ಮೈಸೂರು: ದೇಶದ ಜನರನ್ನು ಕಾಡುತ್ತಿರುವ ಅಪೌಷ್ಟಿಕತೆ ಮತ್ತು ಮಾರಕ ಕಾಯಿಲೆಗಳ ನಿವಾರಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರತಿಪಾದಿಸಿದರು. ತಾಲೂಕಿನ ವರುಣಾ ಗ್ರಾಮದಲ್ಲಿ ಶುಕ್ರವಾರ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 104ನೇ ಜಯಂತಿ ಉದ್ಘಾಟನೆ ಹಾಗೂ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ನೂತನ ಸಮುಚ್ಛಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಜನರ ಆರೋಗ್ಯ ಕಾಪಾಡುವ ಸಲುವಾಗಿ ಆಯುಷ್ಮಾನ್ ಭಾರತ್ ಮತ್ತು ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ಸಲುವಾಗಿ ನೈರ್ಮಲ್ಯಕ್ಕೆ ಒತ್ತು ನೀಡಲು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯನ್ನು ಆರಂಭಿಸಿದೆ. ಇವು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಗೆ ಕೇಂದ್ರದ ಕೊಡುಗೆ ಎಂದರು.
2018ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ವಿಶ್ವವಿದ್ಯಾನಿಲ ಯಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ 37ನೇ ಸ್ಥಾನಗಳಿಸಿದೆ. ಇದರಿಂದಲೇ ಸುತ್ತೂರು ಮಠ ಶಿಕ್ಷಣಕ್ಕೆ ಎಷ್ಟು ಒತ್ತು ನೀಡಿದೆ ಎಂಬುದು ತಿಳಿಯಲಿದೆ ಎಂದು ಶ್ಲಾಘಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಆದಿಚುಂನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.
ನಂಜನಗೂಡಿಗೆ ಭೇಟಿ: ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಯವರು ನಂಜನಗೂಡಿಗೆ ಆಗಮಿಸಿ, ಸುಭ್ರಮಣ್ಯ, ಶ್ರೀಕಂಠೇಶ್ವರ ಹಾಗೂ ಪಾರ್ವತಿ ದೇವಿಗೆ ಅಷ್ಟೋತ್ತರ ಪೂಜೆ ಸಲ್ಲಿಸಿದರು. ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಸುಮಾರು 25 ನಿಮಿಷ ಕಾಲ ನಿಂತು, ಭಕ್ತಿಯಿಂದ ಭಗವಂತನಿಗೆ ನಮಿಸಿದರು.