Advertisement
ಇನ್ನೊಂದೆಡೆ. ಹರಿಪ್ರಸಾದ್ ಹೇಳಿಕೆಯನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳು ಟೀಕೆಗಿಳಿದಿವೆ. ಇದು ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂಬ ಆತಂಕ ಕಾಂಗ್ರೆಸ್‌ನಲ್ಲಿ ತಳಮಳ ಸೃಷ್ಟಿಸಿದೆ. ಮುಂಬರುವ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಮನೆ ಮಾಡಿದೆ. ಶನಿವಾರ ನಡೆದ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಹರಿಪ್ರಸಾದ್ ಆಡಿರುವ ಮಾತುಗಳು ಮಳೆ ನಿಂತರೂ ಹನಿ ನಿಲ್ಲಲ್ಲ ಎಂಬಂತೆ ಕ್ರಿಯೆಗೆ ಪ್ರತಿಕ್ರಿಯೆಗಳು ಬರುತ್ತಲೇ ಇವೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿರುವವರು. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ, ಹರಿಪ್ರಸಾದ್ ನಡೆ ಬಗ್ಗೆ ಪಕ್ಷ ಗಮನಿಸುತ್ತಿದ್ದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.
Related Articles
Advertisement
ಪಕ್ಷದ ಚೌಕಟ್ಟಿನಲ್ಲಿರಬೇಕುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸಮಾಜದ ಪರ ಹೋರಾಟ ಮಾಡುವುದು ತಪ್ಪಲ್ಲ, ಅದಕ್ಕೂ ಒಂದು ಮಿತಿ ಇರುತ್ತದೆ. ಯಾರೇ ಇದ್ದರೂ ಪಕ್ಷದ ಶಿಸ್ತು ಮತ್ತು ಚೌಕಟ್ಟಿನ ಒಳಗೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಕೂಡ ಹರಿಪ್ರಸಾದ್ ಅವರಂತಹ ನಾಯಕರು ಈ ರೀತಿ ಹೇಳಿಕೆ ಕೊಡಬಾರದಿತ್ತು. ಪಕ್ಷ ಬಹಳ ಕಷ್ಟಪಟ್ಟು ಅಧಿಕಾರಕ್ಕೆ ಬಂದಿದೆ. ಸಾಮಾಜಿಕ ನ್ಯಾಯ ಇರುವುದೇ ಕಾಂಗ್ರೆಸ್‌ನಲ್ಲಿ, ಸಾಮಾಜಿಕ ನ್ಯಾಯವೇನೂ ಕಡಿಮೆ ಆಗಿಲ್ಲ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ದೂರು ಕೊಡಲಿ ಸಂತೋಷ
ನನ್ನ ವಿರುದ್ದ ಸುರ್ಜೆವಾಲಾಗೆ ದೂರು ಕೊಟ್ಟರೆ ಬಹಳ ಸಂತೋಷ. ನನ್ನ ವಿರುದ್ದ ದೂರು ಕೊಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಲಿ ಎಂದು ಬಿ.ಕೆ. ಹರಿಪ್ರಸಾದ್ ಮತ್ತೆ ಸ್ವಪಕ್ಷದವರ ವಿರುದ್ಧ ಗುಡುಗಿದ್ದಾರೆ. ಕೊಪ್ಪಳದ ಕುಕನೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ದ ಮೊನ್ನೆ ಮಾತನಾಡಿದ್ದೆ, ಈಗಲ್ಲ. ನನ್ನ ವಿರುದ್ಧ ದೂರು ಕೊಟ್ಟಿರುವ ಶಾಸಕ ನಂಜೇಗೌಡ ಮೊದಲು ತಾವೇನೆಂದು ತಿಳಿಯಲಿ. ಅವರ ಮೇಲೆ ಕೆಲವು ಹಗರಣಗಳಿವೆ. ಆ ಹಗರಣಗಳಿಂದ ಬಚಾವಾಗಲು ಮಾತನಾಡಿದ್ದಾರೆ. ಅವರಿಗೆ ಪಾರಾಗುವೆ ಎನ್ನುವ ಧೈರ್ಯ ಇದ್ದರೆ ನನ್ನ ಬಗ್ಗೆ ಹೇಳುತ್ತಲೇ ಇರಲಿ ಎಂದಿದ್ದಾರೆ. ಜತೆಗೆ ನನ್ನ ಬಗ್ಗೆ ಮಾತನಾಡುವ ಎಚ್.ವಿಶ್ವನಾಥ ಯಾವ ಪಕ್ಷದಲ್ಲಿ ಇದ್ದಾರಂತೆ ಎಂದು ಕಿಡಿಕಾರಿದರು. ಖರ್ಗೆ ಕರೆ, ಮೌನಕ್ಕೆ ಸಲಹೆ
ಹರಿಪ್ರಸಾದ್ ಆಡಿರುವ ಮಾತುಗಳ ಬಗ್ಗೆ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುಜೇìವಾಲ ಅವರ ಗಮನಕ್ಕೆ ತಂದು ಸರ್ಕಾರದ ಆರಂಭದಲ್ಲೇ ಈ ರೀತಿಯ ವರ್ತನೆ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಹೈಕಮಾಂಡ್ ಮುಂದಾಗಿದೆ. ಸ್ವತಃ ಖರ್ಗೆ ಅವರು ಹರಿಪ್ರಸಾದ್‌ಗೆ ಕರೆ ಮಾಡಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ. ಕೆಲಕಾಲ ಮೌನವಹಿಸುವಂತೆಯೂ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ. ದಿಲ್ಲಿಗೆ ಶಿಫ್ಟ್ ?
ಹರಿಪ್ರಸಾದ್ ಅವರು ರಾಜ್ಯದಲ್ಲಿಯೇ ಇದ್ದರೆ ಸದಾ ಕಾಲ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡಬಹುದೆಂದು ಭಾವಿಸಿರುವ ಸ್ಥಳೀಯ ನಾಯಕರು, ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಕೆಲಸ ಕೊಡುವಂತೆ ಸಲಹೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ದಿಲ್ಲಿ ರಾಜಕಾರಣವನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಹರಿಪ್ರಸಾದ್ ಅವರು ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಮತ್ತೆ ದಿಲ್ಲಿಗೆ ಶಿಫ್ಟ್ ಮಾಡುವ ಆಲೋಚನೆಯೂ ನಡೆದಿದೆ.