ಕುಂದಾಪುರ: ಕುಂದಾಪುರ ಕನ್ನಡ ಅಕಾಡೆಮಿ ರಚನೆ ಕುರಿತಂತೆ ಯಾವುದೇ ಅಧ್ಯಯನವನ್ನಾಗಲಿ, ಈ ಭಾಗದ ಜನಪ್ರತಿನಿಧಿಗಳ ಜತೆ ಸಮಾಲೋಚನೆಯನ್ನಾಗಲಿ ನಡೆಸದ ಸಚಿವ ಸುನಿಲ್ ಕುಮಾರ್ ಪದತ್ಯಾಗ ಮಾಡಲಿ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಅತ್ಯಂತ ಕಡಿಮೆ ಪ್ರಮಾಣದ ಜನರು ಮಾತನಾಡುವ ಭಾಷೆಗೆ ಅಕಾಡೆಮಿಗಳಿವೆ. ಹಾಗಿದ್ದರೂ 25-30 ಲಕ್ಷ ಜನ ಮಾತಾಡುವ ಕುಂದಾಪ್ರ ಕನ್ನಡವನ್ನು ಅವಗಣಿಸಿದ್ದು ಇಲ್ಲಿಗೆ ಮಾಡಿದ ಅವಮಾನ. ಹೇಳಿಕೆ ಕೊಡುವ ಮೊದಲು ಯೋಚಿಸಬೇಕಿತ್ತು. ರಾಜ್ಯದ ವಿವಿಧ ಗಡಿಭಾಗಗಳಲ್ಲಿ ನೆರೆರಾಜ್ಯದ ಭಾಷೆಗಳ ಪ್ರಭಾವವಿರುವ ಕನ್ನಡ ಮಾತಾಡುತ್ತಾರೆ. ಆದರೆ ಕುಂದಾಪ್ರ ಕನ್ನಡ ಅಂತಹ ಯಾವುದೇ ಅನ್ಯಭಾಷಾ ಪ್ರಭಾವವನ್ನು ಹೊಂದಿಲ್ಲ ಎಂದರು.
ಭಾಷಾ ಸಂಶೋಧನೆಗಾಗಿ ಅಕಾಡೆಮಿ ಬೇಕು. ಲಕ್ಷ್ಮೇಶ್ವರದಲ್ಲಿ ದೊರೆತ ಶಿಲಾಶಾಸನದಲ್ಲೂ ಕುಂದಾಪ್ರ ಕನ್ನಡ ಇದೆ. ಹಳೆಗನ್ನಡದ ಅನೇಕ ಪದಗಳು ಇಂದಿಗೂ ಉಳಿದುದು ಕುಂದಾಪ್ರ ಕನ್ನಡದಲ್ಲಿ. ಕುಂದಗನ್ನಡ ಅಧ್ಯಯನ ಪೀಠ ಮಂಗಳೂರು ವಿ.ವಿ.ಯಲ್ಲಿ ರಚನೆಯಾಗಿದ್ದರೂ ಅನುದಾನವೂ ಇಲ್ಲ, ಅನುಷ್ಠಾನವೂ ಇಲ್ಲ ಎಂದಾಗಿದೆ. ಈಗ ಅಕಾಡೆಮಿಯೂ ಇಲ್ಲ ಎನ್ನುವ ಮೂಲಕ ನಮ್ಮನ್ನು ಕಡೆಗಣಿಸಲಾಗಿದೆ. ನಮಗೆ ನ್ಯಾಯ ದೊರೆಯದೇ ಹೋದರೆ ಹೋರಾಟ ಸಿದ್ಧ ಎಂದಿದ್ದಾರೆ.
ಕಸಾಪ ಅಧ್ಯಕ್ಷ ಡಾ| ಉಮೇಶ್ ಪುತ್ರನ್, ಕುಂದಪ್ರಭ ಸಂಸ್ಥೆಯ ಯು.ಎಸ್. ಶೆಣೈ, ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ರತ್ನಾಕರ ಶೆಟ್ಟಿ, ಗಣಪತಿ ಶ್ರೀಯಾನ್, ವೆಂಕಟೇಶ ಪೈ ಉಪಸ್ಥಿತರಿದ್ದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರು ಶೂನ್ಯವೇಳೆಯಲ್ಲಿ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿದ್ದರು. ಬುಧವಾರ ಪರಿಷತ್‌ನಲ್ಲಿ ಬಿ.ಕೆ.ಹರಿಪ್ರಸಾದ್ ಕೂಡಾ ಅಕಾಡೆಮಿ ರಚನೆಗೆ ಬೆಂಬಲ ನೀಡಿದ್ದರು. ಆದರೆ ಸಚಿವರು, ಕರ್ನಾಟಕದಲ್ಲಿ ಕಲಬುರಗಿ ಭಾಗದ ಕನ್ನಡ, ಧಾರವಾಡ ಭಾಗದ ಕನ್ನಡ, ಮೈಸೂರು ಭಾಗದಲ್ಲಿ ಆಡುವ ಕನ್ನಡ, ಕರಾವಳಿ ಭಾಗದ ಕನ್ನಡ, ಮಧ್ಯ ಕರ್ನಾಟಕದ ಕನ್ನಡ ಭಾಷೆಯಲ್ಲಿ ವ್ಯತ್ಯಾಸಗಳಿವೆ.
ಭಾಷಾ ವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು
ಲಿಖೀತ ಉತ್ತರ ನೀಡಿದ್ದರು.