Advertisement

“ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ’ವಿಲೀನ, ಹೇಗಿದೆ ಪರಿಣಾಮ?

12:30 AM Dec 14, 2018 | Team Udayavani |

ರಾಜ್ಯದ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಈ ಹಿಂದೆ ಇದ್ದ 10 ಪ್ರಮುಖ ಆರೋಗ್ಯ ಸೇವಾ ಯೋಜನೆಗಳನ್ನು ಒಗ್ಗೂಡಿಸಿ “ಆರೋಗ್ಯ ಕರ್ನಾಟಕ’ ಯೋಜನೆಯನ್ನು ಮಾರ್ಚ್‌ 2 ರಲ್ಲಿಯೇ ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ 1.50 ಲಕ್ಷ ರೂ, ಅಗತ್ಯ ಸಂದರ್ಭಗಳಲ್ಲಿ 2 ಲಕ್ಷ ರೂ. ವರೆಗೆ ಉಚಿತ ಸೇವೆ ಲಭ್ಯವಿತ್ತು. ಆನಂತರ ಈ ಯೋಜನೆಗೆ ಇನ್ನಷ್ಟು ಬಲ ತುಂಬಲು ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯ ರಾಜ್ಯದ ಮಿತಿಯನ್ನು ವಿಸ್ತರಿಸಲು ಈ ಎರಡೂ ಯೋಜನೆಗಳನ್ನು ವಿಲೀನಗೊಳಿಸಿ “ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ತರಲಾಯಿತು. ಪ್ರಸ್ತುತ ಈ ಯೋಜನೆಯಡಿ ಬಿಪಿಎಲ್‌ ಕುಟುಂಬಗಳು 5 ಲಕ್ಷ ರೂ. ಹಾಗೂ ಎಪಿಲ್‌ ಕುಟುಂಬಗಳಿಗೆ 1.50 ಲಕ್ಷ ರೂ. ವರೆಗೂ ನಗದು ರಹಿತ ಚಿಕಿತ್ಸಾ ಸೇವೆ ಲಭ್ಯವಿದ್ದು, 1,614 ಚಿಕಿತ್ಸೆಗಳ ಇದರ ವ್ಯಾಪ್ತಿಗೆ ತರಲಾಗಿದೆ. ಆದರೆ ಈ ಯೋಜನೆಯ ಕಾರ್ಡ್‌ಗಳು ಜಿಲ್ಲಾ, ತಾಲೂಕು, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತವಾಗಿ ವಿತರಣೆಯಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಉಚಿತ ಸೌಲಭ್ಯಗಳು ಸುಲಭವಾಗಿ ಸಿಗದಂತಾಗಿವೆ. ಇನ್ನು ಕಾರ್ಡ್‌ ವಿತರಣೆ ವಿಳಂಬ ಕುರಿತು ಆರೋಗ್ಯ ಇಲಾಖೆಯು ಉಚಿತ ಚಿಕಿತ್ಸೆಗೆ ಯಾವುದೇ ಕಾರ್ಡ್‌ನ ಅವಶ್ಯಕತೆ ಇಲ್ಲ, ಬಿಪಿಎಲ್‌ ಅಥವಾ ಎಪಿಎಲ್‌ ಕಾರ್ಡ್‌ ಗಳನ್ನು ತೋರಿಸಿ ನೇರವಾಗಿ ಯೋಜನೆಯ ಅನುಕೂಲ ಪಡೆಯಬಹುದು ಎಂದು ಹೇಳುತ್ತಾ ಬಂದಿದೆ. ಕೆಲ ಆಸ್ಪತ್ರೆಗಳಲ್ಲಿ ಯೋಜನೆಯ ಕಾರ್ಡ್‌ ಇಲ್ಲದವರಿಗೆ ಸೌಲಭ್ಯ ನೀಡುತ್ತಿಲ್ಲ. ಈ ಗೊಂದಲದಿಂದಾಗಿ ಅನೇಕರು ಹಳೆಯ ಯಶಸ್ವಿನಿ ಯೋಜನೆಯೇ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ನಿರೀಕ್ಷಿತ ಫ‌ಲ ನೀಡಿಲ್ಲ
ಕಲಬುರಗಿ:
