Advertisement

ಆಯುಷ್ಮಾನ್‌ ಕಾರ್ಡ್‌; ದೇಶಾದ್ಯಂತ ಬಳಸಬಹುದಾದ ಹೊಸ ಡಿಜಿಟಲ್‌

02:57 PM Oct 02, 2022 | Team Udayavani |

ದೇಶದ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಕೇಂದ್ರ ಸರಕಾರವು ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ (ABDM) ಎಂಬ ಹೊಸ ಯೋಜನೆಯನ್ನು ಹೊರತಂದಿದೆ. ದೇಶಾದ್ಯಂತ ಆರೋಗ್ಯ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಉದ್ದೇಶ ಈ ಯೋಜನೆಗಿದೆ. ಇದರಿಂದ ಯಾವುದೇ ವ್ಯಕ್ತಿಗೆ ದೇಶಾದ್ಯಂತ ಸರಕಾರಿ ಅಥವಾ ಆಯುಷ್ಮಾನ್‌ ಡಿಜಿಟಲ್‌ ವ್ಯವಸ್ಥೆಯನ್ನು ನೊಂದಾಯಿಸಿಕೊಂಡ ಆಸ್ಪತ್ರೆ ಹಾಗೂ ವೈದ್ಯರ ಸೇವೆಯನ್ನು ಸುಲಭವಾಗಿ ಪಡೆಯಲು ಸಾಧ್ಯ. ಅಲ್ಲದೆ ರೋಗಿಯನ್ನು, ರೋಗಿಯ ವಿವರಗಳನ್ನು ಇತರ ಆಸ್ಪತ್ರೆಗಳಿಗೆ, ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಸುಲಭವಾಗಿ, ತ್ವರಿತವಾಗಿ ಆನ್‌ಲೈನ್‌ ಮೂಲಕ ರೆಫ‌ರ್‌ ಮಾಡಬಹುದಾಗಿದೆ.

Advertisement

ಈ ಯೋಜನೆಯ ಅಡಿಯಲ್ಲಿ ನಾಲ್ಕು ವಿಧವಾದ ಆರೋಗ್ಯ ಸಂಬಂಧಿ ದಾಖಲೆಗಳ ಡಿಜಿಟಲೀಕರಣ ಈಗ ನಡೆಯುತ್ತಿದೆ.

  1. ಆಯುಷ್ಮಾನ್‌ ಭಾರತ್‌ ಹೆಲ್ತ್‌ ಕಾರ್ಡ್‌ (ಆಭಾ ಕಾರ್ಡ್‌) ಸದ್ಯ ಬಳಕೆಯಲ್ಲಿರುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯನ್ನು ಸರಕಾರ ಕ್ರಮೇಣ ಸ್ಥಗಿತಗೊಳಿಸಿ ಅದರ ಬದಲು ದೇಶಾದ್ಯಂತ ಬಳಸಬಹುದಾದ ಎಟಿಎಂ ಕಾರ್ಡ್‌ ರೀತಿಯ ಡಿಜಿಟಲ್‌ ಮಾದರಿಯ ಆಭಾ ಕಾರ್ಡ್‌ ವಿತರಿಸಲಾಗುತ್ತಿದೆ. ಇದು ಆಧಾರ್‌ ಕಾರ್ಡ್‌ನಂತೆ 14 ಡಿಜಿಟ್‌ನ ಪ್ರತ್ಯೇಕ ಗುರುತು ಚೀಟಿ ಆಗಿದೆ. ಈ ನೋಂದಣಿ ಉಚಿತವಾಗಿದ್ದು, ಗ್ರಾಮ ಪಂಚಾಯತ್‌ನ ಗ್ರಾಮ ಒನ್‌ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ ಪ್ರತಿ, ಆಧಾರ್‌ ಕಾರ್ಡ್‌ ನೋಂದಣಿ ಮಾಡಿದ ಮೊಬೈಲ್‌ ನಂಬರ್‌ ಹಾಗೂ ರೇಷನ್‌ ಕಾರ್ಡ್‌ ಪ್ರತಿ ಸಲ್ಲಿಸಿ ಕಾರ್ಡ್‌ ಪಡೆದುಕೊಳ್ಳಬಹುದು.

ಈ ಡಿಜಿಟಲ್‌ ಕಾರ್ಡ್‌ ಹೊಂದಿದವರಿಗೆ ಹಿಂದಿನಂತೆಯೇ ನೋಂದಾಯಿತ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಸರಕಾರಿ ಯೋಜನೆ ಸೌಲಭ್ಯ- ಬಿಪಿಎಲ್‌ ಕಾರ್ಡ್‌ದಾರರಿಗೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ವರೆಗೆ ರೋಗಕ್ಕೆ ಅನುಸಾರವಾಗಿ ಪ್ಯಾಕೇಜ್‌ ದರ ಉಚಿತವಾಗಿ ಸಿಗಲಿದೆ. ಸಾಮಾನ್ಯ ರೋಗಿ (ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ) ಪ್ಯಾಕೇಜ್‌ ದರದ ಶೇ. 30ರಷ್ಟು ಗರಿಷ್ಠ (1.5 ಲಕ್ಷ ರೂ.ವರೆಗೆ) ನೆರವು ದೊರೆಯಲಿದೆ.

