Advertisement

ಆಯುಷ್ಮಾನ್‌ಭವ,ಆರೋಗ್ಯ ಕರ್ನಾಟಕ ವಿಲೀನಕ್ಕೆ ಚಿಂತನೆ:ಶಿವಾನಂದ ಪಾಟೀಲ್‌

06:00 AM Jun 21, 2018 | |

ಬೆಂಗಳೂರು: ರನ ಸಾಮಾನ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರ ಆಯುಷ್ಮಾನ್‌ಭವ ಯೋಜನೆ ಜತೆಗೆ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ವಿಲೀನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

Advertisement

ವಿಶ್ವ ಯೋಗ ದಿನಾಚರಣೆ ಪೂರ್ವಭಾವಿ ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಯುಷ್ಮಾನ್‌ಭವ ವಿಮೆ ಯೋಜನೆ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಹೆಲ್ತ್‌ ಕಾರ್ಡ್‌ ಯೋಜನೆ ವಿಲೀನಗೊಳಿಸುವುದರಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಈ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಹೆಲ್ತ್‌ ಕಾರ್ಡ್‌ ವಿತರಣೆ ಕಾರ್ಯ ನಡೆಯುತ್ತಿದೆ. ಈ ಯೋಜನೆಯ ಬಗ್ಗೆ ರೋಗಿಗಳಿಗೆ ಸರಿಯಾದ ಮಾಹಿತಿ ಕೊರತೆಯಿಂದ ಆಸ್ಪತ್ರೆಗಳಲ್ಲಿ ಗೊಂದಲ ಉಂಟಾಗುತ್ತಿದೆ. ಹೆಲ್ತ್‌ ಕಾರ್ಡ್‌ ದೊರೆಯದ ರೋಗಿಗಳು ಅಂತ್ಯೋದಯ ಅಥವಾ ಬಿಪಿಎಲ್‌ ಪಡಿತರ ಚೀಟಿ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಈಗಾಗಲೇ 405 ಖಾಸಗಿ ಆಸ್ಪತ್ರೆಗಳು ಒಪ್ಪಂದ ಮಾಡಿಕೊಂಡಿವೆ. 350 ಖಾಸಗಿ ಆಸ್ಪತ್ರೆಗಳು ಒಪ್ಪಂದ ಪತ್ರಕ್ಕೆ ಸಹಿ ಹಾಕಿಲ್ಲ. ಜೂನ್‌ 30ರವರೆಗೂ ಒಪ್ಪಂದ ಮಾಡಿಕೊಳ್ಳಲು ಅವಕಾಶ ಇದೆ. ಚಿಕಿತ್ಸಾ ದರ ನಿಗದಿ ಬಗ್ಗೆ ಕೆಲವು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಜೂನ್‌ 26 ಅಥವಾ 27 ರಂದು ವೈದ್ಯಕೀಯ ಸಂಘಟನೆಗಳ ತತೆಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಯೋಗಾ ಡೇ ಆಚರಣೆ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕುಮಟ್ಟ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 13 ಸಾವಿರ ಯೋಗ ಪಟುಗಳು ಏಕಕಾಲಕ್ಕೆ ಯೋಗಾಸನ ಪ್ರದರ್ಶನ ನೀಡಲಿದ್ದಾರೆ. 

Advertisement

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಾಲ್ಗೊಳ್ಳಲಿದ್ದಾರೆ. 5 ಸಾವಿರ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಿಶೇಷ ಬಸ್‌ ವ್ಯವಸ್ಥೆ ಹಾಗೂ ಕಾರ್ಯಕ್ರಮದ ನಂತರ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಯಶಸ್ವಿನಿ ಮೂರು ತಿಂಗಳು ಮುಂದುವರಿಕೆ
ರಾಜ್ಯ ಸರ್ಕಾರ ಈಗಾಗಲೇ ಜಾರಿಗೊಳಸಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಇನ್ನೂ ಮೂರು ತಿಂಗಳು ಮುಂದುವರಿಸಲು ತೀರ್ಮಾನಿಸಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆ ಸಂಪೂರ್ಣ ಜಾರಿಯಾಗುವವರೆಗೂ ಕನಿಷ್ಠ ಮೂರು ತಿಂಗಳು ಯೋಜನೆ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next