ಆರೋಗ್ಯ ಕರ್ನಾಟಕ ಯೋಜನೆಯಡಿ ನಗರದ ಜಿಮ್ಸ್‌ (ಗುಲಬರ್ಗಾ ವೈದ್ಯಕೀಯ ವಿಜ್ಞಾnನ ಸಂಸ್ಥೆ) ಆಸ್ಪತ್ರೆಯಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದ್ದು, ಇದುವರೆಗೂ 89,293 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಹಿಂದೆ ಯಾವುದೇ ಸ್ಥಳದ ಫಲಾನುಭವಿಗಳು ಸ್ಮಾರ್ಟ್‌ ಕಾರ್ಡ್‌ ಪಡೆಯಲು ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಆರಂಭದಲ್ಲಿ ನೀಡಿದ್ದರಿಂದ ಜನರು ನೂಕುನುಗ್ಗಲು ಮಾಡಿ ಕಾರ್ಡ್‌ ಪಡೆದಿದ್ದಾರೆ. ಹೈದ್ರಾಬಾದ್‌- ಕರ್ನಾಟಕದ ಬೀದರ, ರಾಯಚೂರು, ಯಾದಗಿರಿ ಜಿಲ್ಲೆಗಳ ಜನರು ಸಹ ಜಿಮ್ಸ್‌ನಲ್ಲಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾರ್ಡ್‌ ಪಡೆದಿದ್ದಾರೆ. ಇದರ ಮಧ್ಯೆ ಕಾರ್ಡ್‌ ವಿತರಣೆಗೆ ಗಡುವು ವಿಧಿಸಲಾಗಿದೆ ಎಂದು ವದಂತಿ ಹಬ್ಬಿ ಅನ್ಯ ಕಾರ್ಯಗಳಿಗೆ ಆಸ್ಪತ್ರೆಗೆ ಬಂದಿದ್ದ ಧಾರವಾಡ, ಬೆಂಗಳೂರು, ವಿಜಯಪುರ ಸೇರಿದಂತೆ ಇತರ ಭಾಗದ ಜನ ಕೂಡ ಸಾರ್ವತ್ರಿಕವಾಗಿ ಕಾರ್ಡ್‌ ಪಡೆದಿದ್ದಾರೆ. ಒಳ ರೋಗಿಗಳಿಗೆ ಮಾತ್ರ ವಿತರಣೆ: “ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟಕ’ ವಿಲೀನದ ಪ್ರಕ್ರಿಯೆ ನಂತರ ಸ್ಮಾರ್ಟ್‌ ಕಾರ್ಡ್‌ ಇಲ್ಲದೇ ಇದ್ದರೂ, ಪಡಿತರ ಚೀಟಿ ಮತ್ತು ಆಧಾರ್‌ ಮೇಲೆಯೇ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಉಚಿತವಾಗಿ ಚಿಕಿತ್ಸೆ ಪಡೆ ಯಲು ಸ್ಮಾರ್ಟ್‌ ಕಾರ್ಡ್‌ ಕಡ್ಡಾಯವಲ್ಲ ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ. ಅಲ್ಲದೇ, ಸದ್ಯ ಸಾರ್ವ ತ್ರಿಕವಾಗಿ ಕಾರ್ಡ್‌ ವಿತರಣೆ ನಿಲ್ಲಿಸಲಾಗಿದ್ದು, ಸರ್ಕಾರದ ನಿರ್ದೇಶನ ದಂತೆ ಒಳ ರೋಗಿಗಳಿಗೆ ಮಾತ್ರ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. ಜತೆಗೆ ಸ್ಮಾರ್ಟ್‌ ಕಾರ್ಡ್‌ ಗಳ ಮಾಹಿತಿ ಶೇಖರಿಸಲು ಸರ್ಕಾರ ವೈಬ್‌ಸೈಟ್‌ ಸ್ಥಾಪಿಸಲು ನಿರ್ಧರಿಸಿದೆ.  ಹೀಗಾಗಿ ಸದ್ಯಕ್ಕೆ ಕಾರ್ಡ್‌ ಯಾವುದೇ “ಉಪಯೋಗ’ಕ್ಕೆ ಬರುವುದಿಲ್ಲ. ಒಳ ರೋಗಿಗಳಿಗೆ ಮಾತ್ರ ಸ್ಮಾರ್ಟ್‌ ಕಾರ್ಡ್‌ ವಿತರಿಸುತ್ತಿರುವುದಿಂದ ಆಸ್ಪತ್ರೆಯಲ್ಲಿ ಕಾರ್ಡ್‌ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾದ್ಯಂತ ಡಿ.5 ರವರೆಗೆ ಒಟ್ಟು 2,281 ಜನರ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 890 ಜನ ಮಹಿಳೆಯರು ಮತ್ತು 1,391 ಜನ ಪುರುಷ ಫಲಾನುಭವಿಗಳಿದ್ದಾರೆ.

