Advertisement

Mangaluru ವೆನ್ಲಾಕ್‌ ನಲ್ಲೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌

11:40 PM Aug 30, 2024 | Team Udayavani |

ಮಂಗಳೂರು: ದೇಶದ ಎರಡನೇ ಹಾಗೂ ಕರ್ನಾಟಕದ ಮೊದಲ ಆಯುಷ್‌ನ ಕ್ರೀಡಾಳುಗಳ ಆರೋಗ್ಯ ಕೇಂದ್ರ (ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌)ವನ್ನು ನಗರದಲ್ಲಿ ಆರಂಭಿಸುವ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ಕೇಂದ್ರ ಆಯುಷ್‌ ಮಿಷನ್‌ ಸಮ್ಮತಿಸಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ.

Advertisement

ಅದರಂತೆ ಪ್ರಾಥಮಿಕ ಹಂತದಲ್ಲಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಕೇಂದ್ರವನ್ನು ಆರಂಭಿಸಲು ಆಯುಷ್‌ ಮಿಷನ್‌ ಸೂಚಿಸಿದೆ. ಕ್ರೀಡಾಳುಗಳ ಆರೋಗ್ಯ ನಿರ್ವಹಣೆಗೆಂದೇ ಪ್ರತ್ಯೇಕವಾಗಿ ಇರುವಂಥ ಕೇಂದ್ರ ಇದಾಗಲಿದೆ.

ಈಗಾಗಲೇ ಆಯುಷ್‌ನ ಕೆಲವು ವಿಭಾಗಗಳನ್ನು ಹೊಂದಿರುವ ಮೊದಲನೇ ಕ್ರೀಡಾ ಔಷಧ ಕೇಂದ್ರವು ತ್ರಿಶ್ಶೂರ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಆಯುಷ್‌ ಮಿಷನ್‌ ನಡಿ ಆರಂಭಿಸುತ್ತಿರುವ ಎರಡನೇ ಅಎಲ್ಲ ವಿಭಾಗಗಳನ್ನು ಒಳಗೊಂಡ ದೇಶದ ಮೊದಲ ಅಸ್ಪತ್ರೆ ಮಂಗಳೂರಿನದ್ದು ಎನ್ನಲಾಗಿದೆ. ಇದು ಕ್ರೀಡಾಳುಗಳಿಗೆಂದೇ ಇರುವ ಪ್ರತ್ಯೇಕ ಮೆಡಿಕಲ್‌ ಸೆಂಟರ್‌ ಆಗಿರಲಿದೆ.

ಪ್ರಾಥಮಿಕ ಹಂತದಲ್ಲಿ ಸ್ಟಾರ್ಟ್‌ ಅಪ್‌ ಮಾದರಿಯಲ್ಲಿ ವೆನ್ಲಾಕ್‌ ಆಯುಷ್‌ ಆಸ್ಪತ್ರೆಯಲ್ಲಿ ಐದಾರು ಹಾಸಿಗೆಗಳನ್ನು ಒಳಗೊಂಡ ಕೇಂದ್ರದ ಒಪಿಡಿ ವಿಭಾಗವನ್ನು ಆರಂಭಿಸಲಾಗುತ್ತಿದೆ. ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಹುದ್ದೆಗಳು ಮಂಜೂರಾಗಿವೆ.

ವರದಿ ಸಲ್ಲಿಕೆ
ವೆನ್ಲಾಕ್‌ನಲ್ಲಿ ಔಷಧ ಕೇಂದ್ರ ಆರಂಭವಾದ ಬಳಿಕ ಅದರ ಕಾರ್ಯನಿರ್ವಹಣೆ, ಪ್ರಯೋಜನ ಪಡೆದ ಕ್ರೀಡಾಪಟುಗಳ ಸಂಖ್ಯೆ, ನೀಡುತ್ತಿರುವ ಚಿಕಿತ್ಸೆ ವಿವರಗಳು ಇತ್ಯಾದಿ ಕುರಿತು ಕೇಂದ್ರ ಆಯುಷ್‌ ಇಲಾಖೆಗೆ ವರದಿ ಸಲ್ಲಿಸಬೇಕು.ಇದರ ಆಧಾರದಲ್ಲಿ ಕೇಂದ್ರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸಿಗುವ ಸಂಭವವಿದೆ ಎನ್ನುತ್ತಾರೆ ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮೊಹಮ್ಮದ್‌ ಇಕ್ಬಾಲ್‌.

