ಮಲ್ಪೆ: ಕೊಡವೂರು ಕಂಬಳಕಟ್ಟ ಯುವ ಬಂಟರ ಸಂಘ, ಉಡುಪಿ ಚೇತನ ಲಯನ್ಸ್ ಕ್ಲಬ್ ಹಾಗೂ ಧರ್ಮಸ್ಥಳ ಸ್ವ ಸಹಾಯ ಸಂಘ, ಪ್ರಕೃತಿ ಒಕ್ಕೂಟ ಕಲ್ಮಾಡಿ ಅವರ ಆಶ್ರಯದಲ್ಲಿ ಪ್ರಥ್ವಿ ಡಿಜಿಟಲ್ ಸೇವಾ ಕೇಂದ್ರದ ಸಹಭಾಗಿತ್ವದಲ್ಲಿ ನ. 17ರಂದು ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೋಂದಣಿ ಕಾರ್ಯಗಾರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವು ಮಣಿಪಾಲ ಆಸ್ಪತ್ರೆಯ ಸಹಯೋಗದೊಂದಿಗೆ ಜರಗಿತು.
ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್ ಅವರು ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಎಲ್ಲ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಇನ್ನಷ್ಟು ಕಾರ್ಯೋನ್ಮುಖಗೊಳಿಸುವಲ್ಲಿ ಒಲವು ತೋರಿಸಬೇಕು ಎಂದರು.
ಉದ್ಘಾಟಿಸಿ ಮಾತನಾಡಿದ ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟ ಇಂದ್ರಾಳಿ ಅವರು ಮಾತನಾಡಿ ಯಾವುದೇ ರೋಗವನ್ನು ಆರಂಭದಲ್ಲಿ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಮಾಡಿದಾದ್ದರೆ ಗುಣಮುಖ ಹೊಂದುವುದರಲ್ಲಿ ಎರಡು ಮಾತಿಲ್ಲ. ಇಂತಹ ತಪಸಣಾ ಶಿಬಿರಗಳ ಆಯೋಜನೆ ಶ್ಲಾಘನೀಯ ಜನರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಮಧುಮೇಹ ಜಾಗೃತಿ ವಿಭಾಗದ ಮುಖ್ಯ ಸಂಯೋಜಕ ಡಾ| ಅಶೋಕ್ ಕುಮಾರ್ ವೈ. ಜಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್ ಬಿ., ನಗರಸಭಾ ಸದಸ್ಯರಾದ ಶ್ರೀಶ ಭಟ್ ಕೊಡವೂರು, ವಿಜಯ ಕೊಡವೂರು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯ ಡಾ| ಅಂಕಿತ, ಇ – ಜಿಲ್ಲಾ, ಜಿಲ್ಲಾ ವ್ಯವಸ್ಥಾಪಕ ಪ್ರಮೋದ್ ಎಸ್.ಆರ್., ಧರ್ಮಸ್ಥಳ ಸ್ವ ಸಹಾಯ ಸಂಘದ ಮೇಲ್ವಿಚಾರಕ ವಸಂತ್, ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಕೆ., ಶಾಲಾ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ, ಲಯನ್ಸ್ ಕ್ಲಬ್ ಚೇತನಾ ಇದರ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಗಂಗೋತ್ರಿ, ಪ್ರಥ್ವಿ ಡಿಜಿಟಲ್ ಸೇವಾ ಕೇಂದ್ರ ಮಲ್ಪೆಯ ರವಿರಾಜ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಊರಿನ ನಿವೃತ್ತ ಹಾಗೂ ಪ್ರಸ್ತುತ ಪೋಸ್ಟ್ ಮ್ಯಾನ್‌ಗಳಾದ ಬಿ. ಪಾಂಡುರಂಗ ಹಾಗೂ ರಾಜೇಂದ್ರ ಅವರನ್ನು ಸಮ್ಮಾನಿಸಲಾಯಿತು. ಸುಮಾರು 350ಕ್ಕೂ ಆಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.
ಕಂಬಳಕಟ್ಟ ಯುವ ಬಂಟರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಹೆಗ್ಡೆ ವಂದಿಸಿದರು. ಜಗದೀಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.