ಆರಂಭವಾಗದ ನೋಂದಣಿ
ರಾಮನಗರ: ಆಯುಷ್ಮಾನ್‌ ಭಾರತ್‌ ಯೋಜನೆಯ ಜೊತೆಗೆ ರಾಜ್ಯ ಸರ್ಕಾರ ತನ್ನ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ವಿಲೀನಗೊಳಿಸಿರುವ ಯೋಜನೆಗೆ ಜಿಲ್ಲೆಯಲ್ಲಿ  ಇನ್ನು ನೋಂದಣಿ ಆರಂಭವಾಗಿಲ್ಲ. ಹೀಗಾಗಿ ಇನ್ನು ಹೆಲ್ತ್‌ ಕಾರ್ಡುಗಳು ವಿತರಣೆ ಆಗಿಲ್ಲ. ಆರೋಗ್ಯ ರಕ್ಷಣೆಯ ಸಂಬಂಧ ಇದ್ದ  ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ರಾಷ್ಟ್ರೀಯ ಸ್ವಾಸ್ಥ ಭಿಮಾ ಯೋಜನೆ, ಹಿರಿಯ ನಾಗರೀಕರ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿಗಳ ಸಾಂತ್ವನ ಹರೀಶ್‌ ಯೋಜನೆ ಮತ್ತು ಇಂದಿರಾ ಸುರಕ್ಷಾ ಯೋಜನೆಗಳು ಸಹ ಆರೋಗ್ಯ ಕರ್ನಾಟಕದಲ್ಲಿ ವಿಲೀನ ಗೊಂಡಿವೆ. 

