ಬಂಕಾಪುರ: ದೇಶದ ಪರಂಪರಾಗತ ಆಯುರ್ವೇದ ವೈದ್ಯಕೀಯ ಪದ್ಧತಿಗಳು ದುಷ್ಪರಿಣಾಮ ರಹಿತವಾಗಿದ್ದು, ಅನಾದಿ ಕಾಲದಿಂದಲೂ ನಮ್ಮ ಜನಸಮುದಾಯದ ರೋಗ ನಿವಾರಿಸಿ ಉತ್ತಮ ಆರೋಗ್ಯ ನೀಡುತ್ತ ಬಂದಿವೆ ಎಂದು ಶ್ರೀ ಕಾಶಿ ಜ| ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಸಮೀಪದ ಬಿಸನಳ್ಳಿ ಗ್ರಾಮದ ಶ್ರೀ ಕಾಶಿ ಶಾಖಾ ಮಠದ ಆವರಣದಲ್ಲಿ ಶ್ರೀ ವಿಶ್ವೇಶ್ವರ ಸಮುದಾಯ ಆಯುರ್ವೇದ ಆರೋಗ್ಯ ಕೇಂದ್ರ ಮತ್ತು ಸಂಶೋಧನಾ ಸಂಸ್ಥೆಯನ್ನು ವರ್ಚುವಲ್ ಸಂಪರ್ಕದ ಮೂಲಕ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಇಂತಹ ಅಮೂಲ್ಯವಾದ ಆಯುರ್ವೇದ ವೈದ್ಯ ಪದ್ಧತಿಗಳ ಪುನರುತ್ಥಾನಕ್ಕೆ ಹಾಗೂ ಗ್ರಾಮೀಣ ಭಾಗದ ಜನತೆಗೆ ಉತ್ತಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವ ಸದುದ್ದೇಶದಿಂದ ಆಯುರ್ವೇದ ಆರೋಗ್ಯ ಕೇಂದ್ರ ಮತ್ತು ಸಂಶೋಧನಾ ಸಂಸ್ಥೆ ಪ್ರಾರಂಭಿಸಲಾಗುತ್ತಿದ್ದು, ಇದನ್ನು ಸಮಾಜದ ಸದ್ಭಕ್ತರು ಸದ್ಬಳಕೆ ಮಾಡಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದರು.
ರಾಣಿಬೆನ್ನೂರಿನ ಆಯುರ್ವೇದ ವೈದ್ಯ ಡಾ| ಚನ್ನು ಹಿರೇಮಠ ಮಾತನಾಡಿ, ಈ ಕೇಂದ್ರದಲ್ಲಿ ವಿವಿಧ ರೋಗ ಚಿಕಿತ್ಸೆಯಲ್ಲಿ ಪರಿಣಿತರಾದ ದೇಶದ ಖ್ಯಾತ ವೈದ್ಯರು ರೋಗಿಗಳಿಗೆ ಸಲಹೆ-ಚಿಕಿತ್ಸೆ ನೀಡಲು ಆಗಮಿಸಲಿದ್ದಾರೆ. ದೇಶದಲ್ಲಿಯೇ ಅತ್ಯಂತ ಸುಸಜ್ಜಿತವಾದ, ಶುದ್ಧ ಆಯುರ್ವೇದೀಯ ಸಿದ್ಧಾಂತಗಳನುಸಾರ ವಿವಿಧ ವಿಶಿಷ್ಟ ಕಾಯಿಲೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಇದರಿಂದ ಹೆಚ್ಚು
ಪ್ರಯೋಜನವಾಗಲಿದೆ ಎಂದರು.
ಹಿರಿಯ ವೈದ್ಯ ಡಾ| ಆರ್.ಎಸ್. ಅರಳೆಲೆಮಠ ಮಾತನಾಡಿ, ಆಧ್ಯಾತ್ಮದಿಂದ ಮನಶುದ್ಧಿ, ಆಯುರ್ವೇದದಿಂದ ತನುಶುದ್ಧಿ ಆಗುತ್ತದೆ. ಇವೆರಡರ ಶುದ್ಧಿಯು ಸರ್ವರ ಆರೋಗ್ಯಕ್ಕೆ ದಾರಿಯಾಗುತ್ತದೆ ಎಂದ ಅವರು, ಈ ಕೇಂದ್ರದ ಮುಖ್ಯಸ್ಥರಾಗಿ ಡಾ| ಶಿವಕುಮಾರ ಮೂಲಿಮಠ ಕಾರ್ಯನಿರ್ವಹಿಸಲಿದ್ದು, ಪುಣೆಯ ಆಯುರ್ವೇದ ತಜ್ಞ ಡಾ| ಪಾವಲೆ, ಶಿವಮೊಗ್ಗದ ಆಯುರ್ವೇದ ತಜ್ಞ ಡಾ| ಮಲ್ಲಿಕಾರ್ಜುನ ಡಂಬಳ ಮುಂತಾದವರು ನಿಗದಿತವಾಗಿ ಸಂದರ್ಶನ ನೀಡಿ, ರೋಗಿಗಳಿಗೆ ಸೂಕ್ತ ಸಲಹೆ-ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದರು.
ಡಾ| ಶಿವಕುಮಾರ ಮೂಲಿಮಠ, ಡಾ| ಬಸವರಾಜ ಆಜೂರ, ಡಾ| ಸುಖೀನ ಅರಳೆಲೆಮಠ, ಡಾ| ಚೇತನ ಕರೇಗೌಡ್ರ, ಡಾ| ವಿನಾಯಕ ಪಾಟೀಲ, ಡಾ| ಅರುಣ ನರೇಗಲ್, ಗದಿಗೆಪ್ಪ ಮಾಮಲೆಶೆಟ್ಟರು, ಗದಿಗೆಯ್ಯ ಹಿರೇಮಠ, ಗಂಗಾಧರ ಬಡ್ಡಿ, ಕಲ್ಲಜ್ಜ ಆಜೂರ, ವೀರೇಶ ಆಜೂರ, ಸಂಗಣ್ಣ ಮೊರಬದ, ಶಂಭಣ್ಣ ಮಾಮಲೆಶೆಟ್ಟರ, ಗುರುಶಾಂತಪ್ಪ ನರೇಗಲ್, ನಾಗರಾಜ ಹೊಸಮನಿ, ಪರಶುರಾಮ ಕುದರಿ, ನಿಂಗಪ್ಪ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು. ಮುರುಗೇಶ ಆಜೂರ ನಿರೂಪಿಸಿದರು. ಮಲ್ಲಿಕಾರ್ಜುನ ಯಳವಲಿಮಠ ಸ್ವಾಗತಿಸಿದರು. ವಿನಾಯಕ ವಂದಿಸಿದರು.