ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರೇ ಆಸೀಫ್ ರಿಂದ ಈ ದೂರು ದಾಖಲಿಸಿರಬಹುದು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಾವಮೈದ ಟಿ.ಜಿ.ಎರಿಸ್ವಾಮಿ ವಿರುದ್ದ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಆಸೀಫ್ ದೂರು ನೀಡಿರುವ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದೆ. ದೂರುದಾರ ಅಸೀಫ್ ನಮ್ಮ ಪಕ್ಷದ ಕಟ್ಟಾಳು. ಎರ‍್ರಿಸ್ವಾಮಿ-ಆಸೀಫ್ ಇಬ್ಬರೂ ಪರಮಾಪ್ತರಾಗಿದ್ದರು. ಇಬ್ಬರೂ ಸ್ನೇಹಿತರು ಎನ್ನುವುದಕ್ಕಿಂತ ಮಾವ-ಅಳಿಯನಂತೆ ಇದ್ದರು. ಆದರೆ, ಮೇಯರ್ ಸ್ಥಾನಕ್ಕಾಗಿ ಹಣ ಕೊಟ್ಟಿದ್ದಾರೆ ಎನ್ನುವ ಸುದ್ದಿಕೇಳಿ ನನಗೇ ದಿಗ್ಭ್ರಮೆಯಾಗಿದೆ ಎಂದು ತಿಳಿಸಿದ್ದಾರೆ.
ಪಾಲಿಕೆ ಸದಸ್ಯ ಆಸೀಫ್ ದೂರು ನೀಡಿರುವ ಬಗ್ಗೆ ತನಿಖೆ ನಡೆಸಿರುವೆ. ಆಸೀಫ್ ರನ್ನು ಬಿಜೆಪಿಗೆ ಸೆಳೆಯುವ ಸಲುವಾಗಿ, ಬಿಜೆಪಿಯ ಕೆಲ ನಾಯಕರು ಒತ್ತಡ ಹೇರಿ ದೂರು ಕೊಡಿಸಿದ್ದಾರೆ. ಎರ‍್ರಿಸ್ವಾಮಿ ನಮ್ಮ ಪಕ್ಷದ ಬಲಿಷ್ಠ ಶಕ್ತಿಯಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸುವಲ್ಲಿ ಅವರದ್ದು ದೊಡ್ಡ ಶಕ್ತಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಈ ರೀತಿ ಪ್ರಕರಣ ದಾಖಲಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಶಾಸಕ ಬಿ.ನಾಗೇಂದ್ರ ಇದು ತಂತ್ರಗಾರಿಕೆಯಲ್ಲ, ಕುತಂತ್ರಗಾರಿಕೆ. ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ಸೆಳೆಯಲು ಕುತಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿ ಸದಸ್ಯರಿಗೆ ಆಮಿಷವನ್ನೂ ಒಡ್ಡುತ್ತಿದ್ದಾರೆ. ಪಾಲಿಕೆ ಸದಸ್ಯರನ್ನು ಬೆದರಿಕೆ ಹಾಕಿ, ಹಳೆ ಪ್ರಕರಣಗಳನ್ನು ಓಪೆನ್ ಮಾಡುವುದಾಗಿ ಭಯಭೀತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಸದಸ್ಯರು, ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿಯವರ ಈ ಕುತಂತ್ರಕ್ಕೆ ನಮ್ಮ ಪಕ್ಷ ಬಗ್ಗಲ್ಲ ಎಂದ ಶಾಸಕ ಬಿ.ನಾಗೇಂದ್ರ, ನಮ್ಮ ಪಕ್ಷದ ನಾಯಕರು ಸಹ ನಮ್ಮ ಜೊತೆಗೆ ಇದ್ದಾರೆ. ನನ್ನ ವರ್ಚಸ್ಸು ಅಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ವರ್ಚಸ್ಸನ್ನು ಸಹ ಡ್ಯಾಮೇಜ್ ಮಾಡುವ ಪ್ರಯತ್ನಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.
ಹಣ ಪಡೆದಿದ್ದು ನೋಡಿದ್ದೀರಾ?: ಟಿ.ಜಿ.ಎರ‍್ರಿಸ್ವಾಮಿ, ಆಸೀಫ್ ಒಟ್ಟಾಗಿ ಸಾಕಷ್ಟು ವ್ಯವಹಾರಗಳನ್ನು ಮಾಡಿದ್ದಾರೆ. ಮೇಯರ್ ಸ್ಥಾನಕ್ಕೆ ಹಣ ಪಡೆದಿದ್ದಾರೆ ಎನ್ನವುದನ್ನು ನೀವು ನೋಡಿದ್ದೀರಾ ಎಂದು ಪ್ರಶ್ನಿಸಿದ ನಾಗೇಂದ್ರ, ಯಾವ ಮೂಲಕ ಹಣ ಕೊಟ್ಟಿದ್ದಾರೆ. ಹಣ ಪಡೆದಿದ್ದಕ್ಕೆ ಏನು ಸಾಕ್ಷಿಯಿದೆ? ಮೇಯರ್ ಸ್ಥಾನಕ್ಕೆ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ. ಆಸೀಫ್ ಅವರ ಕೆಲಸ ಸಮಸ್ಯೆಗಳ ಬಗ್ಗೆ ನಾನು ಅವರ ಮನೆಗೆ ಹೋಗಿ ಅವರ ಆತಂರಿಕ ವಿಚಾರ ಬಗೆಹರಿಸಿ ಬಂದಿದ್ದೇನೆ. ಒಂದು ವೇಳೆ ಮೇಯರ್ ಸ್ಥಾನಕ್ಕಾಗಿ ಹಣಕಾಸು ವಿಚಾರ ಬಂದಿದ್ದರೆ ನನ್ನ ಗಮನಕ್ಕೆ ಬರುತಿತ್ತು. ಆಸೀಫ್‌ಗೆ ತಪ್ಪಿನ ಅರಿವು ಆದ ಮೇಲೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಾವೂ ಆಸೀಫ್‌ರನ್ನು ಮೇಯರ್ ಮಾಡಬೇಕೆಂದಿತ್ತು. ಆದರೆ, ಮೀಸಲಾತಿ ಬದಲಾಯಿತು ಎಂದು ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.