Advertisement

ಆಯುಷ್ಮಾನ್‌ ಭಾರತ್‌ಗೆ  ಕೇಂದ್ರ ಸಂಪುಟ ಸಮ್ಮತಿ

07:30 AM Mar 22, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 10 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿರುವ ಈ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬ ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ಪಡೆಯಲಿದೆ. ಈ ಯೋಜನೆ ಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ವಿಲೀನಗೊಳಿಸಲಾಗುತ್ತದೆ.

Advertisement

ವಯಸ್ಸು ಮತ್ತು ಕುಟುಂಬ ಸದಸ್ಯರ ಸಂಖ್ಯೆಯಲ್ಲಿ ಯಾವುದೇ ಮಿತಿ ಇರುವುದಿಲ್ಲ. ಆಸ್ಪತ್ರೆಗೆ ದಾಖಲಾಗುವ ಮೊದಲು ಹಾಗೂ ನಂತರದ ವೆಚ್ಚಗಳನ್ನೂ ವಿಮೆ ಒಳಗೊಂಡಿರುತ್ತದೆ. ಅಷ್ಟೇ ಅಲ್ಲ, ಈಗಾಗಲೇ ಕಾಯಿಲೆ ಹೊಂದಿದ್ದರೂ, ವಿಮೆ ಮೂಲಕ ಕ್ಲೇಮ್‌ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಆಸ್ಪತ್ರೆಗೆ ಆಗಮಿಸುವುದಕ್ಕೆ ಉಂಟಾದ ವೆಚ್ಚವನ್ನೂ ವಿಮೆ ಭರಿಸುತ್ತದೆ. ದೇಶದ ಯಾವುದೇ ಭಾಗದಲ್ಲಿರುವ ನಿಯೋಜಿತ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆಯನ್ನು ಪಡೆಯಬಹುದು.

ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ: ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸ್ವಯಂಚಾಲಿತವಾಗಿ ನಿಯೋಜನೆ ಮಾಡಲಾಗಿರುತ್ತದೆ. ಖಾಸಗಿ ಆಸ್ಪತ್ರೆಗಳನ್ನು ಆನ್‌ಲೈನ್‌ನಲ್ಲಿ ನಿಗದಿತ ಮಾನದಂಡದ ಆಧಾರದಲ್ಲಿ ನಿಯೋಜಿಸಲಾಗುತ್ತದೆ.

ಚಿಕಿತ್ಸೆ ವೆಚ್ಚ ನಿಗದಿ: ಚಿಕಿತ್ಸೆ ವೆಚ್ಚವನ್ನು ಪ್ಯಾಕೇಜ್‌ ಆಧಾರದಲ್ಲಿ ಪೂರ್ವನಿಗದಿಗೊಳಿಸಲಾಗುತ್ತದೆ. ಚಿಕಿತ್ಸೆಯ ಎಲ್ಲ ವೆಚ್ಚವನ್ನೂ ಈ ಪ್ಯಾಕೇಜ್‌ ಒಳಗೊಂಡಿರುತ್ತದೆ. ಇದರಿಂದ ಆಸ್ಪತ್ರೆಗಳು ಫ‌ಲಾನುಭವಿಗಳಿಗೆ ಚಿಕಿತ್ಸೆಗೆ ವಿಪರೀತ ವೆಚ್ಚವನ್ನು ವಿಧಿಸುವುದನ್ನು ನಿಯಂತ್ರಿಸಬಹುದಾಗಿದೆ. ಪ್ಯಾಕೇಜ್‌ ದರವನ್ನು ನಿಗದಿತ ಮಿತಿಯಲ್ಲಿ ರಾಜ್ಯಗಳು ಬದಲಿಸಬಹುದಾಗಿದೆ.

ಅನುಷ್ಠಾನ ವಿಧಾನ ರಾಜ್ಯಗಳ ಮರ್ಜಿ: ವಿಮೆ ಯೋಜನೆಯನ್ನು ರಾಜ್ಯಗಳೇ ಅನುಷ್ಠಾನಗೊಳಿಸ ಬೇಕಿದ್ದು, ಯಾವ ವಿಧಾನದಲ್ಲಿ ಜಾರಿಗೊಳಿಸಬೇಕು ಎಂಬುದನ್ನೂ ಅವು ನಿರ್ಧರಿಸಲಿವೆ. ವಿಮೆ ಕಂಪೆನಿಗಳ ಮೂಲಕ ಇದನ್ನು ಜಾರಿಗೊಳಿಸಲೂ ಅವಕಾಶವಿದೆ. ಜತೆಗೇ ಟ್ರಸ್ಟ್‌ ಅಥವಾ ಸೊಸೈಟಿಯ ಮೂಲಕ ನಿರ್ವಹಿಸ ಬಹುದು. 