ಈ ಯೋಜನೆಯಡಿ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್‌, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ ಚಿಕಿತ್ಸಾ ವಿಧಾನಗಳು ಹಾಗೂ 169 ತೆರನಾದ ತುರ್ತು ಚಿಕಿತ್ಸೆಗಳು ಮತ್ತು ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1,650 ಚಿಕಿತ್ಸೆಗಳಿಗೆ ಕೋಡ್‌ ಪ್ಯಾಕೇಜ್‌ ದರ ನಿಗದಿ ಪಡೆಸಲಾಗಿದೆ.

ಇಲೆಕ್ಟ್ರಾನಿಕ್‌ ವೈಯಕ್ತಿಕ ವೈದ್ಯಕೀಯ ದಾಖಲೆಗಳನ್ನು ಈ ಕಾರ್ಡಿನೊಂದಿಗೆ ಸಂಯೋಜಿಸಿದರೆ ಆ ವ್ಯಕ್ತಿಯು ದೇಶದ ಯಾವುದೇ ವೈದ್ಯರಲ್ಲಿ ಚಿಕಿತ್ಸೆಗೆ ಹೋದರೆ ಸಂಪೂರ್ಣ ಆರೋಗ್ಯ ಕೈಪಿಡಿ ಅದರಲ್ಲಿ ಸಿಗಲಿದೆ. ಈ ಕಾರ್ಡ್‌ ಉಪಯೋಗಿಸಿ ಟೆಲಿ ಕನ್ಸಲ್ಟೆàಷನ್‌ ಮತ್ತು ಈ-ಫಾರ್ಮಸಿ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯ ವಿಮೆ ನೀಡುವ ಕಂಪೆನಿಗಳಿಗೆ ಕ್ಲೇಮ್‌ ಗಳನ್ನು ತ್ವರಿತವಾಗಿ ನಡೆಸಲು ಅನುಕೂಲವಾಗಲಿದೆ. ಆರೋಗ್ಯ ವರದಿಯೊಂದಿಗೆ ಆಯುಷ್ಮಾನ್‌ ಭಾರತ್‌ ಸರಕಾರಿ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ. ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಡಿಸಾcರ್ಜ್‌ ಆಗುವವರೆಗಿನ ಮಾಹಿತಿ, ವ್ಯಕ್ತಿಯ ಆರೋಗ್ಯದ ಎಲ್ಲ ಮಾಹಿತಿಗಳು ಕಾರ್ಡ್ ರೂಪದಲ್ಲಿ ಸಂಗ್ರಹಿಸಿಡಲಾಗುವುದು. ಪ್ರತೀ ಕಾಯಿಲೆ ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳು ವೈದ್ಯರ ಚೀಟಿ, ಅವರು ಸೂಚಿಸಿದ ಔಷಧಗಳ ಮಾಹಿತಿ ಅದರಲ್ಲಿ ಇರಿಸಬಹುದಾಗಿದೆ.

