Advertisement

ಮಾಹಿತಿ ಕೊರತೆಯಿಂದ ತಲುಪದ ಆಯುರ್ವೇದ

11:45 AM Sep 22, 2017 | Team Udayavani |

ಬೆಂಗಳೂರು: ಮಾಹಿತಿ ಅಭಾವದಿಂದ ಜನತೆ ಆಯುರ್ವೇದದ ಮಹತ್ವ ಅರಿಯುವಲ್ಲಿ ವಿಫ‌ಲರಾಗಿದ್ದು, ಪ್ರತಿ ಶಾಲೆಗಳಲ್ಲಿ ದೇಶೀಯ ಚಿಕಿತ್ಸಾ ಪದ್ಧತಿಯನ್ನು ಶಿಸ್ತುಬದ್ಧವಾಗಿ ಬೋಧಿಸುವ ಅಗತ್ಯವಿದೆ ಎಂದು ಕೇಂದ್ರ ಆಯುಶ್‌ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್‌ ಕೊಟೇಜ್‌ ಪ್ರತಿಪಾದಿಸಿದ್ದಾರೆ.

Advertisement

ಗುರುವಾರ ನಗರದ ಗಾಂಧಿ ಭವನದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷದ್‌ ಹಾಗೂ ಟಿಎಸ್‌ಎಸ್‌ಟಿ ಜಂಟಿಯಾಗಿ ಆಯೋಜಿಸಿದ್ದ “ಜಿಜ್ಞಾಸ ದರ್ಶನ 2017′- ಆರ್ಯುವೇದ ಶಿಕ್ಷಣ ಮತ್ತು ತರಬೇತಿಯಲ್ಲಿ ಸುಧಾರಣೆ ಎಂಬ ವಿಷಯದ ರಾಷ್ಟ್ರೀಯ ಮಟ್ಟದ ವಿಚಾರಸಂಕಿಣದಲ್ಲಿ ಮಾತನಾಡಿದ ಅವರು, ಆಧುನಿಕ ವೈದ್ಯರು ಗುಣಡಿಸಲು ಸಾಧ್ಯವಾಗದ ಪ್ರಕರಣಗಳನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಿದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಆಯುರ್ವೇದ ಕುರಿತು ನಮ್ಮಲ್ಲಿ ಮಾಹಿತಿ ಕೊರತೆ ಇದೆ ಎಂದು ಹೇಳಿದರು. 

ಕೇಂದ್ರ ಸರ್ಕಾರ ಆಯುರ್ವೇದ ಪದ್ಧತಿ ಬೆಳವಣಿಗೆ ಮತ್ತು ಈ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗೆ ಸೂಕ್ತ ಪ್ರೋತ್ಸಾಹ ನೀಡುತ್ತಿದೆ. ಮಧ್ಯಪ್ರದೇಶ ಹಾಗೂ ಗುಜರಾತ್‌ ಸರ್ಕಾರ ಪ್ರಾಥಮಿಕ ಶಿಕ್ಷಣದಲ್ಲಿ ಆಯುರ್ವೇದ ಪರಿಚಯಿಸುತ್ತಿದ್ದು, ದೇಶದ ಎಲ್ಲ ಶಾಲಾ- ಕಾಲೇಜುಗಳಲ್ಲಿ ಸೀಮಿತಾವಧಿ ಕೋರ್ಸ್‌ ರೂಪದಲ್ಲಿ ಆಯುರ್ವೇದ ಬೋಧಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್‌ ವ್ಯಾಸ) ಕುಲಪತಿ ಡಾ.ಎಚ್‌.ಆರ್‌. ನಾಗೇಂದ್ರ , ಪ್ರಾಚೀನ ವೈದ್ಯಕೀಯ ಪದ್ಧತಿ ಆಯುರ್ವೇದ ಉತ್ತಮ ಫಲಿತಾಂಶ ನೀಡಿದರೂ ಆಧುನಿಕ ಸಮಾಜ ಒಪ್ಪಿಕೊಳ್ಳದಿರಲು ದತ್ತಾಂಶ ಕೊರತೆಯೇ ಮುಖ್ಯ ಕಾರಣ ಎಂದರು.