Advertisement

ಪ್ರತ್ಯೇಕ ಕೌನ್ಸಿಲ್‌ ಸ್ಥಾಪನೆ: ಯೋಜನೆಯನ್ನು ನಿರ್ವಹಿಸಲು ಪ್ರತ್ಯೇಕ ಆಯುಷ್ಮಾನ್‌ ಭಾರತ್‌ ರಾಷ್ಟ್ರೀಯ ಆರೋಗ್ಯ ರಕ್ಷಣೆ ಮಿಷನ್‌ ಕೌನ್ಸಿಲ್‌ ಸ್ಥಾಪಿಸಲಾಗುತ್ತದೆ. ಇದರ ನೇತೃತ್ವವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ವಹಿಸಿರುತ್ತಾರೆ. ಅಲ್ಲದೆ ಆಡಳಿತ ಮಂಡಳಿ ಹಾಗೂ ಏಜೆನ್ಸಿಯನ್ನೂ ಸ್ಥಾಪಿಸಲಾಗಿದ್ದು, ಇವು ವಿವಿಧ ಹಂತದಲ್ಲಿ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ವಹಿಸಲಿವೆ. ರಾಜ್ಯ ಮಟ್ಟದಲ್ಲಿ ರಾಜ್ಯ ಆರೋಗ್ಯ ಏಜೆನ್ಸಿಯನ್ನು ಸ್ಥಾಪಿಸಬೇಕಿದೆ. ಕೇಂದ್ರ ಸರಕಾರದಿಂದ ಈ ರಾಜ್ಯದ ಏಜೆನ್ಸಿಗಳಿಗೆ ನೇರವಾಗಿ ಅನುದಾನ ವರ್ಗಾವಣೆ ಮಾಡಲಾಗುತ್ತದೆ.

ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳ?: ಆನುವಂಶಿಕ ರೋಗಗಳನ್ನೂ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ವಿಮೆ ನಿಯಂತ್ರಕ ಪ್ರಾಧಿಕಾರ (ಐಆರ್‌ಡಿಎಐ) ಸೂಚಿಸಿದ ನಂತರದಲ್ಲಿ, ವಿಮೆ ಪ್ರೀಮಿಯಂ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ವಿಮೆ ಕಂಪೆನಿಗಳು ಐಆರ್‌ಡಿಎಐ ಮೊರೆ ಹೋಗಲಿವೆ. ಆನುವಂಶಿಕ ರೋಗದ ಆಧಾರದಲ್ಲಿ ಯಾವುದೇ ವಿಮೆ ಕ್ಲೇಮ್‌ ತಿರಸ್ಕರಿಸಬಾರದು ಎಂದು ವಿಮೆ ಕಂಪೆನಿಗಳಿಗೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ದಿಲ್ಲಿ ಹೈಕೋರ್ಟ್‌ ಇತ್ತೀಚೆಗಷ್ಟೇ ತೀರ್ಪು ನೀಡಿತ್ತು.

ಪ್ರೀಮಿಯಂ ಮೊತ್ತ ಎಷ್ಟು?
 ಸದ್ಯಕ್ಕೆ ಪ್ರೀಮಿಯಂ ಮೊತ್ತದ ಬಗ್ಗೆ ಯಾವುದೇ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಸ್ತಾಪಿಸಿಲ್ಲ. ಆದರೆ ಪ್ರೀಮಿಯಂ ಮೊತ್ತದ ಹಂಚಿಕೆಯನ್ನು ರಾಜ್ಯದೊಂದಿಗೆ ಕೇಂದ್ರ ಹಂಚಿಕೊಳ್ಳಲಿದೆ.

ಯಾರು ಅರ್ಹರು?
ಕಚ್ಚಾ ಗೋಡೆ, ಛಾವಣಿ ಹೊಂದಿರುವ 1 ಕೋಣೆಯ ಮನೆಯಲ್ಲಿರುವರು ಪರಿಶಿಷ್ಟ ಜಾತಿ, ಪಂಗಡದ ಕುಟುಂಬ ನಿರಾಶ್ರಿತ ಕೂಲಿ ಕಾರ್ಮಿಕರ ಕುಟುಂಬ ಮಲಹೊರುವ ಕುಟುಂಬ, ಬುಡಕಟ್ಟು ಕುಟುಂಬ ಹಾಗೂ ಇತರ

ಆನ್‌ಲೈನ್‌ ವ್ಯವಸ್ಥೆ ಶೀಘ್ರ
ನೀತಿ ಆಯೋಗದ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರವು ಈ ಯೋಜನೆಗೆ ಪ್ರತ್ಯೇಕ ಆನ್‌ಲೈನ್‌ ವ್ಯವಸ್ಥೆಯನ್ನು ರೂಪಿಸಲಿದ್ದು, ಇದು ಅನುಷ್ಠಾನದ ಜತೆಗೆ ದುರ್ಬಳಕೆಯನ್ನೂ ನಿಯಂತ್ರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next