Advertisement

ಅಯೋಧ್ಯೆ ಮಂದಿರ : ಮೊದಲ ಹಂತ ಪೂರ್ಣ

11:21 PM Apr 09, 2022 | Team Udayavani |

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮಮಂದಿರದ ಕಾಮಗಾರಿಯಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ.

Advertisement

2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದ್ದರು. ಈ ವರೆಗೆ ಮಂದಿರದ ತಳ ಹಂತದ ಕೆಲಸ ಪೂರ್ಣಗೊಂಡಿದೆ. ಸುಮಾರು ಆರು ಎಕ್ರೆ ವಿಸ್ತೀರ್ಣದಲ್ಲಿ 1.85 ಲಕ್ಷ ಕ್ಯೂಬಿಕ್‌ ಮೀ. ಮರಳು ಮಿಶ್ರಿತ ಮಣ್ಣನ್ನು ಹೊರತೆಗೆದು ಆರ್‌ಸಿಸಿ ರೋಲರ್‌ ಕಾಂಪ್ಯಾಕ್ಟ್ ಕಾಂಕ್ರೀಟ್‌ ಮಿಶ್ರಣದಿಂದ ತುಂಬಿಸಲಾಗಿದೆ. ಈ ಮಿಶ್ರಣ ಕಡಿಮೆ ಪ್ರಮಾಣದ ಸಿಮೆಂಟ್‌, ಬ್ಯಾಲೆಸ್ಟ್‌, ಸ್ಟೋನ್‌ ಪೌಡರ್‌, ಬೂದಿಯ ರಾಸಾಯನ ಮಿಶ್ರಣದಿಂದ ಕೂಡಿದೆ. 12 ಅಂಗುಲಗಳ 48 ಪದರಗಳನ್ನು ಹಾಕಿ ಪ್ರತಿಯೊಂದು ಪದರವನ್ನೂ ರೋಲರ್‌ನಿಂದ ಸಮತಟ್ಟು ಮಾಡಲಾಗಿದೆ. ಗರ್ಭಗುಡಿ ನಿರ್ಮಾಣಗೊಳ್ಳಲಿರುವ ಪ್ರದೇಶದಲ್ಲಿ 56 ಪದರಗಳನ್ನು ಹಾಕಲಾಗಿದೆ. ಇದಾವುದಕ್ಕೂ ಕಬ್ಬಿಣವನ್ನು ಬಳಸಿಲ್ಲ ಎನ್ನುವುದು ಉಲ್ಲೇಖನೀಯ. ಸಮತಟ್ಟು ಮಾಡಿದ ಕಾಂಕ್ರಿಟ್‌ ಮೇಲೆ 1.5 ಮೀ. ದಪ್ಪದ ಶಿಲೆಗಳನ್ನು (ರಾಫ್ಟ್) ಹಾಕಲಾಗಿದೆ.

ಇನ್ನು ಮುಂದೆ ರಾಫ್ಟ್ ಮೇಲೆ ನೆಲ ಅಂತಸ್ತಿನ ಪ್ಲಿಂತ್‌ (ಸ್ತಂಭ) ಕೆಲಸ ನಡೆಯಲಿದೆ. 5 ಅಡಿ ಉದ್ದ, 3 ಅಡಿ ಅಗಲ, 2.5 ಅಡಿ ದಪ್ಪದ ಗ್ರಾನೈಟ್‌ನ ದಿಮ್ಮಿಗಳನ್ನು ಒಂದರ ಮೇಲೊಂದರಂತೆ ಇರಿಸಲಾಗುತ್ತದೆ. ಸುಮಾರು 17,000 ದಿಮ್ಮಿಗಳನ್ನು ಬಳಸಲಾಗುವುದು. ಇದರ ಒಟ್ಟು ಎತ್ತರ 21 ಅಡಿ. ಈ ಎರಡನೆಯ ಹಂತದ ಕೆಲಸ ಆರು ತಿಂಗಳುಗಳಲ್ಲಿ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. ಇದರ ಬಳಿಕ ಮಂದಿರಕ್ಕಾಗಿ ಕೆತ್ತನೆ ಮಾಡಿದ ಕಲ್ಲುಗಳನ್ನು ಜೋಡಿಸಲಾಗುವುದು.

ಅಯೋಧ್ಯೆಯಲ್ಲಿರುವ ಪವಿತ್ರ ಸರಯೂ ನದಿಯಲ್ಲಿ ಉಂಟಾಗುವ ಪ್ರವಾಹ ತಡೆಗಾಗಿ ರಕ್ಷಣ ಗೋಡೆ ನಿರ್ಮಾಣ ಕೆಲಸ ಆರಂಭವಾಗಿದೆ. ಮಂದಿರವನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬನ್ಸಿ ಪಹಾಡ್‌ನ‌ ಕಲ್ಲುಗಳಿಂದ ನಿರ್ಮಿಸಲಾಗುತ್ತದೆ. ಹತ್ತು ಎಕ್ರೆ ವಿಸ್ತೀರ್ಣದಲ್ಲಿ ಆಲಯದ ಸುತ್ತ ಪ್ರದಕ್ಷಿಣ ಪಥವನ್ನು ಜೋಧ್‌ಪುರದ ಕಲ್ಲುಗಳಿಂದ ನಿರ್ಮಿಸಲಾಗುತ್ತದೆ. 2023ರ ಡಿಸೆಂಬರ್‌ನಲ್ಲಿ ಮಂದಿರ ನಿರ್ಮಾಣ ಕಾರ್ಯ ಮುಗಿಯಲಿದ್ದು ಅದೇ ವೇಳೆ ಯಾತ್ರಿಕರ ಸೌಕರ್ಯಕ್ಕಾಗಿ ಭವನಗಳೂ ಸಿದ್ಧಗೊಳ್ಳುತ್ತವೆ.

