ಚಿಂತಾಮಣಿ: ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬೇಕು, ಆ ಕ್ಷೇತ್ರದಲ್ಲಿ ಸಾಧಿಸ ಬೇಕಾದರೆ ಆರೋಗ್ಯ ಮುಖ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕಷ್ಣಾರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಕಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
5 ಲಕ್ಷ ರೂ.ವರೆಗೆ ಚಿಕಿತ್ಸೆ: ರಾಜ್ಯದ ಎಲ್ಲಾ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಹೆಸರಿನಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವರ್ಷಕ್ಕೆ ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಕೊಳ್ಳಬೇಕೆಂದರು.
ಸಿಬ್ಬಂದಿ ಕೊರತೆ: ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಕೊಡಲು ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ ಸರಿಪಡಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬೇರೆಡೆ ಬೋರ್‌ವೆಲ್ ಕೊರೆಯಲು ಸೂಚನೆ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಈಗಾಗಲೇ ನಾಲ್ಕು ಕೊಳವೆ ಬಾವಿ ಕೊರೆಸಿ ವಿಫಲವಾಗಿದ್ದು, ಆಸ್ಪತ್ರೆ ಅವರಣ ಬಿಟ್ಟು ಬೇರೆಡೆ ಕೊಳವೆಬಾವಿ ಕೊರೆದು ಆಸ್ಪತ್ರೆಗೆ ನೀರು ಪೂರೈಸುವಂತೆ ನಗರಸಭೆ ಅಕಾರಿಗಳಿಗೆ ಸೂಚನೆ ನೀಡಿದ್ದು, ಶಿಘ್ರವೇ ಆಸ್ಪತ್ರೆಗೆ ನೀರು ಪೂರೈಕೆಯಾಗಲಿದೆ ಎಂದರು.
ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಸಾರ್ವಜನಿಕರು ಈ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ವೇದಿಕೆ ಮೇಲೆ ಕಿರಿಕಿರಿ: ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯ ಮುಖಂಡರುಗಳ ಪ್ರಚಾರದ ಗೀಳಿನಿಂದ ಸರ್ಕಾರಿ ಕಾರ್ಯಕ್ರಮವಾದರೂ ಯಾವುದೇ ಕಟ್ಟುಪಾಡುಗಳಿಲ್ಲದೆ ಶಿಷ್ಟಾಚಾರ ಮೀರಿ ವೇದಿಕೆ ಏರಿ ಕುಳಿತಿದ್ದ ಕೆಲ ಸ್ಥಳೀಯ ಮುಖಂಡರನ್ನು ಕಂಡು ಅಧಿಕಾರಿಗಳಿಗೆ ಸ್ವಾಗತ ಕೋರುವಾಗ ಕಿರಿಕಿರಿ ಉಂಟಾಯಿತು.
ತಹಶೀಲ್ದಾರ್ ವಿಶ್ವನಾಥ್, ಜಿಲ್ಲಾ ಆರೋಗ್ಯಾಕಾರಿ ಡಾ.ಬಿ.ಎಂ.ಯೋಗೇಶ್ ಗೌಡ, ತಾ. ಆರೋಗ್ಯಾಧಿಕಾರಿ ರಾಮಚಂದ್ರಾರೆಡ್ಡಿ, ತಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯ ನಡಂಪಲ್ಲಿ ಶ್ರೀನಿವಾಸ್, ನಗರಸಭಾ ಸದಸ್ಯ ಪ್ರಕಾಶ್, ಮಂಜುನಾಥ್, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷಕುಮಾರ್, ಸಮಾಜ ಸೇವಕ ಮಾಡಿಕರೆ ಅರುಣ್ ಬಾಬು, ದೇವಳ ಶಂಕರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.