ಷರತ್ತಿಗೆ ಜನ ಸುಸ್ತು!
ಗದಗ: ಹತ್ತಾರು ಷರತ್ತುಗಳ ಪರಿಣಾಮ ಹಲವು ಖಾಸಗಿ ಆಸ್ಪತ್ರೆಗಳು ಯೋಜನೆಯಿಂದ ದೂರ ಉಳಿದಿವೆ. ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಸಮರ್ಪಕ ಚಿಕಿತ್ಸೆ ದೊರೆಯದೇ ಅನಿವಾರ್ಯವಾಗಿ ಜನರು ಸ್ವಂತ ಖರ್ಚಿನಲ್ಲೇ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗದಿದ್ದರೆ ಆರೋಗ್ಯ ಕರ್ನಾಟಕದಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವಂತಿಲ್ಲ ಎಂಬ ಷರತ್ತು ಬಡ ಜನರಿಗೆ ಕಬ್ಬಿಣದ ಕಡಲೆಯಂತಾಗಿದೆ. ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಪ್ರಕ್ರಿಯೆ ಆರಂಭಿಸಿಲ್ಲ. ಆದರೆ, ಕ್ಯಾನ್ಸರ್‌, ಹೃದಯ ಹಾಗೂ ಇನ್ನಿತರೆ ಗಂಭೀರ ಕಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆಗೆ 1099 ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿದ್ದೇವೆ. ಬಿಪಿಎಲ್‌ – ಎಪಿಎಲ್‌ ಕಾರ್ಡ್‌ ಆಧರಿಸಿ ವೈದ್ಯರು ಶಿಫಾರಸು ಪತ್ರ ನೀಡುತ್ತಿದ್ದಾರೆಂದು ಜಿಲ್ಲಾ ಆರೋಗ್ಯಾ ಧಿಕಾರಿ ಎಸ್‌.ಎಂ. ಹೊನಕೇರಿ ತಿಳಿಸಿದರು. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಚಿಕಿತ್ಸೆಗಳಿಗೆ ಸರಕಾರ ಇನ್ನೂ ಶುಲ್ಕ ನಿಗದಿಗೊಳಿಸಿಲ್ಲ. ಎನ್‌ಎಎಚ್‌ಎಚ್‌ಸಿ ಅಡಿ ಮಾನ್ಯತೆ ಪಡೆದಿರಬೇಕೆಂಬ ಷರತ್ತು ಹಾಗೂ ಹಿಂದಿನ ಯಶಸ್ವಿನಿ, ರಾಜೀವ್‌ ಆರೋಗ್ಯ ಮತ್ತು ವಾಜಪೇಯಿ ಆರೋಗ್ಯ ಯೋಜನೆಯಡಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ 2 ವರ್ಷಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಆರೋಗ್ಯ ಕರ್ನಾಟಕ ಯೋಜನೆಗೆ ಜಿಲ್ಲೆಯಲ್ಲಿ ಕೇವಲ ಐದು ಖಾಸಗಿ ಆಸ್ಪತ್ರೆಗಳು ನೋಂದಾಯಿಕೊಂಡಿವೆ ಎನ್ನಲಾಗಿದೆ.

ಪ್ರಾಯೋಗಿಕ ಹಂತದಲ್ಲೇ ನಿಂತ ಆರೋಗ್ಯ ಕರ್ನಾಟಕ 
ಮೈಸೂರು: ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್‌ಕಾರ್ಡ್‌ ನೀಡಿಕೆ ಪ್ರಕ್ರಿಯೆ ಹತ್ತು ತಿಂಗಳಾದರೂ ಪೈಲಟ್‌ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಂಡ ಟಿ. ನರಸೀಪುರ ತಾಲೂಕು ಇತರೆ ತಾಲೂಕು ಹಾಗೂ ಮೈಸೂರು ನಗರಕ್ಕೆ ವಿಸ್ತರಣೆಯಾಗಿಯೇ ಇಲ್ಲ.  ಸದ್ಯ ರಾಜ್ಯದಲ್ಲಿ 11 ಆಸ್ಪತ್ರೆಗಳನ್ನಷ್ಟೇ ಈ ಯೋಜನೆಗೆ ಗುರುತಿ ಸಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳ ಮೂಲಕ ಹೆಲ್ತ್‌ ಕಾರ್ಡ್‌ ನೀಡುವ ಕೆಲಸ ವನ್ನು ಮುಂದಿನ ತಿಂಗಳಲ್ಲಿ ಆರಂಭಿಸುವುದಾಗಿ ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್‌ನ ಡಾ. ಪ್ರಸಾದ್‌ ತಿಳಿಸಿದರು. ಹೆಲ್ತ್‌ ಕಾರ್ಡ್‌ ವಿಳಂಬವಾಗುತ್ತಿರುವುದರಿಂದ ಆಧಾರ್‌ನೊಂದಿಗೆ ಪಡಿತರ ಚೀಟಿ ಕಾಪಿ ನೀಡಿದರೆ ಸರ್ಕಾರಿ/ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದ್ದಾರೆ.