  1. ಆರೋಗ್ಯ ಸೇವೆ ಒದಗಿಸುವವರ ರಿಜಿಸ್ಟ್ರಿ (HPR) : ಈ ಡಿಜಿಟಲೀಕರಣದ ಸೇವೆಯಡಿ ಎಲ್ಲ ವಿಧಾನಗಳ ಚಿಕಿತ್ಸೆ ನೀಡುವ ವೈದ್ಯರು, ದಂತ ವೈದ್ಯರು, ನರ್ಸ್‌ ಗಳು, ಪ್ಯಾರಾಮೆಡಿಕಲ್‌ ಸಿಬಂದಿ ಸ್ವಯಂಪ್ರೇರಿತರಾಗಿ ತಮ್ಮ ಆಧಾರ್‌ ಕಾರ್ಡ್‌ ಹಾಗೂ ಕೌನ್ಸಿಲ್‌ನ ನೋಂದಣಿ ಪ್ರತಿಯೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಇದರಿಂದ ಈ ವೃತ್ತಿಪರರ ಸಂಪೂರ್ಣ ಮಾಹಿತಿ ಈ ಡಿಜಿಟಲೀಕರಣ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ದೊರಕಲಿದೆ ಹಾಗೂ ತಮಗೆ ಸಮೀಪವಿರುವ ವೈದ್ಯರ ಹಾಗೂ ವೃತ್ತಿಪರರ ಸಂಪರ್ಕ ಸಿಗಲಿದೆ. ಜತೆಗೆ ವೈದ್ಯರೊಂದಿಗೆ ಸಂದರ್ಶನ, ಚಿಕಿತ್ಸೆ, ತುರ್ತು ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಸಕಾಲದಲ್ಲಿ ಪಡೆಯಲು ಅಥವಾ ಟೆಲಿ ಸಂದರ್ಶನ ಪಡೆಯಲು ಸಹಾಯವಾಗಲಿದೆ. ಆರೋಗ್ಯ ಸೇವೆ ಒದಗಿಸುವವರು https://hpr.abdm.gov.in ಎಂಬ ಲಿಂಕ್‌ ಸಂದರ್ಶಿಸಿ ನೋಂದಣಿ ಮಾಡಿಕೊಳ್ಳಬಹುದು.
  2. ಆರೋಗ್ಯ ಸೌಲಭ್ಯಗಳ ರಿಜಿಸ್ಟ್ರಿ (HFR): ಈ ಡಿಜಿಟಲೀಕರಣ ವ್ಯವಸ್ಥೆಯಡಿ ಸ್ವಯಂಪ್ರೇರಿತವಾಗಿ ಎಲ್ಲ ಖಾಸಗಿ, ಸರಕಾರಿ ಆಸ್ಪತ್ರೆಗಳು, ಕ್ಲಿನಿಕ್‌, ಡಯಾಗ್ನೊàಸ್ಟಿಕ್‌ ಮತ್ತು ಇಮೇಜಿಂಗ್‌ ಸೆಂಟರ್‌, ಬ್ಲಿಡ್‌ ಬ್ಯಾಂಕ್‌ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಎಲ್ಲ ಆರೋಗ್ಯ ಸೌಲಭ್ಯ ಒದಗಿಸುವವರು ಈ ವ್ಯವಸ್ಥೆಯಡಿಯಲ್ಲಿ ಎಲ್ಲರ ಸಂಪರ್ಕದಲ್ಲಿರುತ್ತಾರೆ. ಸಂಬಂಧ ಪಟ್ಟ ಸಂಸ್ಥೆಯ HFR ನೋಂದಣಿ ಮಾಡಿಕೊಂಡಿರುವ ವ್ಯಕ್ತಿಯು https://facility. ndhm.gov.in/ ಸಂದರ್ಶಿಸಿ ಸ್ವತಃ ನೊಂದಣಿ ಮಾಡಿಕೊಳ್ಳಬಹುದು. ಇದರಡಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳು, ಪರಿಣತ ವೈದ್ಯರು, ತಂತ್ರಜ್ಞರು, ಮೂಲ ಸೌಕರ್ಯಗಳ ವಿವರಗಳನ್ನು ನೋಂದಾಯಿಸಿಕೊಳ್ಳಬಹುದು. ಈ ವಿವರ ಗಳನ್ನು ಅನಂತರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಲಿದ್ದಾರೆ. ಈ ಮೂಲಕ ಆ ಆರೋಗ್ಯ ಸೇವೆಯ ಕೇಂದ್ರ ರಾಷ್ಟ್ರೀಯ ಕೇಂದ್ರೀಕೃತ ಡಿಜಿಟಲೀಕರಣ ಗೊಂಡು ದೇಶಾದ್ಯಂತ ಜನರ ಬಳಕೆಗೆ ಅವಕಾಶ ನೀಡಿದಂತಾಗು ವುದು. ಇದರಿಂದಾಗಿ ಜನ ಸಾಮಾನ್ಯರಿಗೆ ತಮ್ಮ ಸಮೀಪವಿರುವ ಆಸ್ಪತ್ರೆಗಳು ಹಾಗೂ ಸೇವೆಗಳ ಸಂಪೂರ್ಣ ವಿವರ ಸಿಗಲಿದೆ. ತನ್ಮೂಲಕ ಅವರಿಗೆ ಬೇಕಾದ ಅಗತ್ಯ ಸೇವೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ದೇಶಾದ್ಯಂತ ಬಳಸಿಕೊಳ್ಳಲು ಸಹಕಾರಿಯಾಗಿದೆ.
  3. ಇಲೆಕ್ಟ್ರಾನಿಕ್‌ ವೈಯಕ್ತಿಕ ವೈದ್ಯಕೀಯ ದಾಖಲೆಗಳು (EPHR): ಈ ಸೇವೆಯಡಿಯಲ್ಲಿ ವ್ಯಕ್ತಿಯ/ ರೋಗಿಯ ಎಲ್ಲ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಹೊಸ ಆಯುಷ್ಮಾನ್‌ ಕಾರ್ಡ್‌ಗೆ ಸಂಯೋಜನೆಗೊಳಿಸಿದಾಗ ಆ ಕಾರ್ಡ್‌ನಲ್ಲಿ ಆ ವ್ಯಕ್ತಿಯ ಸಂಪೂರ್ಣ ಆರೋಗ್ಯ ಮಾಹಿತಿ ಲಭ್ಯವಿರಲಿದೆ. ಜತೆಗೆ ದೇಶಾದ್ಯಂತ ಯಾವುದೇ ನೊಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಆಭಾ ಕಾರ್ಡ್‌ ಮೂಲಕ ರೋಗಿಯ ಸಂಪೂರ್ಣ ಪೂರ್ವ ಮಾಹಿತಿ ಚಿಕಿತ್ಸೆ ನೀಡುವ ವೈದ್ಯರಿಗೆ ದೊರೆಯುವಂತೆ ಮಾಡಬಹುದಾಗಿದೆ.
Advertisement

