ಕುಂದಾಪುರ: ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಗಳನ್ನು ಪಾಲಿಸಿ, ಜಾತಿ, ಧರ್ಮ, ಭಾಷೆ ರಹಿತವಾದ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಪಕ್ಷವು ಅಧಿಕಾರಕ್ಕಾಗಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಪೊಲೀಸ್, ಶಿಕ್ಷಕರ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಏನೂ ನಡೆದೇ ಇಲ್ಲದಂತಿರುವ ಸರಕಾರಕ್ಕೆ ಜನ ಮುಂಬರುವ ಚುನಾವಣೆಯಲ್ಲಿ ಉತ್ತರಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಬುಧವಾರ ಸಂಜೆ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಕುಂದಾಪುರ – ಗಂಗೊಳ್ಳಿ ಸೇತುವೆ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಈವರೆಗೆ ಅಧಿಕಾರದಲ್ಲಿದ್ದವರು ಮಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಈ ಬೇಡಿಕೆ ಈಡೇರಲಿದೆ. ಇನ್ನು ಕುಂದಗನ್ನಡ ಭಾಷಾ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಅಧ್ಯಯನಕ್ಕೆ ಅನುಕೂಲವಾಗುವ ಕಾರ್ಯವನ್ನು ಮಾಡಲಾಗುವುದು ಎಂದವರು ಭರವಸೆ ನೀಡಿದರು.
ಬಿಜೆಪಿ ಸಾಧನೆ ಇದು
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯಾಗಿದ್ದರೂ ಪರೇಶ್ ಮೇಸ್ತ ಕೊಲೆಯೆಂದು ಬಿಂಬಿಸಿ, ಅಪಪ್ರಚಾರ ಮಾಡಿದ್ದರಿಂದ ನಾನು ಸೋಲುವಂತಾಯಿತು. ಕಾಂಗ್ರೆಸ್ ಶೇ. 89ರಷ್ಟು ಜನರಿಗೆ ಪಡಿತರ ಕಾರ್ಡ್ ನೀಡಲಾಗಿದ್ದರೆ, ಈಗ ಶೇ. 60ರಷ್ಟು ಜನರಿಗೆ ಇಳಿಸಿರುವುದು ಬಿಜೆಪಿ ಸಾಧನೆ. ಪಶು ಸಂಗೋಪನೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ಚರ್ಮಗಂಟು ರೋಗದಿಂದ ದನಗಳು ಸಾಯುತ್ತಿವೆ. ನಿಮ್ಮ ನಿಜವಾದ ಗೋರಕ್ಷಣೆ ಇದೆಯೇ ಎನ್ನುವುದಾಗಿ ಪ್ರಶ್ನಿಸಿದರು.
ಎಐಸಿಸಿ ಕಾರ್ಯದರ್ಶಿ ರೋಝಿ ಎಂ. ಜಾನ್, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಂದಾಪುರದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರಿನ ಮದನ್ ಕುಮಾರ್, ಕೋಟದ ಶಂಕರ್ ಕುಂದರ್, ಮುಖಂಡರಾದ ಎಸ್. ರಾಜು ಪೂಜಾರಿ, ದಿನೇಶ್ ಪುತ್ರನ್, ಅಲೆವೂರು ಹರೀಶ್ ಕಿಣಿ, ಬಿ. ಹೆರಿಯಣ್ಣ, ದೇವಕಿ ಸಣ್ಣಯ್ಯ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸುರೇಂದ್ರ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಶ್ಯಾಮಲಾ ಭಂಡಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ, ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ, ಸದಾನಂದ ಶೆಟ್ಟಿ ಕೆದೂರು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ರೋಷನ್ ಕುಮಾರ್ ಶೆಟ್ಟಿ, ಶೇಖರ ಪೂಜಾರಿ ಬೈಂದೂರು, ಗಣೇಶ್, ಸೌರಭ್ ಬಲ್ಲಾಳ್, ಇಚ್ಚಿತಾರ್ಥ್ ಶೆಟ್ಟಿ, ಮುನಾಫ್ ಕೋಡಿ, ಸುಜನ್ ಶೆಟ್ಟಿ ಉಪಸ್ಥಿತರಿದ್ದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾವನೆಗೈದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು ಸ್ವಾಗತಿಸಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.