ಮೈಸೂರು: ಆಯುರ್ವೇದ ಕಾಲೇಜಿನ ವಿವಿಧ ವಿಭಾಗಗಳ ಕಾರ್ಯವೈಖರಿ ಜತೆಗೆ ವಿವಿಧ ಕಾಯಿಲೆಗಳಿಗೆ ಆಯುರ್ವೇದದ ಮೂಲಕ ಯಾವ ರೀತಿಯಲ್ಲಿ ಗುಣಪಡಿಸಬಹುದು ಎಂಬುದರ ಕುರಿತು ಶನಿವಾರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಶನಿವಾರ ನಡೆಸಲಾದ “ಆಯುರ್ ದರ್ಶನ’ ಕಾರ್ಯಕ್ರಮದಲ್ಲಿ ಕಾಲೇಜಿನ 14 ವಿಭಾಗಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ, ಮಾದರಿ ಮಾಹಿತಿ ಫಲಕ ಹಾಗೂ ವಿಶಿಷ್ಟತೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಾಗೂ ಆಯುರ್ವೇದ ಔಷಧಿಗಳ ಬಳಕೆಯ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಾಹಿತಿ ಒದಗಿಸಿದರು. ಇದಲ್ಲದೆ ಗೃಹಬಳಕೆ ವಸ್ತುಗಳಲ್ಲಿನ ವಿಷಯುಕ್ತ ಅಂಶಗಳು, ವಿಷಕಾರಿ ಹಾವುಗಳ ಲಕ್ಷಣಗಳು ಮತ್ತು ಅವುಗಳ ಕಡಿತದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಭಿತ್ತಿಚಿತ್ರಗಳ ಮೂಲಕ ನೀಡಲಾದ ಮಾಹಿತಿ ಎಲ್ಲರ ಗಮನ ಸೆಳೆಯಿತು.
ಕಾಲೇಜಿನ ಪಂಚಕರ್ಮ ವಿಭಾಗದ ವಿದ್ಯಾರ್ಥಿಗಳು ಅಭ್ಯಂಗದ ಮೂಲಕ ತಲೆ, ಕಣ್ಣು, ಪಾರ್ಶ್ವವಾಯು ಸೇರಿದಂತೆ ದೇಹದ ಇತರೆ ಭಾಗಗಳ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ. ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ವಿದ್ಯಾರ್ಥಿಗಳು ಹಿಂದಿನ ಕಾಲದಲ್ಲಿ ಸೂಲಗಿತ್ತಿಯರು ಹೇಗೆ ಕಾರ್ಯನಿರ್ವಹಿಸುತ್ತಿದ್ದರೂ, ಆ ಸಂದರ್ಭ ಬಾಣಂತಿ ಹಾಗೂ ಮಗುವಿನ ಆರೈಕೆಗೆ ಆಯುರ್ವೇದದ ಯಾವ ಗಿಡಮೂಲಿಕೆಯನ್ನು ಬಳಸಲಾಗುತ್ತದೆ.
ಜತೆಗೆ ದ್ರವ್ಯಗುಣ ವಿಭಾಗದಿಂದ ಒಂದೆಲಗ, ಸೋಮವಾರಗಿಡ, ಎಲೆಕಳ್ಳಿ, ನೆಲಬೇವು, ನಾಗದಳ, ಮಾದಳ, ಸರ್ಪಗಂಧಿ ಸಸ್ಯಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೂ ಮುನ್ನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಪತ್ರಕರ್ತ ಕಿರಣ್‌ಕುಮಾರ್, ಡಾ.ಶ್ರೀವತ್ಸಾ ಇತರರು ಹಾಜರಿದ್ದರು.