ಶ್ರೀನಗರ: ಭಾರತ ದೇಶದಲ್ಲಿರುವ ಪ್ರತಿಯೊಬ್ಬರು ಆರಂಭದಲ್ಲಿ ಹಿಂದೂಗಳಾಗಿಯೇ ಇದ್ದರು. ಇಸ್ಲಾಮ್ ಗಿಂತ ಹಿಂದೂ ಧರ್ಮ ತುಂಬಾ ಪುರಾತನವಾದದ್ದು, ಇಸ್ಲಾಂ ಧರ್ಮಕ್ಕೆ 1,500 ವರ್ಷಗಳ ಇತಿಹಾಸ ಇದೆ. ಬಹುಶಃ ಕೆಲವು ಮುಸ್ಲಿಮರು ಹೊರದೇಶದಿಂದ ಬಂದು ಮೊಘಲರ ಸೇನೆಗೆ ಸೇರಿರುವುದಾಗಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅಭಿಪ್ರಾಯವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಲಾಂ ನಬಿ ಹೇಳಿದ್ದೇನು?
ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಗುಲಾಂ ನಬಿ ಆಜಾದ್ ಅವರು, ಹೊರಗಿನಿಂದ ಬಂದ ಕೆಲವು ಮುಸ್ಲಿಮರು ಮೊಘಲರ ಸೇನೆ ಸೇರ್ಪಡೆಗೊಂಡಿದ್ದು, ಆ ಬಳಿಕ ದೇಶದ ಉಪಖಂಡದಲ್ಲಿ ಹಿಂದೂ ಧರ್ಮದಿಂದ ಇಸ್ಲಾಮ್ ಗೆ ಮತಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿರುವ ಮುಸ್ಲಿಮರು ಮೂಲತಃ ಹಿಂದೂಗಳಾಗಿದ್ದು, ನಂತರ ಅವರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇದಕ್ಕೆ ಉದಾಹರಣೆ…ಕಾಶ್ಮೀರದಲ್ಲಿ ಸುಮಾರು 600 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರೇ ವಾಸವಾಗಿದ್ದರು. ನಂತರ ಜನರು ಇಸ್ಲಾಮ್ ಗೆ ಮತಾಂತರಗೊಂಡಿದ್ದರು. ಅಂದರೆ ನಮ್ಮ ಪೂರ್ವಜರ ಮೂಲ ಹಿಂದೂ ಧರ್ಮವೇ ಆಗಿದೆ.
ಈ ದೇಶದಲ್ಲಿರುವವರನ್ನು ಹಿಂದೂ, ಮುಸ್ಲಿಮ್, ರಜಪೂತ್, ಬ್ರಾಹ್ಮಣ, ದಲಿತ, ಕಾಶ್ಮೀರಿ ಅಥವಾ ಗುಜ್ಜರ್ ಹೀಗೆ ಯಾವುದೇ ಜಾತಿಯಿಂದ ಗುರುತಿಸಿದರೂ ಕೂಡಾ ನಮ್ಮ ಮೂಲ ಈ ನೆಲದ ಜೊತೆಗೆ ಸಂಬಂಧ ಹೊಂದಿದೆ. ಹೀಗಾಗಿ ಹಿಂದೂ-ಮುಸ್ಲಿಮ್ ಎಂಬ ಭೇದಭಾವ ಏಕೆ ಎಂದು ಆಜಾದ್ ಪ್ರಶ್ನಿಸಿದ್ದು, ಜನರು ಸಹೋದರತೆ, ಶಾಂತಿಯಿಂದ ಜೀವನ ಸಾಗಿಸಬೇಕು. ಧರ್ಮದೊಂದಿಗೆ ರಾಜಕೀಯ ಬೆರೆಸಬಾರದು ಎಂದು ಹೇಳಿದರು.