Advertisement

ಮೂವತ್ತು ಸೆಂಟ್ಸ್‌ ಜಾಗ
ಆಯಷ್‌ ಕೇಂದ್ರಕ್ಕೆ ಪೂರಕವಾಗಿ ಕ್ರೀಡಾಂಗಣ, ಟ್ರ್ಯಾಕ್‌, ಈಜುಕೊಳ ಮೊದಲಾದವು ಅಗತ್ಯವಿರುವ ಕಾರಣ ಮಂಗಳಾ ಕ್ರೀಡಾಂಗಣದ ಬಳಿಯಲ್ಲೇ ಕೇಂದ್ರ ಸ್ಥಾಪನೆ ಸೂಕ್ತ ಎನಿಸಿದೆ. ಅದರಂತೆ ಕರಾವಳಿ ಉತ್ಸವ ಮೈದಾನ ಬಳಿ ಸುಮಾರು 30 ಸೆಂಟ್ಸ್‌ ಜಾಗ ಲಭ್ಯವಿದ್ದು, ಕಟ್ಟಡ ನಿರ್ಮಾಣಕ್ಕೆ ಸುಮಾರು 8 ಕೋಟಿ ರೂ. ಅನುದಾನ ಬೇಕಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಆಯುಷ್‌ ಮಿಷನ್‌ ಶೇ.60 ರಷ್ಟು ಅನುದಾನ ನೀಡಲಿದ್ದು, ರಾಜ್ಯ ಸರಕಾರ ಮತ್ತು ರಾಜ್ಯದಿಂದ ಶೇ.40 ರಷ್ಟು ಅನುದಾನ ನೀಡಬೇಕು. ಈ ಹಿನ್ನೆಲೆಯಲ್ಲಿ ಮೊದಲು ವೆನ್ಲಾಕ್‌ ನಲ್ಲಿ ಒಪಿಡಿ ವ್ಯವಸ್ಥೆ ಆರಂಭಿಸಿ ನಂತರ ವಿಸ್ತರಿಸುವ ಆಲೋಚನೆಯಿದೆ.

ಮಂಗಳೂರಿಗೆ ಮತ್ತಷ್ಟು ಮಹತ್ವ
ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌ ಮಂಗಳೂರಿನಲ್ಲಿ ಆರಂಭಿಸುತ್ತಿರುವುದರ ಹಿಂದೆ ಎರಡು ಕಾರಣಗಳಿವೆ. ಈಗಾಗಲೇ ಮೆಡಿಕಲ್‌ ಹಾಗೂ ಶೈಕ್ಷಣಿಕ ತಾಣ (ಹಬ್‌) ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೀಡೆ ಬಗೆಗಿನ ಆಸಕ್ತಿಯೂ ಯುವಜನರಲ್ಲಿ ಹೆಚ್ಚುತ್ತಿದೆ. ಇದರೊಂದಿಗೆ ಇಂಥ ಕೇಂದ್ರ ಬಂದರೆ ಮೆಡಿಕಲ್‌ ಹಬ್‌ನ ಪರಿಕಲ್ಪನೆಗೆ ಇನ್ನಷ್ಟು ಒತ್ತು ನೀಡಿದಂತಾಗಲಿದೆ. ಇದಲ್ಲದೇ, ರಾಷ್ಟ್ರೀಯ ಆಯುಷ್‌ ಮಿಷನ್‌ ನಡಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶವಿದೆ. ಇದರಡಿ ರಾಷ್ಟ್ರೀಯ ಮಟ್ಟ ಹಾಗೂ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಕ್ರೀಡಾ ಔಷಧ ಕೇಂದ್ರದ ಪ್ರಸ್ತಾವನೆ ಸಲ್ಲಿಕೆಯಾಗಿರಲಿಲ್ಲ. ಹಾಗಾಗಿ ಇದೊಂದು ವಿನೂತನ ಯೋಜನೆಯನ್ನು ಜಾರಿಗೊಳಿಸುವ ಹೊಣೆಯನ್ನು ಜಿಲ್ಲಾ ಆಯುಷ್‌ ಇಲಾಖೆ ಕೈಗೆತ್ತಿಕೊಂಡಿತು. ಹಾಗಾಗಿ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಈ ಕೇಂದ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಂಗಳೂರಿನ ಮಹತ್ವವೂ ಹೆಚ್ಚಲಿದೆ.

