Advertisement

ರಾಜ್ಯದಲ್ಲೇ ಸಿಕ್ತಾ ಮಹಾಮಾರಿಗೆ ಔಷಧಿ?; ಯಶಸ್ವಿಯಾಯ್ತು ಕಜೆ ಔಷಧಿ ಪ್ರಯೋಗ!

08:48 PM Jul 02, 2020 | Hari Prasad |

ಬೆಂಗಳೂರು: ವಿಶ್ವಾದ್ಯಂತ ವೈದ್ಯ ವಿಜ್ಞಾನಿಗಳು ಹಗಲಿರುಳೂ ತಲೆ ಕೆಡಿಸಿಕೊಂಡು ಕೋವಿಡ್ 19 ಮಹಾಮಾರಿಗೆ ಔಷಧಿ ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ.

Advertisement

ಈಗಾಗಲೇ ಹಲವಾರು ಸಂಶೋಧನೆಗಳು ಕ್ಲಿನಿಕಲ್ ಟ್ರಯಲ್ ಹಂತದವರೆಗೆ ಬಂದು ನಿಂತಿದೆ. ಈ ವರ್ಷಾಂತ್ಯದೊಳಗೆ ಈ ಮಹಾಮಾರಿಗೆ ಔಷಧಿ ಪತ್ತೆಹಚ್ಚುವ ಆಶಾವಾದವನ್ನು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯೂ ಸಹ ವ್ಯಕ್ತಪಡಿಸಿತ್ತು.

ಈ ನಡುವೆ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ, ತಾನು ಕೋವಿಡ್ ಮಹಾಮಾರಿಗೆ ಆಯುರ್ವೇಧ ಔಷಧಿ ಕಂಡುಹಿಡಿದಿರುವುದಾಗಿ ಘೋಷಿಸಿ ಬಳಿಕ ಯೂ-ಟರ್ನ್ ಹೊಡೆದಿತ್ತು.

ಆದರೆ ಇದೀಗ ಬೆಂಗಳೂರಿನ ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ನೀಡಿರುವ ಆಯುರ್ವೇದ ಔಷಧಿಯೊಂದು ತನ್ನ ಪರಿಣಾಮವನ್ನು ತೋರಿಸಿದೆ.

ಹೌದು, ದಕ್ಷಿಣ ಕನ್ನಡದ ಪುತ್ತೂರು ಮೂಲದ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರು ಅಭಿವೃದ್ಧಿಪಡಿಸಿರುವ ಆಯುರ್ವೇದ ಔಷಧಿಯೊಂದು ಕೋವಿಡ್ ಸೋಂಕಿತರ ಪಾಲಿಗೆ ಸಂಜೀವಿನಿಯಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸಲಾರಂಭಿಸಿದೆ.

Advertisement

ಕೋವಿಡ್ 19 ಸೋಂಕು ಭಾರತದಲ್ಲಿ ಕಾಣಿಸಿಕೊಂಡ ಪ್ರಾರಂಭದಲ್ಲೇ ಡಾ. ಗಿರಿಧರ್ ಕಜೆ ಅವರು ತಮ್ಮಲ್ಲಿ ಈ ಸೋಂಕಿಗೆ ಔಷಧಿ ಇದೆ ಎಂದು ಪ್ರಸ್ತಾಪಿಸಿ ಪ್ರಧಾನಮಂತ್ರಿಯವರಿಗೆ ಪತ್ರವೊಂದನ್ನೂ ಬರೆದಿದ್ದರು.

ಬಳಿಕ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾಗಿರುವ ಕ್ಲಿನಿಕಲಿ ಟ್ರಯಲ್ ರಿಜಸ್ಟರಿ ಆಫ್ ಇಂಡಿಯಾ ಕಜೆ ಅವರಿಗೆ ತಮ್ಮ ಬಳಿ ಇರುವ ಈ ಔಷದಿಯನ್ನು ಕೋವಿಡ್ ಸೋಂಕಿತರ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಿತ್ತು.

ಈ ಪ್ರಕಾರವಾಗಿ ಡಾ. ಕಜೆ ಅವರು ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಯಲ್ಲಿ ತಮ್ಮಲ್ಲಿರುವ ಔಷಧಿಯ ಪ್ರಯೋಗವನ್ನು ಜೂನ್ 7 ರಂದು 25ರವರೆಗೆ ನಡೆಸಿದ್ದು, 10 ಸೋಂಕಿತರ ಮೇಲೆ ಈ ಪ್ರಯೋಗವನ್ನು ನಡೆಸಲಾಗಿತ್ತು.

ಸುಮಾರು 14 ಗಿಡಮೂಲಿಕೆಗಳಿಂದ ತಯಾರಿಸಲಾದ ಎರಡು ಮಾತ್ರೆಗಳನ್ನು ಹತ್ತು ಸೋಂಕಿತರಿಗೆ 19 ದಿನಗಳವರೆಗೆ ನೀಡಲಾಗಿತ್ತು. ಈ ಎಲ್ಲಾ ಸೋಂಕಿತರು ರಕ್ತದೊತ್ತಡ, ಮಧುಮೇಹ ಮತ್ತು ಇನ್ನಿತರ ಸಹ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಹಾಗೂ ಇವರೆಲ್ಲರೂ 26 ರಿಂದ 65 ವರ್ಷ ಪ್ರಾಯವರ್ಗದ ಸೋಂಕಿತರಾಗಿದ್ದರು ಎಂಬ ಮಾಹಿತಿಯನ್ನೂ ಡಾ. ಕಜೆ ಅವರು ಇದೀಗ ನೀಡಿದ್ದಾರೆ.

ಈ ಎಲ್ಲಾ ಸೋಂಕಿತರಿಗೆ ಅಲೋಪಥಿ ಚಿಕಿತ್ಸೆಗೆ ಪೂರಕವಾಗಿ ಎರಡು ಆಯುರ್ವೇದ ಮಾತ್ರೆಗಳನ್ನು ನೀಡಲಾಗಿತ್ತು. ಮತ್ತು ಈ ಪ್ರಯೋಗ ಇದೀಗ ಯಶಸ್ವಿಯಾಗಿರುವುದು ಭವಿಷ್ಯದಲ್ಲಿ ಕೋವಿಡ್ 19 ಸೋಂಕಿಗೆ ಒಂದು ಪರಿಣಾಮಕಾರಿ ಔಷಧಿಯನ್ನು ಅಭಿವೃದ್ಧಿಪಡಿಸುವಲ್ಲಿ ಒಂದು ಮಹತ್ವದ ಮೈಲುಗಲ್ಲಾಗುವ ಸಾಧ್ಯತೆಗಳಿವೆ.

ಮಾತ್ರವಲ್ಲದೇ ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿಗೆ ನಮ್ಮ ರಾಜ್ಯದಲ್ಲೇ ಔಷಧಿಯೊಂದು ಪತ್ತೆಯಾದರೆ ಆ ಹೆಮ್ಮೆ ಎಲ್ಲಾ ಕನ್ನಡಿಗರದ್ದಾಗಲಿದೆ!

Advertisement

Udayavani is now on Telegram. Click here to join our channel and stay updated with the latest news.

Next