ಕಾರವಾರ: ಭಯೋತ್ಪಾದಕರಿಗೆ ಬೆಂಬಲ ಕೊಡುವಂತಹ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಉಗ್ರವಾದಿಗಳನ್ನು ಸಾಕುತ್ತಿರುವವರೇ ಬಿಜೆಪಿಯವರು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಾರವಾರದಲ್ಲಿ ಆರೋಪಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯವರು ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು. ಮಂಗಳೂರು ಕುಕ್ಕರ್ ಬ್ಲ್ಯಾಸ್ಟ್ ಪ್ರಕರಣದಲ್ಲಿ ಪೊಲೀಸ್ ತನಿಖೆಗೂ ಮೊದಲೇ ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಯಾವ ತನಿಖೆ ಆಧರಿಸಿ ಬಿಜೆಪಿಯವರು ಅದನ್ನ ಭಯೋತ್ಪಾದಕ ಕೃತ್ಯ ಎಂದರು ಎಂಬುದನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದರು. ಬಹುತೇಕ ಕರ್ನಾಟಕದ ಜನರಿಗೂ ಈ ಪ್ರಶ್ನೆ ಇದೆ. ಉಗ್ರವಾದಿಗಳನ್ನ ಸಾಕುತ್ತಿರುವುದು ಬಿಜೆಪಿಯವರೇ ಎಂದರು.
ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಇಲ್ಲವಲ್ಲ ಎಂಬ ಪ್ರಶ್ನೆಗೆ , ಪ್ರತಿಕ್ರಿಯೆ ನೀಡಿದ ಅವರು, ನಾವೂ 40 ಪರ್ಸೆಂಟ್ ಕಮಿಷನ್ ಹೊಡ್ದಿದ್ರೆ ಎಲ್ಲಾ ಕಡೆ ನಮ್ಮ ಕಚೇರಿ ಇರುತ್ತಿತ್ತು. 40 ಪರ್ಸೆಂಟ್ ಕಮಿಷನ್ ಚರ್ಚೆ ದಿಕ್ಕುತಪ್ಪಿಸಲು ಕುಕ್ಕರ್ ಬ್ಲ್ಯಾಸ್ಟ್, ಓಟರ್ಸ್ ಹಗರಣ ತಂದಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದ್ರೆ ಅಂತಹವರನ್ನು ಜೈಲಿಗೆ ಹಾಕಿ. ಡಬ್ಬಲ್ ಎಂಜಿನ್ ಸರ್ಕಾರ ಇದೆ. ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಿ ಎಂದರು.
ಗಡಿ, ರಾಷ್ಟ್ರ ಬಿಜೆಪಿಯವರ ಪಿತ್ರಾರ್ಜಿತ ಆಸ್ತಿಯಲ್ಲ ಎಂದ ಅವರು ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಇದ್ದರೂ, ವಿವಾದ ಬಗೆಹರಿಸುವ ಕೆಲಸವಾಗುತ್ತಿಲ್ಲ ಎಂದು ಹರಿಪ್ರಸಾದ್ ಕಿಡಿಕಾರಿದರು. ಸರ್ವಪಕ್ಷ ಸಭೆ ಕರೆಯದೇ ಗೃಹಸಚಿವರು ಮಾತ್ರ ಚರ್ಚೆ ಮಾಡಿದ್ದಾರೆ. ಯಾವುದೇ ವಿಚಾರ ಬಂದ್ರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೊಂದೇ ಬಿಜೆಪಿ ಕೆಲಸ. ಆದರೆ ಬಿಜೆಪಿ ಏನು ಮಾಡಿದೆ ಅನ್ನೋದನ್ನ ಹೇಳುವುದಿಲ್ಲ ಎಂದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಎಸ್‌ಐಎಯಿಂದ ಜಮಾತ್-ಎ-ಇಸ್ಲಾಮಿಯ ಹೆಚ್ಚಿನ ಆಸ್ತಿಗಳ ಜಪ್ತಿ