ಬೆಳ್ತಂಗಡಿ: ಶಿಕ್ಷಣ ಹಂತದ ಅನೇಕ ಪದವಿಗಳು ಜ್ಞಾನದ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸಿದರೆ ಉದ್ಯೋಗ ಹಾಗೂ ಸ್ವೋದ್ಯೋಗ ಬದುಕಿನ ಸಾಮರ್ಥ್ಯ ನಿರ್ಧರಿಸುವಂತಹದು. ಹಿಂದೆ ಹೈನುಗಾರಿಕೆ ದಿನನಿತ್ಯದ ಭಾಗವಾಗಿತ್ತು. ಇದೀಗ ಮಹಾತ್ಮಾ ಗಾಂಧಿ ನರೇಗಾ ಉದ್ಯೋಗ ಖಾತ್ರಿಯಿಂದಾಗಿ ಆಡು, ಹಂದಿ, ಕೋಳಿ ಸಾಕಣೆಗೆ ನೀಡುತ್ತಿರುವ ಪ್ರೋತ್ಸಾಹದಿಂದ ತಾಲೂಕಿನಲ್ಲಿ ಅನೇಕರು ಆಸಕ್ತಿ ತೋರುವಂತಾಗಿದೆ.
ನಡ ಗ್ರಾಮದ ಪಣೆಕ್ಕಲದ ಬಿ.ಕಾಂ. ಪದವೀಧರ ನಡ ಗ್ರಾಮದ ಕೃಷಿಕ ಡೆನಿಸ್ ಮೋನಿಸ್ ಅವರ ಪುತ್ರ ವಿಲ್ಸನ್ ಮೋನಿಸ್ ಸುಮಾರು 15 ವರ್ಷಗಳಿಂದ ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು ಅಲ್ಲಿ ಕೆಲಸಕ್ಕೆ ಗುಡ್ ಬೈ ಹೇಳಿ ತನ್ನೂರತ್ತ ಮುಖ ಮಾಡಿದಾಗ ಸೊÌàದ್ಯೋಗ ಮಾಡಲು ಸಹಾಯವಾದದ್ದು ಮಹಾತ್ಮಾ ಗಾಂಧಿ ನರೇಗಾ ಯೋಜನೆ.
ಎರಡು ಎಕ್ರೆ ಕೃಷಿ ಭೂಮಿ ಹೊಂದಿರುವ ಇವರು ಆರಂಭದಲ್ಲಿ ಕೂಡಿಟ್ಟ 2 ಲಕ್ಷ ರೂ. ಮೊತ್ತದೊಂದಿಗೆ ನರೇಗಾ ಸಹಾಯದಿಂದ ಶೆಡ್ ನಿರ್ಮಿಸಿದರು. ಕಡಬ ತಾಲೂಕಿನ ಕೊಯ್ಲ ಪಶು ಸಂಗೋಪನಾ ಮತ್ತು ಜಾನುವಾರು ಸಂವರ್ಧನ ಕೇಂದ್ರದಿಂದ ಒಂದು ಹಂದಿಗೆ 3,500 ರೂ. ನಂತೆ 11 ಯಾರ್ಕ್ ಶೇರ್ ತಳಿಯ ಹಂದಿ ಮರಿಗಳನ್ನು ಆರಂಭದಲ್ಲಿ ತಂದಿದ್ದರು. ಇದು ಕೆ.ಜಿ.ಗೆ ಸುಮಾರು 120 ರಿಂದ 140 ರೂ.ಗೆ ಮಾರಾಟವಾಗುವುದರಿಂದ ಹೆಚ್ಚಾಗಿ ಬೇಡಿಕೆಯಿದೆ. ಹಾಗಾಗಿ ಇದೊಂದು ಉಪ ಕಸುಬಾಗಿ ವಿಲ್ಸನ್ ಅವರಿಗೆ ವರದಾನವಾಗಿದೆ. ತಾಲೂಕಿನಲ್ಲಿ ಈವರೆಗೆ 2019-20 ರಿಂದ ಈವರೆಗೆ 119 ಕೋಳಿ ಶೆಡ್, 29 ಹಂದಿ ಶೆಡ್, 50 ಆಡು ಶೆಡ್, 1241 ದನದ ಶೆಡ್ ಗಳಿಗೆ ನರೇಗಾದಿಂದ ಕೂಲಿ ಪಾವತಿಸಲಾಗಿದೆ.
ನರೇಗಾ ಪ್ರೋತ್ಸಾಹ: ನರೇಗಾದಿಂದ ಈಗಾಗಲೆ ಕೂಲಿ ರೂಪದಲ್ಲಿ ಅನೇಕ ಯೋಜನೆಗಳಡಿ ಅನುದಾನ ನೀಡಲಾಗುತ್ತಿದೆ. ನಡ ಗ್ರಾಮದ ವಿಲ್ಸನ್ ಮೋನಿಸ್ ಅವರಿಗೆ ಶೆಡ್ ನಿರ್ಮಾಣಕ್ಕೆ 13,120 ರೂ. ಕೂಲಿ ಪಾವತಿಯಾಗಿದೆ. ಇದೇ ರೀತಿ ತಾಲೂಕಿನಲ್ಲಿ ದನದ ಕೊಟ್ಟಿಗೆ, ಆಡು ಸಾಕಣೆ ಸೇರಿದಂತೆ ಅನೇಕ ರೀತಿಯಲ್ಲಿ ಉಪಕಸುಬು ನಡೆಸಲು ನರೇಗಾ ಆಧಾರವಾಗಿದೆ. –
ಕುಸುಮಾಧರ್ ಬಿ., ಇ.ಒ., ತಾ.ಪಂ., ಬೆಳ್ತಂಗಡಿ
ಆಡು ಸಾಕಾಣೆಗೆ ಚಿಂತನೆ: ಆರಂಭದಲ್ಲಿ 11 ಹಂದಿ ಮರಿ ಗಳೊಂದಿಗೆ ಹಂದಿ ಸಾಕಾಣೆ ಕೈಗೆತ್ತಿಕೊಂಡೆ. ಅದರಲ್ಲಿ ಒಂದು ಹಂದಿ 8 ಮರಿ ಹಾಗೂ ಮತ್ತೂಂದು 7 ಮರಿ ಸೇರಿ 15 ಹಂದಿ ಮರಿಗಳಾಗಿವೆ. ಆರಂಭದಲ್ಲಿ ತಂದಿದ್ದ 9 ಹಂದಿಗಳನ್ನು ಈಗಾಗಲೆ ಮಾರಾಟ ಮಾಡಲಾಗಿದೆ. ಮುಂದೆ ಆಡು ಸಾಕಾಣೆಗೆ ಚಿಂತಿಸಲಾಗಿದೆ. –
ವಿಲ್ಸನ್ ಮೋನಿಸ್, ನಡ