Advertisement

ಹಲವರಿಗೆ ಯಶಸ್ವಿನಿಯೇ ಲೇಸು
ಹಾವೇರಿ: ಈಗಿನ ಹೊಸ ಯೋಜನೆಗಳಲ್ಲಿ ಗರಿಷ್ಠ ಐದು ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಅವಕಾಶ, ಸದಸ್ಯರ ಮಿತಿ ಇಲ್ಲದೇ ಇರುವುದು ಸೇರಿದಂತೆ ಇನ್ನಿತರ ಹೆಚ್ಚಿನ ಲಾಭಕರ ಅಂಶಗಳಿವೆ. ಆದರೆ, ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಸಂಬಂಧಿ ತ ಆರೋಗ್ಯ ಸೇವೆ ಇಲ್ಲದೇ ಇರುವುದನ್ನು ಖಾತ್ರಿ ಮಾಡಿಕೊಂಡು ಅಲ್ಲಿಯ ವೈದ್ಯರಿಂದ ಶಿಫಾರಸ್ಸು ಪತ್ರ ಪಡೆಯಬೇಕು ಎಂಬ ನಿಯಮವಿದ್ದು, ಇದುವೇ ಬಡಜನರಿಗೆ ದೊಡ್ಡ ತಲೆನೋವಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವಾಗ ಸರ್ಕಾರಿ ಆಸ್ಪತ್ರೆ ಅಲೆದಾಟ, ಶಿಫಾರಸ್ಸು ಪತ್ರಕ್ಕಾಗಿ ತಡಕಾಟ ನಡೆಸಬೇಕು. ಹೀಗಾಗಿಯೇ ಈ ಯೋಜನೆಯ ಲಾಭ ಹೆಚ್ಚು ಜನರಿಗೆ ಸಿಗುತ್ತಿಲ್ಲ.

ಯಶಸ್ವಿನಿ ಯಶಸ್ಸು: ಜಿಲ್ಲೆಯಲ್ಲಿ 104654 ಜನರು ಯಶಸ್ವಿನಿ ಕಾರ್ಡ್‌ ನೋಂದಣಿ ಮಾಡಿಸಿಕೊಂಡಿದ್ದರು. ಕಳೆದ ಮಾರ್ಚ್‌ ಅಂತ್ಯದ ವರೆಗೆ 6208 ಜನರು ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಹೊರರೋಗಿ ವಿಭಾಗದಲ್ಲಿ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. 
ಆರೋಗ್ಯ ಕರ್ನಾಟಕ: ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಈವೆರೆಗೆ ಒಬ್ಬರಿಗೂ ಆರೋಗ್ಯ ಕಾರ್ಡ್‌ ಕೊಟ್ಟಿಲ್ಲ. ಆದರೆ, ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಶಿಫಾರಸ್ಸು ಪತ್ರ ನೀಡಿದ್ದಾರೆ. ಸರ್ಕಾರಿ ವೈದ್ಯರ ಶಿಫಾರಸ್ಸು ಪಡೆದುಕೊಂಡು ಈವರೆಗೆ ಕೇವಲ 1741 ಜನರು ಮಾತ್ರ ಪ್ರಯೋಜನ ಪಡೆದುಕೊಂಡಿದ್ದಾರೆ

ಇನ್ನೂ ವಿತರಣೆಯಾಗದ ಕಾರ್ಡ್‌
ಚಾಮರಾಜನಗರ:
ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯು ಅ.30ರಿಂದ ರಾಜ್ಯದಲ್ಲಿ ಜಾರಿಯಾಗಿ ದ್ದರೂ, ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಕಾರ್ಡ್‌ ವಿತರಣೆ ಯಾಗಿಲ್ಲ. ಆದರೆ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ, ಕಾರ್ಡ್‌ ಇಲ್ಲದಿದ್ದರೂ, ಬಿಪಿಎಲ್‌ ಕಾರ್ಡ್‌ ಇದ್ದವರಿಗೆ ರೆಫೆರಲ್‌ ಫಾರಂ ತುಂಬಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.  ಬಿಪಿಎಲ್‌ ಕಾರ್ಡ್‌ ಹೊಂದಿರುವವವರಿಗೆ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ರೆಫೆರೆಲ್‌ ಫಾರಂ ನೀಡಿ, ಸೌಲಭ್ಯ ಚಿಕಿತ್ಸೆ ನೀಡಲಾಗುತ್ತಿದೆ.  ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ ಬರುವವರೆಗೂ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿ ಗಮನ ಹರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾರ್ಡ್‌ ವಿತರಣೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್‌.

