿನಿಧಿ ಎಂಬ ಶಬ್ದಕ್ಕೆ ಬದ್ಧವಾಗಿ ನಡೆದುಕೊಂಡರು. ಸದನದ ಕ್ಷಣಗಳು…
ಹೋರಾಟದ ಝಲಕ್
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಶಾದಿಭಾಗ್ಯ ಯೋಜನೆ ವಿರುದ್ಧ ಮೊದಲು ಧ್ವನಿ ಎತ್ತಿದವರು ಯಡಿಯೂರಪ್ಪ. ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬೆಳಗಾವಿ ಸುವರ್ಣ ವಿಧಾನಸೌಧದವರೆಗೂ ತಂದು ಸದನದಲ್ಲೇ ಅಹೋರಾತ್ರಿ ಧರಣಿಯನ್ನು ಏಕಾಂಗಿಯಾಗಿ ನಡೆಸಿದರು. ಸಿದ್ದರಾಮಯ್ಯ, ಅಂಬರೀಶ್, ಸ್ಪೀಕರ್ ಕಾಗೋಡು ತಿಮ್ಮಪ್ಪ ಎಷ್ಟು ಮನವಿ ಮಾಡಿದರೂ ಬಗ್ಗದ ಅವರು ಸದನದ ಬಾವಿಯಲ್ಲೇ ಕುಳಿತಿದ್ದರು. ಯಡಿಯೂರಪ್ಪನವರ ಈ ಪ್ರತಿಭಟನೆ ಕೊನೆಗೊಂಡಿದ್ದು, ಕಬ್ಬು ಬೆಳೆಗಾರ ವಿಠಲ ಅರಬಾವಿ ಆತ್ಮಹತ್ಯೆ ಬಳಿಕ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಕುಳಿತ ಸ್ಥಳದಿಂದ ಸ್ಪೀಕರ್ ಎದುರು ಹೂಂಕರಿಸುತ್ತಾ ನಡೆದ ಯಡಿಯೂರಪ್ಪ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟುಹಿಡಿದರು. ರೈತರ ವಿಚಾರ ಬಂದಾಗ ಯಡಿಯೂರಪ್ಪನವರಿಗೆ ಉಳಿದಿದ್ದೆಲ್ಲ ಗೌಣ ಎಂಬುದಕ್ಕೆ ಇದೊಂದು ನಿದರ್ಶನ. ಸದನದಲ್ಲಿ ಮಾತಿಗಿಳಿದರೆ ಆಡಳಿತ ಪಕ್ಷದವರಿರಲಿ, ಸ್ವಪಕ್ಷೀಯರಿರಲಿ ಎಲ್ಲರೂ ಗಂಭೀರವಾಗಿ ಕೇಳುವಂತೆ ಭಾಷಣ ಮಾಡುತ್ತಿದ್ದರು, ಯಾರೇ ಭಾಷಣಕ್ಕೆ ಅಡ್ಡಿ ಬಂದರೆ ಒಮ್ಮೆ ಗರಂ ಆಗಿ ತಿರುಗಿ ನೋಡಿದರೆ ಅವರು ಮೌನವಾಗಿ ಕುಳಿತುಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಎಷ್ಟೇ ಅಡಚಣೆಗಳಾದರೂ ಭಾಷಣ ಮುಗಿಸದೆ ಬಿಡುತ್ತಿಲಿಲ್ಲ. ಅಷ್ಟರ ಮಟ್ಟಿಗೆ ಅವರು ಸದನದಲ್ಲಿ ತಮ್ಮ ಹಿಡಿತ ಹೊಂದಿದ್ದರು. ಹಿರಿಯರಿಂದ ಸಲಹೆ, ಕಿರಿಯರಿಗೆ ಮಾರ್ಗದರ್ಶನ ಅವರ ಸದನದ ಯಶಸ್ವಿನ ಗುಟ್ಟು. ಎಚ್‌ಡಿಕೆಗೆ ಉರಗ ಪತಾಕ ಬಿರುದು
ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗದೇ ವಿಪಕ್ಷ ನಾಯಕನ ಸ್ಥಾನ ಅಲಂಕರಿಸಿದ ಯಡಿಯೂರಪ್ಪ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸದನದಲ್ಲಿ ಮಾಡಿದ ಭಾಷಣ ಅವರ ಸಂಸದೀಯ ಕಾರ್ಯವೈಖರಿಯಲ್ಲೇ ಅನನ್ಯವಾದದ್ದು. ಕುಮಾರಸ್ವಾಮಿಯನ್ನು “ಉರಗ ಪತಾಕ’ ಅಂದರೆ ದುರ್ಯೋಧನ ಎಂದು ಕುಟುಕಿದ ಯಡಿಯೂರಪ್ಪ ಅಪ್ಪ-ಮಕ್ಕಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುತ್ತೇನೆ ಎಂದು ಅಬ್ಬರಿಸಿದ್ದರು. ಇದಾದ ಕೆಲವೇ ದಿನದಲ್ಲಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ “ಹಾಸನ-ರಾಮನಗರಕ್ಕೆ ಸೀಮಿತವಾದ ಅಣ್ಣ-ತಮ್ಮ ಬಜೆಟ್ ‘ ಎಂದು ಟೀಕಿಸಿದ್ದರು. ಸಾಲಮನ್ನಾದ ಎರಡು ಭಾಷಣ
ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಮಾಡಿದ 2 ಭಾಷಣಗಳು ಚಾರಿತ್ರಿಕವಾದದ್ದು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಕೊನೆಯ ಅಧಿವೇಶನ ಸಂದರ್ಭದಲ್ಲಿ ರೈತರ ಸಾಲ ಮನ್ನಾ ವಿಚಾರವನ್ನು ಪ್ರಸ್ತಾವಿಸಿದ್ದ ಯಡಿಯೂರಪ್ಪ, ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದರು. 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ರೈತರ ಸಾಲ ಮನ್ನಾ ವಿಚಾರಕ್ಕಾಗಿ ಅವರು ಮಾಡಿದ್ದ ಭಾಷಣ ಮಹತ್ವದ್ದಾಗಿತ್ತು. ಏಕವ್ಯಕ್ತಿ ನಿರ್ಧಾರ
2018ರಲ್ಲಿ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಏಕವ್ಯಕ್ತಿ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಇದೆಲ್ಲವೂ ರೈತ ಪರವಾಗಿದ್ದವು. ಆದರೆ ವಿಶ್ವಾಸಮತ ಸಾಬೀತಾಗುವವರೆಗೆ ಈ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದರು. ಮೈತ್ರಿ ಸರಕಾರ ಪತನದ ಬಳಿಕ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ ಪಾಲು ಸೇರಿದಂತೆ ಏಕವ್ಯಕ್ತಿ ಸಂಪುಟದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಮತ್ತೆ ಜಾರಿಗೆ ತಂದರು. -ರಾಘವೇಂದ್ರ ಭಟ್