ಬಂಟ್ವಾಳ: ದೇಶದ ಚರಿತ್ರೆಯಲ್ಲಿ ವೀರ ರಾಣಿ ಅಬ್ಬಕ್ಕನ ಪಾತ್ರ ವಿಶಿಷ್ಟವಾಗಿದ್ದು, ಆಕೆ ಯುವ ಜನಾಂಗಕ್ಕೆ ಆದರ್ಶ. ಆಕೆಯನ್ನು ದೇಶದ ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯವನ್ನು ಆಡಳಿತ ವ್ಯವಸ್ಥೆ ಮಾಡಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಹೇಳಿದರು.
ಅವರು ಶುಕ್ರವಾರ ಬಿ.ಸಿ. ರೋಡಿನ ಸಂಚಯಗಿರಿಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯದ ಚಂದ್ರಮ ಕಲಾ ಮಂದಿರದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.
ಬಹು ಪ್ರಾಚೀನವಾಗಿರುವ ತುಳು ಭಾಷೆಯ ಕುರಿತು ಇನ್ನೂ ಹೆಚ್ಚಿನ ಅಧ್ಯಯನ, ಲಿಪಿಯ ಬೆಳವಣಿಗೆ ಅತೀ ಅಗತ್ಯವಾಗಿದೆ. ತುಳು ಭಾಷೆ, ಅಬ್ಬಕ್ಕನ ವಿಚಾರವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕೇಂದ್ರ ಸ್ಥಾಪಿಸಿರುವ ಪ್ರಯತ್ನ ಅದ್ಭುತವಾದುದು ಎಂದರು.
ಬೆಂಗಳೂರಿನ ಚಾರ್ಟರ್ಡ್ ಹೌಸಿಂಗ್‌ನ ಏರ್ಯ ಬಾಲಕೃಷ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತುಳುನಾಡಿನ ವೀರ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಇಂತಹ ಕೇಂದ್ರ ಸ್ಥಾಪಿಸಿರುವ ಸಾಹಸ ಮೆಚ್ಚುವಂಥದು ಎಂದು ಮುಖ್ಯ ಅತಿಥಿ ಹೊಸದಿಲ್ಲಿ ಭಾರತೀಯ ಜೈನ್ ಮಿಲನ್‌ನ ಉಪಾಧ್ಯಕ್ಷೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ್ ಶ್ಲಾಘಿಸಿದರು.
ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಮ್ ಪೂಜಾರಿ ಅವರು ಸ್ವಾಗತದೊಂದಿಗೆ ಪ್ರಸ್ತಾವಿಕವಾಗಿ ಮಾತನಾಡಿದರು.
ಕೇಂದ್ರದ ಕಾರ್ಯದರ್ಶಿ ಡಾ| ಆಶಾಲತಾ ಎಸ್.ಸುವರ್ಣ ವಂದಿಸಿದರು. ಡಾ| ಆರ್. ನರಸಿಂಹಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.