ಆರೋಗ್ಯ ಇಲಾಖೆ ಅಧಿಕಾರಿಗಳಿಗೇ ಗೊಂದಲ
ಚಿತ್ರದುರ್ಗ: ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಿಲ್ಲೆಯಲ್ಲಿ ನಿರೀಕ್ಷಿತ ಫಲ ನೀಡುತ್ತಿಲ್ಲ. ವಿಚಿತ್ರ ಎಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೇ ಈ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೇಸ್‌ ವರ್ಕರ್‌, ಕಂಪ್ಯೂಟರ್‌ ಎಂಟ್ರಿ ಮಾಡುವವರ ಕಡೆ ಕೈ ತೋರಿಸಿ ಮಾಹಿತಿ ಪಡೆಯಿರಿ ಎನ್ನುವ ಉದಾಸೀನದ ಮಾತುಗಳನ್ನು ಆಡುತ್ತಿದ್ದಾರೆ. ಇಂದಿಗೂ ಯಾವುದೇ  ನೋಂದಣಿ ಮಾಡುತ್ತಿಲ್ಲ. ಇದರಿಂದಾಗಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಬಡ ಕುಟುಂಬಗಳ ಪಾಲಿಗೆ ಮರೀಚಿಕೆಯಾಗಿದೆ. ಒಟ್ಟಿನಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಡ ಕುಟುಂಬಗಳಲ್ಲಿ ಗೊಂದಲ ಇದೆ. ಈ ಗೊಂದಲವನ್ನು ನಿವಾರಿಸಿ ಬಡವರಿಗೆ ಆರೋಗ್ಯ ಭಾಗ್ಯ ನೀಡುವ ಹೊಣೆ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ.

ಖಾಸಗಿ ಆಸ್ಪತ್ರೆಗಳು ದೂರ 
ಬಳ್ಳಾರಿ: ಬಹುನಿರೀಕ್ಷಿತ ಯಶಸ್ವಿನಿ ಯೋಜನೆಯನ್ನು ಏಕಾಏಕಿ ರದ್ದುಪಡಿಸಿ ನೂತನವಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ ಆರೋಗ್ಯ ಸಂರಕ್ಷಣೆ ಯೋಜನೆಗಳು ಜಿಲ್ಲೆಯ ಸಾರ್ವ ಜನಿಕರ ಪಾಲಿಗೆ ಮರೀಚಿಕೆಯಾಗಿವೆ. ಯಶಸ್ವಿನಿ ಯೋಜನೆ ಯಷ್ಟು ಜನಮನ್ನಣೆ ಗಳಿಸುವ ಮುನ್ನವೇ ಈ ಎರಡೂ ಯೋಜನೆ ಗಳು ಸಾರ್ವಜನಿಕರ ಮನಸ್ಸಿನಿಂದ ದೂರವಾಗಿದ್ದು, ಯಶಸ್ವಿನಿ ಯೋಜನೆಯಡಿ ಇದ್ದ ಆಸ್ಪತ್ರೆಗಳು ಸಹ ನೋಂದಣಿ ಮಾಡಿಸಿ ಕೊಳ್ಳದೇ ಆರೋಗ್ಯ, ಆಯುಷ್ಮಾನ್‌ ಭಾರತ್‌ ಯೋಜನೆಯಿಂದ ದೂರ ಉಳಿದಿವೆ. ಜಿಲ್ಲೆಯಲ್ಲಿ ಈವರೆಗೂ ಆರೋಗ್ಯ ಕರ್ನಾಟಕ, ಆಯುಷ್ಮಾನ್‌ ಭಾರತ್‌ ಯೋಜನೆ ಯಡಿ ಒಟ್ಟು 29371 ಫಲಾ ನುಭವಿಗಳಿಗೆ ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ. ಈ ಪೈಕಿ ಈವ ರೆಗೆ ಒಟ್ಟು 2777 ಫಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಒಟ್ಟು 10,59,73,056 ರೂ. ಪಾವತಿಸಲಾಗಿದೆ. 
1352 ರೋಗಿಗಳು ಬೇರೆ ಆಸ್ಪತ್ರೆಗೆ: ಆರೋಗ್ಯ ಕರ್ನಾಟಕ, ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಯಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದೇ ಒಟ್ಟು 1352 ರೋಗಿಗಳು ಬೇರೆ ಆಸ್ಪತ್ರೆಗಳಿಗೆ (ರೆಫರಲ್‌) ಕಳುಹಿಸಿಕೊಡಲಾಗಿದೆ. 