ಆಧುನಿಕ ಯುಗದಲ್ಲಿ ಫಲಿತಾಂಶಕ್ಕಿಂತ ದತ್ತಾಂಶವೇ ಮುಖ್ಯವಾಗುತ್ತದೆ. ಆದ್ದರಿಂದ ಸೂಕ್ತವಾದ ದತ್ತಾಂಶವನ್ನು ಕಲೆ ಹಾಕಿ, ಆರ್ಯುವೇದದಲ್ಲಿ ಸಂಶೋಧನೆ ನಡೆಸುವ ಅಗತ್ಯತೆ ಇದೆ. ಯೋಗದ ವಿಚಾರವಾಗಿ ಸಹ ಪಾಶ್ಚಿಮಾತ್ಯರು ಈ ಹಿಂದೆ ಅಸಡ್ಡೆ ತೋರಿಸಿದ್ದರು. ಆದರೆ, ಇಂದು ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದರು. 

Advertisement

ಪದ್ಮಶ್ರೀ ಡಾ.ಎಚ್‌.ಆರ್‌.ನಾಗೇಂದ್ರ, ಆಧುನಿಕ ವೈದ್ಯಕೀಯ ಪದ್ಧತಿಯಿಂದ ಶೀಘ್ರವಾಗಿ ರೋಗಗಳನ್ನು ಗುಣಮುಖ ಮಾಡಬಹುದು. ಆದರೆ ಶಾಶ್ವತ ಪರಿಹಾರ ಅಸಾಧ್ಯ. ಆರ್ಯುವೇದದಲ್ಲಿ ಫಲಿತಾಂಶ ನಿಧಾನವಾದರೂ ಫ‌ಲಿತಾಂಶ ಅತ್ಯುತ್ತಮವಾಗಿದೆ. ಆಧುನಿಕ ವೈದ್ಯಕೀಯ ಪದ್ಧತಿ ದೈಹಿಕ ಕಾಯಿಲೆಗಳನ್ನು ಮಾತ್ರ ಗುಣಪಡಿಸುವ ಶಕ್ತಿ ಹೊಂದಿದೆ. ಆಯುರ್ವೇದ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಿದರು.

ಆರ್ಯುವೇದದಲ್ಲಿ ಸಹ ಅಲ್ಪಾವಧಿಯಲ್ಲಿ ಫಲಿತಾಂಶ ನೀಡುವ ಮಾತ್ರೆ ಅಥವಾ ಔಷಧವನ್ನು ತಯಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಸ್‌-ವ್ಯಾಸ ಸಂಶೋಧನೆ ನಡೆಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಹ ಆಯುರ್ವೇದದಲ್ಲಿ ಸಂಶೋಧ‌ನೆ ಹೆಚ್ಚಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಆಯುಶ್‌ ಇಲಾಖೆ ಜಂಟಿ ನಿರ್ದೇಶಕಿ ಡಾ. ಅಹಲ್ಯಾ ಶರ್ಮಾ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಉಪ ಕುಲಪತಿ ಡಾ.ಎಂ.ಕೆ. ರಮೇಶ್‌, ಜಿಜ್ಞಾಸಾ ಸಮಿತಿ ಅಧ್ಯಕ್ಷ ಡಾ.ಆರ್‌. ಕಿಶೋರ್‌ ಕುಮಾರ್‌, ಎಬಿವಿಪಿ ರಾಜ್ಯಾಧ್ಯಕ್ಷ ಡಾ. ಅಲ್ಲಮ ಪ್ರಭು, ಜಿಜ್ಞಾಸದ ರಾಷ್ಟ್ರೀಯ ಸಂಯೋಜಕ ವಿನೀತ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next