ನಾಗಪುರ: ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಾಳಿ ಮಾಡಿದ್ದರಿಂದ ಆಯುರ್ವೇದದ ಬೆಳವಣಿಗೆ ನಿಂತುಹೋಯಿತು. ಆದರೆ ಈ ಔಷಧೀಯ ಪದ್ಧತಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಮತ್ತೆ ಗೌರವಿಸಲ್ಪಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಹೇಗೆ ನಾವು ಆಯುರ್ವೇದವನ್ನು ಬೆಳೆಸಬಹುದು? ಜನರು ಕಡಿಮೆ ಬೆಲೆಯಲ್ಲಿ, ಸರಳ ಔಷಧಗಳನ್ನು ಪಡೆಯಬೇಕು. ಅದಕ್ಕೆ ಆಯುರ್ವೇದ ಬಿಟ್ಟರೆ ಬೇರೆ ಮಾರ್ಗವಿಲ್ಲ. ಹಾಗಾಗಿ ಆಯುರ್ವೇದವನ್ನು ಅದರ ಪರಿಶುದ್ಧ ರೂಪದಲ್ಲಿ ನಾವು ಜನರಿಗೆ ನೀಡಬೇಕು ಎಂದು ಭಾಗವತ್ ಹೇಳಿದ್ದಾರೆ.
ಅವರು ಕೇಂದ್ರ ಆಯುಶ್ ಇಲಾಖೆ ಹಮ್ಮಿಕೊಂಡಿದ್ದ “ಆಯುರ್ವೇದ ಪರ್ವ’ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯುಶ್ ಇಲಾಖೆ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೊಪತಿಯನ್ನು ಒಳಗೊಂಡು ಸಿದ್ಧವಾಗಿರುವ ಇಲಾಖೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪಾಲ್ಗೊಂಡಿದ್ದರು.