ಜಿಲ್ಲಾಸ್ಪತ್ರೆ: ಹೆರಿಗೆ ಸಂಖ್ಯೆ ಹೆಚ್ಚಳ
ಮಂಡ್ಯ: ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಜಿಲ್ಲಾ ಆಸ್ಪತ್ರೆಯೊಳಗಿನ ಹೆರಿಗೆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಈ ಮೊದಲು ನಿತ್ಯ 19 ರಿಂದ 20ರವರೆಗೆ ಹೆರಿಗೆಯಾಗುತ್ತಿತ್ತು. ಇದೀಗ ಆ ಸಂಖ್ಯೆ 28 ರಿಂದ 30ರವರೆಗೆ ತಲುಪಿದೆ. ಒಳರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗುತ್ತಿರುವವರಲ್ಲೂ ಶೇ.20ರಿಂದ 30ರಷ್ಟು ಏರಿಕೆ ಕಂಡುಬಂದಿದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ. ಇಲ್ಲಿಯವರೆಗೂ ಹೆರಿಗೆಗೆ ಬಹುತೇಕರು ಖಾಸಗಿ ನರ್ಸಿಂಗ್‌ ಹೋಂಗಳಿಗೆ ದಾಖಲಾಗುತ್ತಿದ್ದರು. ಯಶಸ್ವಿನಿ ಯೋಜನೆಯಡಿ ಖಾಸಗಿ ನರ್ಸಿಂಗ್‌ ಹೋಂಗಳಲ್ಲೇ ಹೆಚ್ಚಿನ ಜನರು ಹೆರಿಗೆ ಮಾಡಿಸಿಕೊಳ್ಳುತ್ತಿದ್ದ ಕಾರಣ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿತ್ತು.  ಜಿಲ್ಲಾ ಆಸ್ಪತ್ರೆಯಲ್ಲಿ ಈಗ ಮೊದಲಿಗಿಂತಲೂ ಹೆಚ್ಚು ಹೆರಿಗೆಯಾಗುತ್ತಿದೆ. ಮೊದಲೆಲ್ಲಾ ದಿನವೂ 20 ಹೆರಿಗೆಯಾಗುತ್ತಿತ್ತು. ಈಗ ಅದರ ಪ್ರಮಾಣ 28 ರಿಂದ 30ಕ್ಕೆ ತಲುಪಿದೆ. ಒಳರೋಗಿಗಳ ದಾಖಲಾತಿಯಲ್ಲೂ ಏರಿಕೆಯಾಗಿದೆ. ಚಿಕಿತ್ಸೆ ಕೋರಿ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಅದಕ್ಕೆ ಪೂರಕವಾದ ಚಿಕಿತ್ಸಾ ಸೌಲಭ್ಯಗಳು ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.  ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಂಡ್ಯ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next