Advertisement

ಆನೆಗುಂದಿ ಮಠದಲ್ಲಿ ಯಾಗ ನಡೆಸಿದ ಬಿಎಸ್‌ವೈ!

03:50 AM Jul 26, 2018 | Team Udayavani |

ಕಾಪು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಡುಕುತ್ಯಾರು ಆನೆಗುಂದಿ ಮೂಲ ಮಠದಲ್ಲಿ ಗುಟ್ಟಾಗಿ ಶತ ಚಂಡಿಕಾಯಾಗ ಮತ್ತು ಅತೀ ರುದ್ರ ಮಹಾಯಾಗ ನಡೆಸಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕುತ್ಯಾರು ಆನೆಗುಂದಿ ಮಠಕ್ಕೆ ಸದ್ದಿಲ್ಲದೇ ಬಂದಿದ್ದ ಯಡಿಯೂರಪ್ಪ ಅವರು ಮಠದಲ್ಲಿ ನಡೆದ ಮಹಾರುದ್ರ ಯಾಗ, ಶತಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಅವರ ಜತೆ ಪುತ್ರರಾದ ವಿಜಯೇಂದ್ರ, ರಾಘವೇಂದ್ರ ಹಾಗೂ ಪರಿವಾರದವರು ಭಾಗಿಯಾಗಿದ್ದರು.

Advertisement

ಯಾಗದ ಪೂರ್ಣಾಹುತಿ ಕಾಲದಲ್ಲಿ ಆನೆಗುಂದಿ ಮಠದ ಯತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರೂ ಪಾಲ್ಗೊಂಡಿದ್ದು, ಜ್ಯೋತಿಷ್ಯ ವಿದ್ವಾನ್‌ ಉಮೇಶ ಆಚಾರ್ಯ ಪಡೀಲು ಅವರ ನೇತೃತ್ವದಲ್ಲಿ ಪುತ್ತೂರು ಮತ್ತು ಸುಳ್ಯ ಮೂಲದ ಪುರೋಹಿತರ ಸಹಭಾಗಿತ್ವದೊಂದಿಗೆ ಐದು ದಿನಗಳ ಕಾಲ ಯಾಗ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶತಚಂಡಿಕಾ ಯಾಗ ನಡೆಸಿರುವುದು ಎಂದು ಹೇಳಲಾಗುತ್ತಿದೆಯಾದರೂ ಯಡಿಯೂರಪ್ಪ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿರಿಸಿಕೊಂಡು ಯಾಗದ ಮೊರೆ ಹೋಗಿರುವ ಸಾಧ್ಯತೆಗಳಿವೆ. ಯಾರಿಗೂ ತಿಳಿಸದೇ, ಮಾಧ್ಯಮಗಳ ಕಣ್ಣು ತಪ್ಪಿಸಿ ಗುಟ್ಟಾಗಿ ನಡೆಸಿದ್ದ ಯಾಗದ ವಿಚಾರವು ಬುಧವಾರ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ಬಿಎಸ್‌ವೈ ಅವರನ್ನು ನಿದ್ದೆಗೆಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next