ಚಿತ್ರದುರ್ಗ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ನೆರೆ ಬರುತ್ತದೆ. ಉಳಿದವರು ಮುಖ್ಯಮಂತ್ರಿಯಾದರೆ ಬರ ಬರುತ್ತದೆ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್ ಹೇಳಿದರು.
ಸಿರಿಗೆರೆ ತರಳಬಾಳು ಬೃಹನ್ಮಠದ ಲಿಂಗೈಕ್ಯ ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ಬಿ.ಸಿ. ಪಾಟೀಲ್ ಮಾತನಾಡಿದರು.
ಕಳೆದ ವರ್ಷ ಸಿರಿಗೆರೆಗೆ ಬಂದಾಗ ಜನ ನನ್ನ ಕಾರು ಅಡ್ಡಗಟ್ಟಿ ಬಿಜೆಪಿ ಸೇರಿ ಎಂದಿದ್ದರು. ಆಗ ನನಗೆ ಅರ್ಥ ಆಗಿರಲಿಲ್ಲ. ಆದರೆ, ಈಗ ಗೊತ್ತಾಗಿದೆ. ನಿಮ್ಮ ಪ್ರೇರೇಪಣೆಯಿಂದ ಇಂದು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತನಾಗಿ ಬಂದಿದ್ದೇನೆ ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾನು ಕಳೆದುಕೊಂಡಿದ್ದು ಏನೂ ಇಲ್ಲ. ಪಡೆದುಕೊಂಡಿದ್ದೇನೆ. ಎರಡೇ ತಿಂಗಳಲ್ಲಿ ನನ್ನ ಕ್ಷೇತ್ರಕ್ಕೆ 220 ಕೋಟಿ ರೂ. ಅನುದಾನ ಬಂದಿದೆ. 170 ಕೆರೆಗಳಿಗೆ ನೀರು ಹರಿಸಲು 185 ಕೋಟಿ ರೂ. ಕೊಟ್ಟಿದ್ದಾರೆ. ರಸ್ತೆ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆ ಆಗಿದೆ.
ನಾನು ರಾಜಿನಾಮೆ ಕೊಟ್ಟಾಗ 50 – 100 ಕೋಟಿ ಪಡೆದುಕೊಂಡಿದ್ದಾರೆ ಎಂದು ಸುದ್ದಿಯಾಯಿತು. ಆದರೆ, ಜನರ ಆದೆಶ ಪಾಲಿಸಿ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಲು ಕಾರಣನಾಗಿದ್ದೇನೆ ಎಂದು ತಿಳಿಸಿದರು.
ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ, ಇದ್ದಾಗ ನಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಬೇಕು. ಎಲ್ಲ ಜಾತಿಯ 17 ಶಾಸಕರು ರಾಜಿನಾಮೆ ಕೊಟ್ಟಿದ್ದೇವೆ. ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಭಯ ಇಲ್ಲ. ಆದರೆ, ಅರ್ಹರನ್ನು ಮಾಡುವ ಶಕ್ತಿ ಜನರಲ್ಲಿದೆ ಎಂದರು.