ಕಾರ್ಯಾಚರಣೆ ಹೇಗೆ?
ಆಯುಷ್‌ ಕ್ರೀಡಾ ಔಷಧ ಕೇಂದ್ರದಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಒಳಗೊಂಡಿದೆ. ಫಿಟ್ನೆಸ್‌ ಮ್ಯಾನೇಜ್‌ಮೆಂಟ್‌ ಮತ್ತು ಇಂಜುರಿ ಮ್ಯಾನೇಜ್‌ಮೆಂಟ್‌ ಎನ್ನುವ ಎರಡು ವಿಭಾಗಗಳಿದ್ದು, ಆಟಗಾರರಿಗೆೆ ಅಗತ್ಯವಿರುವ ಫಿಟೆ°ಸ್‌ ಮಟ್ಟವನ್ನು ಅಂದಾಜಿಸಲು ಫಿಟೆ°ಸ್‌ ಲ್ಯಾಬ್‌ ಇರಲಿದೆ. ಅದರಲ್ಲಿ ಫಿಟ್ನೆಸ್ ಅಳೆಯುವ ಮಾಪನ, ಡಯಟ್‌, ಲೈಫ್‌ಸ್ಟೈಲ್‌ ಮ್ಯಾನೇಜ್‌ಮೆಂಟ್‌, ಆಹಾರ, ಔಷಧ, ಕೌನ್ಸೆಲಿಂಗ್‌, ಆಯುಷ್‌ ಸಪ್ಲಿಮೆಂಟ್‌ ಮೊದಲಾದವು ಪ್ರಮುಖವಾಗಿವೆ. ಇಂಜುರಿ ಮ್ಯಾನೇಜ್‌ಮೆಂಟ್‌ನಡಿ ಆಟದ ಸಂದರ್ಭ ಉಂಟಾಗುವ ಗಂಟು, ಕೀಲು ನೋವು, ಗಾಯಗಳನ್ನು ಗುಣಪಡಿಸಲಾಗುತ್ತದೆ. ಕೇಂದ್ರಕ್ಕೆ ಸ್ಥಳೀಯವಾಗಿ ಮಾತ್ರವಲ್ಲದೆ ದೇಶದ ವಿವಿಧೆಡೆಯಿಂದ ಬರುವ ಕ್ರೀಡಾಪಟುಗಳೂ ಚಿಕಿತ್ಸೆಗೆಂದು ಬರಲಿದ್ದು, ಕ್ರೀಡಾ ಪ್ರಯೋಗಾಲಯ, ಥೆರಪಿ ಸೆಂಟರ್‌, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ದರ್ಜೆಯ ಮೂಲ ಸೌಕರ್ಯ ಇರುವ ಕಟ್ಟಡದ ಅಗತ್ಯವೂ ಇದೆ.

ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌ಗೆ ಸಂಬಂಧಿಸಿದ ದಕ್ಷಿಣ ಕನ್ನಡ ಅಯುಷ್‌ ಇಲಾಖೆ ಕಳುಹಿಸಿರುವ ಡಿಪಿಆರ್‌ಗೆ ರಾಜ್ಯ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರದಿಂದಲೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಾಥಮಿಕ ಹಂತದಲ್ಲಿ ವೆನ್ಲಾಕ್‌ ನಲ್ಲಿರುವ ಆಯುಷ್‌ ಆಸ್ಪತ್ರೆಯಲ್ಲಿ ಆರಂಭಿಸುವಂತೆ ಕೇಂದ್ರವು ಸೂಚಿಸಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಬೇಕಾದ ಪ್ರಕ್ರಿಯೆಗಳು ನಡೆಯುತ್ತಿವೆ.
– ಡಾ| ಅನಂತ ದೇಸಾಯಿ, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಆಯುಷ್‌ ಮಿಷನ್‌ ಕರ್ನಾಟಕ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next