ಹೆಚ್ಚು ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ವೈದ್ಯರು, ಇತರ ಆರೋಗ್ಯ ಕಾರ್ಯ ಕರ್ತರು ಹಾಗೂ ಜನರು ಈ ವ್ಯವಸ್ಥೆಯಡಿಯಲ್ಲಿ ನೋಂದಣಿ ಮಾಡಿಕೊಂಡರೆ ಜನರಿಗೆ ದೇಶಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಪಡೆಯಲು, ಆಸ್ಪತ್ರೆಗಳು, ವೈದ್ಯರು, ಆರೋಗ್ಯ ಕೇಂದ್ರ, ವ್ಯವಸ್ಥೆಗಳಿಗೆ ಹೆಚ್ಚು ಜನರ ಸೇವೆ ನೀಡಲು, “ಒಂದು ದೇಶ, ಒಂದೇ ಆರೋಗ್ಯ ಕಾರ್ಡ್‌’ ಎಂಬ ಸಿದ್ಧಾಂತಕ್ಕೆ ಸಹಾಯಕಾರಿಯಾಗಲಿದೆ.

ಆಭಾ ಕಾರ್ಡ್‌ ಸ್ವತಃ ಪಡೆಯುವ ಬಗೆ

ಈ ಕಾರ್ಡ್‌ ಪಡೆಯಲು ಆಧಾರ್‌ ಕಾರ್ಡ್‌ ಅಥವಾ ಡ್ರೈವಿಂಗ್‌ ಲೈಸೆನ್ಸನ್ನು ದಾಖಲೆಯಾಗಿ ನೀಡಬೇಕಾಗುತ್ತದೆ.

 https://facility. ndhm.gov.in/ ಲಿಂಕ್‌ಗೆ ಹೋಗಿ

ಕ್ರಿಯೇಟ್‌ ABHA card ಎಂಬಲ್ಲಿ ಕ್ಲಿಕ್‌ ಮಾಡಿ ನಿಮ್ಮ ಆಧಾರ್‌ ನಂಬರ್‌ ನಮೂದಿಸಿ

ಅ ನಂತರ “ಐ ಅಗ್ರಿ’ ಎಂಬ ಒಪ್ಶನ್‌ ಕ್ಲಿಕ್‌ ಮಾಡಿ

ಅ ನಂತರ “ಐ ಯಾಮ್‌ ನಾಟ್‌ ರೋಬೋಟ್‌’ ಎಂಬ ಆಪ್ಶನ್‌ ಕ್ಲಿಕ್‌ ಮಾಡಿ

 ಅನಂತರ ನಿಮ್ಮ ಆಧಾರ್‌ ಕಾರ್ಡ್‌ ಮಾಹಿತಿ ಕಾಣಿಸುತ್ತದೆ. ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ

 ಆಗ ನಿಮ್ಮ ಆಭಾ ಕಾರ್ಡ್‌ ಸಂಖ್ಯೆ ಕಾಣಿಸುತ್ತದೆ. ಅದನ್ನು ಬರೆದುಕೊಳ್ಳಿ. ಕೆಳಗಿರುವ ಡೌನ್ಲೋಡ್ ಆಪ್ಶನ್‌ ಕ್ಲಿಕ್‌ ಮಾಡಿ. ಆಗ ನಿಮ್ಮ ಆಭಾ ಕಾರ್ಡ್‌ ನಿಮಗೆ ದೊರಕುತ್ತದೆ.

-ಡಾ| ಸಂಜಯ್‌ ಕಿಣಿ, ಸಹಾಯಕ ಪ್ರಾಧ್ಯಾಪಕರು

ಡಾ| ಅಶ್ವಿ‌ನಿ ಕುಮಾರ ಗೋಪಾಡಿ, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಕಮ್ಯೂನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಕಲ್‌ ಸೂಪರಿಂಟೆಂಡೆಂಟ್‌, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)

Advertisement

Udayavani is now on Telegram. Click here to join our channel and stay updated with the latest news.

Next