ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಃರಚನೆಯ ಬಗ್ಗೆ ಬಿಎಸ್ ವೈ ದೆಹಲಿ ಭೇಟಿಯಿಂದ ಅಂತಿಮ ರೂಪ ಸಿಗುವ ಸಾಧ್ಯತೆಯಿದೆ.
ಗುರುವಾರ ಮುಂಜಾನೆ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿರುವ ಬಿ ಎಸ್ ಯಡಿಯೂರಪ್ಪನವರು ವಿಧಾನಸೌಧದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಬಿಎಸ್ ವೈ ದೆಹಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಬಿಎಸ್ ವೈ ಭೇಟಿಯಾಗಲಿದ್ದಾರೆ. ಅವರ ಭೇಟಿಯ ವೇಳೆ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದಲ್ಲಿ ಜೆಪಿ ನಡ್ಡಾ ಮತ್ತು ಅಮಿತ್ ಶಾ ನಿರತರಾಗಿದ್ದು, ಇಂದು ತಡರಾತ್ರಿ ಭೇಟಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಬಂದು ಗೆದ್ದಿರುವ 11 ಶಾಸಕರು ಮತ್ತು ಸೋತಿರುವ ಇಬ್ಬರಿಗೆ ಸಚಿವ ಪಟ್ಟ ನೀಡಿ ಮಾತು ಉಳಿಸಕೊಳ್ಳಲು ಬಿಎಸ್ ವೈ ಸತತ ಪರಿಶ್ರಮ ಪಡುತ್ತಿದ್ದಾರೆ. ಉಳಿದಂತೆ ಮೂಲ ಬಿಜೆಪಿ ಶಾಸಕರಾದ ಉಮೇಶ್ ಕತ್ತಿ, ರಾಮದಾಸ್, ಅರವಿಂದ ಲಿಂಬಾವಳಿ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಯಾರ ಹೆಸರು ಅಂತಿಮ ಪಟ್ಟಿಯಲ್ಲಿರಲಿದೆ ಎಂದು ಕಾದು ನೋಡಬೇಕಷ್ಟೆ.