Advertisement
ಕೋವಿಡ್-19 ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸನಿಹ ನೂತನವಾಗಿ ನಿರ್ಮಾಣ ಗೊಂಡಿರುವ ಆಯುಷ್ ಆಸ್ಪತ್ರೆಯನ್ನೂ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ, ಉದ್ಘಾಟನೆಗೂ ಮುನ್ನವೇ ಕೋವಿಡ್-19 ರೋಗಿಗಳ ಸೇವೆಗೆ ಆಯುಷ್ ಆಸ್ಪತ್ರೆ ಉಪಯೋಗವಾಗುತ್ತಿದೆ.
ಯು. ಟಿ. ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಗಿದ್ದಾಗ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದರು. 2018ರ ಮಾರ್ಚ್‌ನಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿತ್ತು. ಆದರೆ, ಕುಂಟುತ್ತಾ ಸಾಗಿದ್ದ ಕಾಮಗಾರಿಯಿಂದಾಗಿ ಆಸ್ಪತ್ರೆ ರೋಗಿಗಳ ಸೇವೆಗೆ ತೆರೆದುಕೊಳ್ಳುವುದು ವಿಳಂಬವಾಗಿತ್ತು. ಇದೀಗ ಉದ್ಘಾಟನೆಗೆ ಸಿದ್ಧ ಗೊಂಡರೂ ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಉದ್ಘಾಟನೆಯಾಗುವುದು ಸಂಶಯ. ಹಾಗಾಗಿ ಆಯುರ್ವೇದ ಚಿಕಿತ್ಸೆಗಳು ಲಭ್ಯವಾಗಲು ಇನ್ನೆಷ್ಟು ದಿನಗಳು ತಗಲುತ್ತವೆ ಎಂಬುದೂ ಅನಿಶ್ಚಿತ.
Related Articles
ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್ ವಿಭಾಗದ ಮುಂಭಾಗದಲ್ಲಿ ಆಯುಷ್ ಮೆಡಿಸಿನಲ್ ಪ್ಲ್ರಾಂಟ್ ಗಾರ್ಡನ್ ನಿರ್ಮಿಸಲಾಗಿದೆ. ಸ್ವಚ್ಛ ಪರಿಸರ, ಗಾಳಿ, ಆಹ್ಲಾದಕರ ವಾತಾವರಣ ರೋಗಿಗಳಿಗೆ ಸಿಗುವಂತಾಗಲು ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಮುಂದೆ ಯೋಗ ಮತ್ತು ರೀಹ್ಯಾಬಿಲಿಟೇಶನ್ ಒದಗಿಸಿಕೊಡುವ ಚಿಂತನೆಯೂ ಇದೆ ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿಯವರು.
Advertisement
ಲಭ್ಯ ಸೌಲಭ್ಯಗಳೇನು?ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಯೊಂದಿಗೆ ಯೋಗ, ನ್ಯಾಚುರೋಪಥಿ, ಯುನಾನಿ, ಹೋಮಿಯೋಪಥಿ ಸಹಿತ ಎಲ್ಲ ಚಿಕಿತ್ಸೆಗಳು ಲಭ್ಯವಿವೆ. ಈಗಾಗಲೇ ಆಸ್ಪತ್ರೆಯ ಲಭ್ಯ ಸ್ಥಳದಲ್ಲಿ ಹೊರರೋಗಿ ವಿಭಾಗವನ್ನು ಆರಂಭಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಇರುವ ಆಯುಷ್ ವೈದ್ಯರು ಮತ್ತು ಕಾಲೇಜುಗಳ ಸಹಕಾರದೊಂದಿಗೆ ವಿಭಾಗದಲ್ಲಿ ಚಿಕಿತ್ಸೆಗಳು ನಡೆಯುತ್ತಿವೆ. ಕಾಮಗಾರಿ ಮುಗಿದಿದೆ
ಆಯುಷ್ ಆಸ್ಪತ್ರೆ ಕಾಮಗಾರಿ ಮುಗಿದಿದೆ. ಸದ್ಯ ಕೋವಿಡ್-19 ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಆಯುಷ್ ಸೇವೆ ಅಲಭ್ಯವಾಗಿದೆ. ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಆಸ್ಪತ್ರೆ ಉದ್ಘಾಟನೆಗೊಂಡು ಆಯುಷ್ ಸೇವೆಗಳನ್ನು ನೀಡಲಾಗುತ್ತದೆ.
-ಡಾ| ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