ಕನ್ನಡದ ಸಾಕಷ್ಟು ಚಿತ್ರಗಳು ಶೀರ್ಷಿಕೆ ಗೊಂದಲಕ್ಕೆ ಸಿಲುಕಿರುವುದು ಹೊಸತೇನಲ್ಲ. ಆ ಸಾಲಿಗೆ “ಅಯೋಗ್ಯ’ವೂ ಸೇರಿದೆ. ಇಷ್ಟಕ್ಕೂ “ಅಯೋಗ್ಯ’ನ ಸಮಸ್ಯೆ ಏನು ಗೊತ್ತಾ? ಚಿತ್ರದ ಅಡಿಬರಹ. ಹೌದು, “ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಅಡಿಬರಹವೇ ಇಷ್ಟಕ್ಕೆಲ್ಲಾ ಕಾರಣ. “ಅಯೋಗ್ಯ’ ಶೀರ್ಷಿಕೆ ಕೆಳಗೆ “ಗ್ರಾಮ ಪಂಚಾಯಿತಿ ಸದಸ್ಯ’ ಎಂದು ಇಟ್ಟಿದ್ದೇ ತಡ, ಮೈಸೂರು ಭಾಗದ ಕೆಲ ಕನ್ನಡ ಪರ ಸಂಘಟನೆಗಳು ಮತ್ತು ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಆಕ್ಷೇಪಿಸಿದ್ದಾರೆ.
ಕೊನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಬಂದು ದೂರು ಕೊಟ್ಟಿದ್ದಾರೆ. ಪ್ರಮುಖವಾಗಿ, “ಅಯೋಗ್ಯ’ ಶೀರ್ಷಿಕೆಗಿರುವ “ಗ್ರಾಮ ಪಂಚಾಯಿತಿ ಸದಸ್ಯ’ ಅಡಿಬರಹವನ್ನು ಕಿತ್ತು ಹಾಕಬೇಕು. ಇಲ್ಲದೇ ಹೋದರೆ, ಪ್ರತಿಭಟನೆ ಮಾಡುವುದರ ಜೊತೆಗೆ ಸಿನಿಮಾ ಬಿಡುಗಡೆಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಯಾವಾಗ ಜೋರು ಮಾಡಿದರೋ, ಆಗ ತಕ್ಷಣ ಎಚ್ಚೆತ್ತುಕೊಂಡ ಚಿತ್ರತಂಡವು ಚಿತ್ರದ ಅಡಿಬರಹ ಬದಲಿಸಿದೆ.
ಹಾಗಂತ ಅಡಿಬರಹದಲ್ಲಿ ಯಾವುದೇ ವ್ಯತ್ಯಾಸವಿಲ್ಲ. “ಅಯೋಗ್ಯ’ ಆ್ಯಂಡ್ “ಗ್ರಾಮ ಪಂಚಾಯಿತಿ ಸದಸ್ಯ’ ಎಂದಷ್ಟೇ ಇಟ್ಟುಕೊಂಡಿದೆ. ಇದನ್ನೇ ಬದಲಾವಣೆ ಮಾಡಲಾಗಿದೆ ಅಂತ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ನಿರ್ದೇಶಕ ಮಹೇಶ್, ನಾಯಕ ನೀನಾಸಂ ಸತೀಶ್ ಅವರೊಂದಿಗೆ ಪತ್ರಕರ್ತರ ಮುಂದೆ ಕುಳಿತು ಸ್ಪಷ್ಟನೆ ಕೊಟ್ಟರು. ಇಷ್ಟೆಲ್ಲಾ ಯಾಕೆ? “ಅಯೋಗ್ಯ’ ಅಂತ ಇದ್ದರೆ ಸಾಕು. “ಗ್ರಾಮ ಪಂಚಾಯಿತಿ ಸದಸ್ಯ’ ಪದ ಬಳಕೆ ಮಾಡಿದ್ದು ಎಷ್ಟು ಸರಿ?
ಈ ಪ್ರಶ್ನೆಗೆ, ನಾಯಕ ಸತೀಶ್, ನಿರ್ದೇಶಕ ಮಹೇಶ್ ತಮ್ಮದೇ ವ್ಯಾಖ್ಯಾನ ಮಾಡಿದರು. ಅದೇ ಬೇರೆ ಇದೇ ಬೇರೆ ಅಂತೆಲ್ಲಾ ಹೇಳಿಕೊಂಡರು. “ಅಯೋಗ್ಯ’ ಶೀರ್ಷಿಕೆ ಮಾತ್ರ ನೋಂದಣಿಯಾಗಿದೆ. “ಗ್ರಾಮ ಪಂಚಾಯಿತಿ ಸದಸ್ಯ’ ಎಂಬುದು ಶೀರ್ಷಿಕೆ ಅಲ್ಲ, ಅದು ಅಡಿಬರಹವಷ್ಟೇ ಆದರೂ, ಸದಸ್ಯರಿಗೆ ಬೇಸರ ಆಗಬಾರದು ಅಂತ “ಅಯೋಗ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯ’ ಅಂತ ಇಡುವುದಾಗಿ ನಿರ್ದೇಶಕ ಮಹೇಶ್ ಹೇಳಿಬಿಟ್ಟರು.
“ಅಯೋಗ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯ’ ಒಂದೇ ಪದ ಆಗಿರುವುದರಿಂದ ಅದನ್ನೂ ನೋಂದಣಿ ಮಾಡಿಸಿ ಎಂಬ ಪತ್ರಕರ್ತರ ಸಲಹೆಗೆ ಒಪ್ಪಿಕೊಂಡ “ಅಯೋಗ್ಯ’ ತಂಡ ಮಂಡಳಿಯಲ್ಲಿ ನೋಂದಣಿ ಮಾಡಿಸುವುದಾಗಿ ಹೇಳಿಕೊಂಡಿತು. ಅಂದಹಾಗೆ, ಈ ಚಿತ್ರವನ್ನು ರಿಲೀಸ್ ಮಾಡುವ ಮುನ್ನ, ರಾಜ್ಯದ ಆಯ್ದ ನೂರು ಗ್ರಾಮ ಪಂಚಾಯಿತಿ ಸದಸ್ಯರಿಗೆ ತೋರಿಸುವ ಯೋಚನೆ ಚಿತ್ರತಂಡಕ್ಕಿದೆ. ಅವರು ಚಿತ್ರ ನೋಡಿದ ಬಳಿಕ ಚಿತ್ರಕ್ಕೆ ಯಾಕೆ ಅಡಿಬರಹ ಇಡಲಾಗಿದೆ ಅನ್ನೋದು ಗೊತ್ತಾಗುತ್ತೆ ಅಂತ ಹೇಳಿಕೊಂಡು, “ಅಯೋಗ್ಯ’ನ ಗೊಂದಲದ ಮಾತುಕತೆಗೆ ಬ್ರೇಕ್ ಬಿತ್ತು.