Advertisement

ದೇಶವ್ಯಾಪಿ ಬಳಸುವ ಹೊಸ ಡಿಜಿಟಲ್‌ ಆಯುಷ್ಮಾನ್‌ ಕಾರ್ಡ್‌

08:50 AM Sep 10, 2022 | Team Udayavani |

ಮಂಗಳೂರು : ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಇದರ ಬದಲು ದೇಶವ್ಯಾಪಿ ಬಳಸುವ ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ ಡಿಜಿಟಲ್‌ ಕಾರ್ಡ್‌ ವಿತರಿಸಲಾಗುತ್ತಿದೆ. ಇದರ ಮೂಲಕ ದೇಶದ ಯಾವುದೇ ಭಾಗದಲ್ಲೂ ಆರೋಗ್ಯ ಸೇವೆ ಪಡೆಯಬಹುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದರು.

Advertisement

ಈಗಾಗಲೇ ವಿತರಿಸಿರುವ ಆರೋಗ್ಯ ಕಾರ್ಡ್‌ಗಳು ಸದ್ಯದಲ್ಲೇ ಅಮಾನ್ಯವಾಗಲಿದೆ. ಅದರ ಬದಲು ಎಟಿಎಂ ಕಾರ್ಡ್‌ ರೀತಿಯ ಡಿಜಿಟಲ್‌ ಮಾದರಿಯ ಕಾರ್ಡ್‌ ನೀಡಲಾಗುವುದು. ಇದಕ್ಕಾಗಿ ನಾಗರಿಕರು ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಪ್ರತಿ ನೀಡಿ ತಮ್ಮ ಹತ್ತಿರದ ಗ್ರಾಮ ಒನ್‌ ಕೇಂದ್ರದ ಮೂಲಕ ಉಚಿತವಾಗಿ ಹೊಸ ಆರೋಗ್ಯ ಕಾರ್ಡ್‌ ಪಡೆದುಕೊಳ್ಳಬಹುದು ಎಂದವರು ನಗರದ ಆರೋಗ್ಯ ಇಲಾಖೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಆಯುಷ್ಮಾನ್‌ ಕಾರ್ಡ್‌ ಹೊಂದಿದ್ದವರು ಕೂಡ ಸರಕಾರಿ ಆರೋಗ್ಯ ಸೇವೆ ಪಡೆಯಲು ಈ ಹೊಸ ಕಾರ್ಡ್‌ ಮಾಡಿಸಬೇಕು. ಕಾರ್ಡ್‌ ನೋಂದಣಿಗೆ ದ.ಕ. ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರು ಸಹಿತ ಒಟ್ಟು 17,40,239 ಮಂದಿಯ ಗುರಿ ಇರಿಸಿಕೊಂಡಿದ್ದೇವೆ. 3 ತಿಂಗಳ ಒಳಗಾಗಿ ಈ ಗುರಿ ಸಾಧಿಸುತ್ತೇವೆ. ಈ ಕಾರ್ಡ್‌ ಮೂಲಕ ಬಿಪಿಎಲ್‌ ಕುಟುಂಬಗಳು ವರ್ಷದಲ್ಲಿ ಗರಿಷ್ಠ 5 ಲಕ್ಷ ರೂ. ಹಾಗೂ ಎಪಿಎಲ್‌ ಕುಟುಂಬಗಳಿಗೆ ಗರಿಷ್ಠ 1.50 ಲಕ್ಷದ ವರೆಗಿನ ಚಿಕಿತ್ಸೆ ವೆಚ್ಚ ಪಡೆಯಬಹುದು. ಸದ್ಯ ಕೆಲವು ದಿನಗಳ ಮಟ್ಟಿಗೆ ಹಳೆಯ ಕಾರ್ಡ್‌ನಲ್ಲೂ ಸೌಲಭ್ಯ ಸಿಗಲಿದೆ. ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಮೂಲಕವೂ ಸೇವೆ ಪಡೆಯಬಹುದು ಎಂದರು.

ಆಯುಷ್ಮಾನ್‌ ಕಾರ್ಡ್‌ ಯೋಜನೆಯಡಿ ಹಲವು ರೋಗಗಳಿಗೆ ಸರಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಅಲ್ಲಿ ಸಿಗದ ಚಿಕಿತ್ಸೆಗೆ ಮಾತ್ರ ಆಯಾ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗೆ ರೆಫರಲ್‌ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.

ಇದನ್ನೂ ಓದಿ : ಕರಾವಳಿಯ ಕೆಲವೆಡೆ ಮಳೆ : ಉಡುಪಿ ಜಿಲ್ಲೆಯಾದ್ಯಂತ ಇಂದಿನಿಂದ 5 ದಿನಗಳ ಕಾಲ ಭಾರೀ ಮಳೆ

Advertisement

ಡಿಜಿಟಲ್‌ ಆರೋಗ್ಯ ಖಾತೆ
ಸಾರ್ವಜನಿಕರು ಪಡೆದುಕೊಂಡ ಆರೋಗ್ಯ ಸೇವೆಯನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ನಡಿ ಡಿಜಿಟಲ್‌ ಖಾತೆ ತೆರೆಯಬೇಕು. ಡಿಜಿಟಲ್‌ ಆರೋಗ್ಯ ಖಾತೆಗಳನ್ನು ಈ ಖಾತೆಗೆ ಲಿಂಕ್‌ ಮಾಡಬಹುದಾಗಿದ್ದು, ಪ್ರತೀ ವ್ಯಕ್ತಿಯ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಚಿಕಿತ್ಸೆ ಮತ್ತು ಔಷಧೋಪಚಾರ ಎಲ್ಲದಕ್ಕೂ ವೈದ್ಯರನ್ನು ಖುದ್ದು ಕಾಣುವ ಅನಿವಾರ್ಯತೆ ಕಡಿಮೆ ಮಾಡುವ ಉದ್ದೇಶ ಇದರಿಂದ ಸಾಧ್ಯ ಎಂದು ಆಯುಷ್ಮಾನ್‌ ಭಾರತ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಸುದರ್ಶನ್‌ ಹೇಳಿದರು.
ಹೆಲ್ತ್‌ ಐಡಿಗಾಗಿ ಸಾರ್ವಜನಿಕರು //abha.abdm.gov.in/register ಮೂಲಕ ನೋಂದಣಿ ಮಾಡಬೇಕು. ಆಧಾರ್‌ ಅಥವಾ ಡ್ರೆçವಿಂಗ್‌ ಲೈಸನ್ಸ್‌ ಅನ್ನು ದಾಖಲೆಯಾಗಿ ನೀಡಬೇಕು. ಆಗ 14 ಸಂಖ್ಯೆಯ ಡಿಜಿಟಲ್‌ ನಂಬರ್‌ ಜತೆ ಐಡಿ ಕಾರ್ಡ್‌ ಸಿಗುತ್ತದೆ ಎಂದರು.

ಜಿಲ್ಲಾ ಸಂಯೋಜನಾಧಿಕಾರಿ ಡಾ| ಯಶಸ್ವಿನಿ, ಪ್ರಾದೇಶಿಕ ಸಂಯೋಜಕಿ ಡಾ| ನೌಶತ್‌ ಬಾನು, ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next