Advertisement

ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್‌: ಕರಾವಳಿಯಲ್ಲಿ 5 ಕಡೆ ಆರಂಭಿಸಲು ಸಿದ್ಧತೆ

01:53 AM Feb 06, 2023 | Team Udayavani |

ಮಂಗಳೂರು: ಮಹಿಳೆಯರಿಗೆ ಪ್ರತ್ಯೇಕವಾದ, ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶ ದಿಂದ ಆರೋಗ್ಯ ಇಲಾಖೆಯು ವಿವಿಧ ಜಿಲ್ಲೆಗಳಲ್ಲಿ ಸುಮಾರು 250 “ಆಯುಷ್ಮತಿ ಮಹಿಳಾ ಕ್ಲಿನಿಕ್‌’ ಗಳನ್ನು ಶೀಘ್ರ ಆರಂಭಿಸಲು ಉದ್ದೇಶಿಸಿದೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂಥ ಒಟ್ಟು ಐದು ಕ್ಲಿನಿಕ್‌ಗಳು ಸ್ಥಾಪನೆ ಗೊಳ್ಳಲಿವೆ. ಇವುಗಳನ್ನು ಈಗಾಗಲೇ ಇರುವ ನಗರ ಆರೋಗ್ಯ ಕೇಂದ್ರಗಳಲ್ಲೇ ತೆರೆಯಲು ಆರೋಗ್ಯ ಇಲಾಖೆ ಉದ್ದೇಶಿಸಿದೆ. ಮಂಗಳೂರಿನ ಬಂದರು, ಪಡೀಲ್‌, ಸುರತ್ಕಲ್‌ ಮತ್ತು ಬಿಜೈಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮತಿ ಕ್ಲಿನಿಕ್‌ಗಳು ಆರಂಭವಾಗಲಿವೆ.

ಉಡುಪಿ ಜಿಲ್ಲೆಯಲ್ಲಿ ಉಡುಪಿಯನಗರ ಪ್ರಾ. ಆ. ಕೇಂದ್ರದಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ಹೆಸರು ಅಂತಿಮ ಪಡಿಸಿ ಸರಕಾರದಿಂದ ಅಧಿಕೃತ ಘೋಷಣೆಯಾದ ಬಳಿಕ ಉದ್ಘಾಟನೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾಣ ನಾಗಭೂಷಣ ಉಡುಪ ತಿಳಿಸಿದ್ದಾರೆ.

ವೈದ್ಯರ ನೇಮಕಾತಿಗೆ ಸಂಬಂಧಿಸಿ ಮೆಡಿಕಲ್‌ ಕಾಲೇಜುಗಳ ಸಹಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಯೋಜನೆಯ ಉದ್ದೇಶ
ಮಹಿಳೆಯರು ಕೆಲಸದ ಒತ್ತಡದ ನಡುವೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಪರಿಣಾಮವಾಗಿ ರೋಗಗಳಿಗೆ ಚಿಕಿತ್ಸೆ ವಿಳಂಬವಾಗುತ್ತದೆ. ಇದರ ಬದಲಾಗಿ ಆರಂಭದಲ್ಲೇ ಅವರ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಲು “ಆಯುಷ್ಮತಿ ಕ್ಲಿನಿಕ್‌’ಗಳನ್ನು ಆರಂಭಿಸಲಾಗುತ್ತಿದೆ.

Advertisement

ಎಲ್ಲ ವೈದ್ಯಕೀಯ ಸೇವೆ
ಇದು ಮಹಿಳೆಯರಿಗೆ ಮೀಸಲಾದ ಕ್ಲಿನಿಕ್‌. ನುರಿತ ಸ್ತ್ರೀರೋಗ ತಜ್ಞರು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ತಪಾಸಣೆ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆ ನೀಡಲಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರಿಗೆ ಆರೋಗ್ಯ ಸೇವೆ ದೊರೆಯಲಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಮುಟ್ಟಿನ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಸಂಧಿವಾತ ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆಯೊಂದಿಗೆ ಎಲ್ಲ ವೈದ್ಯಕೀಯ ಸೇವೆಗಳು ಲಭಿಸಲಿವೆ.

ಗರ್ಭಿಣಿಯರಿಗೆ ಹೆರಿಗೆಯ ವರೆಗಿನ ಚಿಕಿತ್ಸೆ, ಬಾಣಂತಿಯರ ಆರೋಗ್ಯ ತಪಾಸಣೆ ಮತ್ತು ನವಜಾತ ಶಿಶುವಿನ ಸಮಗ್ರ ಆರೈಕೆಯ ಸಲಹೆಯೂ “ಆಯುಷ್ಮತಿ ಕ್ಲಿನಿಕ್‌’ಗಳಲ್ಲಿ ಸಿಗಲಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿ ತಾಯಿ ಶಿಶುವಿನ ಮರಣ ಪ್ರಮಾಣವನ್ನು ಮತ್ತಷ್ಟು ತಗ್ಗಿಸಬಹುದಾಗಿದೆ. ಗರ್ಭಿಣಿಯರ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಸೇವನೆ ಮತ್ತು ವೈಯಕ್ತಿಕ ಸ್ವತ್ಛತೆ ಕುರಿತು ಸಲಹೆ, ಉಚಿತ ಔಷಧಗಳೂ ದೊರೆಯಲಿದೆ.

ಮಂಗಳೂರಿನಲ್ಲಿ ಒಟ್ಟು ನಾಲ್ಕು ಮಹಿಳಾ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ಮಹಿಳೆಯರಿಗೆ ಮೀಸಲಾಗಿರುವ ಕ್ಲಿನಿಕ್‌. ಸರಕಾರದ ಸೂಚನೆಯಂತೆ ನಗರದಲ್ಲಿರುವ ವಿವಿಧ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳ ಸಹಯೋಗದಲ್ಲಿ ತಜ್ಞ ವೈದ್ಯರ ಸಹಕಾರದಲ್ಲಿ ಕ್ಲಿನಿಕ್‌ ನಡೆಸಲು ಉದ್ದೇಶಿಸಲಾಗಿದೆ.
– ಡಾ| ರಾಜೇಶ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next