ತುಮಕೂರು: ದೇಶವನ್ನು ಕಾಡುತ್ತಿರುವ ಕೋವಿಡ್ ದಿಂದಾಗಿ ಇಂಗ್ಲಿಷ್ ಮೆಡಿಷನ್ ಅಬ್ಬರದಲ್ಲಿ ಮೂಲೆ ಗುಂಪಾಗಿದ್ದ ಆಯುರ್ವೇದ ಸೇರಿದಂತೆ ಭಾರತೀಯ ವೈದ್ಯಪದ್ಧತಿಗಳು ಮತ್ತಷ್ಟು ಪ್ರಕರತೆ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಪಾರ್ಕ್‌ನಲ್ಲಿ ತುಮಕೂರು ಜಿಲ್ಲಾ ಆಯುರ್ವೇದ ಪದವೀಧರ ವೈದ್ಯರ ಸಂಘದಿಂದ ಪೌರಕಾರ್ಮಿಕರಿಗೆ ಆಯೋಜಿಸಿದ್ದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ, ಪಿಕೆಎಸ್‌ಗಳಿಗೆ ಆರೋಗ್ಯಕಿಟ್ ವಿತರಿಸಿ ಮಾತನಾಡಿದರು.
ಶತಮಾನಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಆಯು ರ್ವೇದ, ಯುನಾನಿ, ಹೋಮಿಯೋಪತಿ ಸೇರಿದಂತೆ ಹಲವಾರು ಭಾರತೀಯ ಚಿಕಿತ್ಸಾ ಪದ್ಧತಿಗಳು, ಇಂಗ್ಲಿಷ್ ಮೆಡಿಷನ್‌ನಿಂದ ಜನರಿಂದ ದೂರವಾಗಿದ್ದವು, ಆದರೆ ಕೋವಿಡ್ ದಿಂದಾಗಿ ಮತ್ತೂಮ್ಮೆ ಅವುಗಳ ಲಾಭವನ್ನು ಜನರು ಪಡೆದುಕೊಳ್ಳುವಂತಾಗಿದೆ. ಆಯುರ್ವೇದ ವೈದ್ಯಕೀಯ ಪದ್ಧತಿಗಳನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.
ನಗರಪಾಲಿಕೆ ಮೇಯರ್ ಫರೀದಾಬೇಗಂ ಮಾತನಾಡಿ, ಭಾರತೀಯರಿಗೆ ಆಯುರ್ವೇದ ಹೊಸದಲ್ಲ. ನಮ್ಮಗಳ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಆಯುರ್ವೇದ ವೈದ್ಯರು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ನೀಡಿರುವ ಆರೋಗ್ಯ ಕಿಟ್‌ನಲ್ಲಿರುವ ಔಷಧಗಳನ್ನು ವೈದ್ಯರು ಹೇಳಿದ ರೀತಿ ನೀವು ಮತ್ತು ನಿಮ್ಮ ಕುಟುಂಬದವರು ಬಳಸುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.ಪಾಲಿಕೆಯ 15ನೇ ವಾರ್ಡಿನ ಸದಸ್ಯೆ ಗಿರಿಜಾ ಧನಿಯಾ ಕುಮಾರ್, ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲಕೆ, ಡಾ.ಚಿತ್ತರಂಗಜನ್, ಡಾ.ನಂಜುಂಡಪ್ಪ, ಡಾ.ಶಿಲ್ಪ ಇದ್ದರು.