ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷರನ್ನಾಗಿ ಅಜೀಜುಲ್ಲಾ ಫಜ್ಲಿ ಅವರನ್ನು ಮತ್ತೆ ನೇಮಕ ಮಾಡಲಾಗಿದೆ. 2018ರ ಸಪ್ಟೆಂಬರ್ ನಿಂದ ಜುಲೈ 2019ರವರೆಗೆ ಫಾಜಿಲ್ ಅಧ್ಯಕ್ಷರಾಗಿದ್ದರು. ಈಗ ಮತ್ತೆ ನೇಮಕ ಮಾಡಲಾಗಿದೆ.
2019ರ ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ಥಾನ ತಂಡ ಕೊನೆಯ ಸ್ಥಾನ ಪಡೆದ ಬಳಿಕ ಫಜ್ಲಿ ಬದಲಿಗೆ ಫರ್ಹಾನ್ ಯೂಸುಫ್ ಝಾಯ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು. ಕಾಬೂಲ್ ನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ವಾರದೊಳಗೆ ಫಾಜಿಲ್ ಮರುನೇಮಕವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
“ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಅಜೀಜುಲ್ಲಾ ಫಜ್ಲಿ ಅವರನ್ನು ಎಸಿಬಿಯ ಹಂಗಾಮಿ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಗಿದೆ. ಮುಂಬರುವ ಸರಣಿಗೆ ಅವರು ಎಸಿಬಿಯ ನಾಯಕತ್ವ ಮತ್ತು ಮುಂದಿನ ಕ್ರಮಗಳನ್ನು ನೋಡಿಕೊಳ್ಳುತ್ತಾರೆ” ಎಂದು ಎಸಿಬಿ ಟ್ವೀಟ್ ಮಾಡಿದೆ.
ಪಾಕಿಸ್ತಾನದ ವಿರುದ್ಧದ ನಿಗದಿತ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾಗೆ ಸುರಕ್ಷಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಅವರ ಮುಂದಿರುವ ಒಂದು ಸವಾಲಾಗಿದೆ.
ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ನಡುವಿನ ಏಕದಿನ ಸರಣಿ ಸೆಪ್ಟೆಂಬರ್ 3 ರಿಂದ ಆರಂಭವಾಗಲಿದೆ. ಶ್ರೀಲಂಕಾ ಈ ಸರಣಿಗೆ ಆತಿಥ್ಯ ವಹಿಸಿದ್ದು, ಸರಣಿಯ ಎಲ್ಲಾ ಮೂರು ಪಂದ್ಯಗಳು ಹಂಬಂತೋಟದಲ್ಲಿ ನಡೆಯಲಿದೆ.