ಬೆಂಗಳೂರು: ರೈತರಿಗೆ ಯಾವುದೇ ಕಾರಣಕ್ಕೂ ನಕಲಿ ಬೀಜ, ನಕಲಿ ಗೊಬ್ಬರ ಪೂರೈಕೆ ಆಗಲೇಬಾರದು. ಇಲಿ ಹಿಡಿಯುವುದಕ್ಕಿಂತ ಹುಲಿಯನ್ನು ಹಿಡಿಯಬೇಕು. ನಕಲಿ ಜಾಲದ ಬುಡವನ್ನೇ ಕತ್ತರಿಸಿ ಹಾಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಕೃಷಿ ವಿಚಕ್ಷಣಾ ದಳ (ಜಾಗೃತ ಕೋಶ)ವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದರು.
ಬಿತ್ತನೆ ಚುರುಕುಗೊಳ್ಳುತ್ತಿದ್ದು, ಕಾಳಸಂತೆ ಮಾರಾಟಗರರು ರೈತರಿಗೆ ಮೋಸ ಮಾಡಲೆಂದೇ ನಕಲಿ ಬೀಜ ನಕಲಿ ಗೊಬ್ಬರ ಮಾರಾಟಗಾರರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇಂತವರ ಮೇಲೆ ಕೃಷಿ ವಿಚಕ್ಷಣಾ ದಳ ಹದ್ದಿನ ಕಣ್ಣು ಸದಾ ಜಾಗೃತಗೊಳಿಸಿರಬೇಕು. ಜಾಗೃತ ಕೋಶ ಸದಾ ಎಚ್ಚರಿಕೆಯಿಂದಿರಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತಾಗದೇ ನಕಲಿ ಜಾಲದ ಮೂಲವನ್ನೇ ನಾಶಪಡಿಸಬೇಕು. ಬರೀ ಚಾರ್ಜ್ ಶೀಟ್ ಹಾಕಿ ಸುಮ್ಮನಾದರೆ ಸಾಲದು. ನಕಲಿಕೋರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಕಂಪೆನಿ ಇರಲಿ ಅದು ಎಷ್ಟೇ ಹೆಸರು ಮಾಡಿರಲಿ, ಆ ಕಂಪೆನಿ ರೈತರಿಗೆ ಮಾರುವ ಉತ್ಪನ್ನ, ಬೀಜ, ಗೊಬ್ಬರ ಅಧಿಕೃತವಾಗಿರಲೇಬೇಕು. ಎಲ್ಲಾ ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಹೊಂದಿರಲೇಬೇಕು. ಯಾವುದೋ ಒಂದಕ್ಕೆ ಪರವಾನಿಗೆ ಪಡೆದು ಅದರ ಹೆಸರಿನಲ್ಲಿ ಮತ್ತೊಂದು ಉತ್ಪನ್ನ ಮಾರಾಟ ಮಾಡಿದರಾಯಿತು ಎನ್ನುವುದನ್ನು ತಪ್ಪಿಸಬೇಕು. ಇಂತಹ ಕಂಪೆನಿಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ನೊಟೀಸ್ ನೀಡಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಿಗದಿತ ಸೂಚಿತ ಪ್ರದೇಶಗಳಲ್ಲಿ ಸೂಚಿಸಿದ ಕಂಪೆನಿ ಮಾರಾಟಗಾರರು ಮಾತ್ರ ಕೃಷಿ ಉತ್ಪನ್ನ, ಬೀಜ ಗೊಬ್ಬರ ಪರವಾನಿಗೆಯುತವಾಗಿ ಮಾರಾಟ ಮಾಡಬೇಕು. ರೈತರಿಗೆ ಇಂತವರಿಂದ ಮೋಸವಾದ ಮೇಲೆ ಎಚ್ಚೆತ್ತುಕೊಂಡು ಪರಿಹಾರ ನೀಡುವುದಕ್ಕಿಂತ ರೈತರಿಗೆ ಅನ್ಯಾಯವಾಗುವ ಮೊದಲೇ ಕೃಷಿ ವಿಚಕ್ಷಣಾ ದಳ ಸನ್ನದ್ಧವಾಗಿರಬೇಕು ಎಂದರು.
ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಬಲಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಚಕ್ಷಣಾ ದಳದ ಕಚೇರಿಯನ್ನು ವಿಸ್ತರಿಸಲಾಗಿದ್ದು, ಹೊಸದಾಗಿ ಮೈಸೂರು ಹಾಗೂ ಕಲಬುರಗಿಯಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿಯನ್ನು ಆರಂಭಿಸಲಾಗುವುದು. ಮುಂದಿನ ಜುಲೈ 5 ರಂದು ಮೈಸೂರಿನಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.