20,000 ಕಡೆಗಳಲ್ಲಿ ರಾಮೋತ್ಸವ

Advertisement

ರಾಮನವಮಿಯಿಂದ (ಎ. 10) ಹುಣ್ಣಿಮೆವರೆಗೆ ಅವರವರಿಗೆ ಅನುಕೂಲವಾದಂತೆ ರಾಮೋತ್ಸವವನ್ನು ಆಚರಿಸಲು ವಿಶ್ವ ಹಿಂದೂ ಪರಿಷತ್‌ ಕರೆಕೊಟ್ಟಿದೆ. ದೇಶದಲ್ಲಿ ಸುಮಾರು 20,000 ಕಡೆಗಳಲ್ಲಿ, ಕರ್ನಾಟಕದಲ್ಲಿ 600ರಿಂದ 800 ಸ್ಥಳಗಳಲ್ಲಿ ರಾಮೋತ್ಸವ ನಡೆಯುವ ಸಾಧ್ಯತೆ ಇದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಕುರಿತು ಮನೆಮನೆಗಳಲ್ಲಿ ಜಾಗೃತಿ ಮೂಡಬೇಕೆಂಬ ಸಂಕಲ್ಪದಿಂದ ರಾಮೋತ್ಸವವನ್ನು ಆಚರಿಸಲಾಗುತ್ತಿದೆ.

ಮಂದಿರದ ಬಳಿಕ ರಾಮರಾಜ್ಯ : ಪೇಜಾವರ ಶ್ರೀಗಳ ವಿಶಿಷ್ಟ ಸೇವಾ ಪರಿಕಲ್ಪನೆ

ರಾ ಮ ಮಂದಿರದ ಕೆಲಸ ಹೇಗೂ ನಡೆಯುತ್ತದೆ. ಮುಂದಿನ ಗುರಿ ಇರಬೇಕಾದದ್ದು ರಾಮನ ಹೆಸರಿನಲ್ಲಿ ರಾಮರಾಜ್ಯದ ನಿರ್ಮಾಣ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ. “ಉದಯವಾಣಿ’ ಜತೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರಾಮಮಂದಿರದ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿದೆಯೆ?

– ಮಂದಿರ ನಿರ್ಮಾಣದ ಕೆಲಸ ಅದರ ವೇಗದಲ್ಲಿ ನಡೆಯುತ್ತಿದೆ. 2023ರ ಕೊನೆಯಲ್ಲಿ ಮಂದಿರದ ಕಾಮಗಾರಿ ಪೂರ್ಣಗೊಳ್ಳಲಿದೆ.

ಅಯೋಧ್ಯೆಗೆ ಹೋಗಿ ಕಾಮಗಾರಿಗಳನ್ನು ಇತ್ತೀಚಿಗೆ ವೀಕ್ಷಿಸಿದ್ದೀರಾ?

– ಒಂದು ವಾರ ಬಿಟ್ಟು ಅಯೋಧ್ಯೆಗೆ ಹೋಗುತ್ತೇವೆ. ಆಗ ಟ್ರಸ್ಟ್‌ನ ಸಭೆಯೂ ನಡೆಯಲಿದೆ. ಟ್ರಸ್ಟ್‌ ರಚನೆಯಾದ ಬಳಿಕ 2-3 ಬಾರಿ ಹೋಗಿ ಮಂದಿರ ನಿರ್ಮಾಣದ ಕೆಲಸಗಳನ್ನು ವೀಕ್ಷಿಸಿದ್ದೇವೆ.

ರಾಮಮಂದಿರ ನಿರ್ಮಾಣದ ಬಳಿಕ ಮುಂದಿನ ಕಲ್ಪನೆ ಏನು?

ರಾಮಮಂದಿರ ನಿರ್ಮಾಣ ಕೆಲಸ ಹೇಗೂ ನಡೆಯುತ್ತದೆ. ಮುಂದಿನ ಗುರಿ ರಾಮರಾಜ್ಯದ ನಿರ್ಮಾಣ ಆಗಬೇಕು. ಇದು ನಮ್ಮ ವೈಯಕ್ತಿಕ ಅಪೇಕ್ಷೆ. ಇದನ್ನು ಇತರ ಟ್ರಸ್ಟಿಗಳಲ್ಲಿಯೂ ಹೇಳಿದ್ದೇವೆ. ಆದರೆ ಟ್ರಸ್ಟ್‌ನ ಕಾರ್ಯಸೂಚಿಯಾಗಿಲ್ಲ. ರಾಮದೇವರ ಹೆಸರಿನಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಿ ರಾಮಮಂದಿರ ನಿರ್ಮಾಣವಾದ ಬಳಿಕ ಹೋಗಿ ದರ್ಶನ ಮಾಡುವಾಗ ನಾವು ಇಂತಹ ಸೇವೆಯನ್ನು ಅಗತ್ಯವುಳ್ಳವರಿಗೆ ಸಲ್ಲಿಸಿದ್ದೇವೆ ಎಂದು ರಾಮದೇವರಿಗೆ ಸಮರ್ಪಿಸಬೇಕು (ಕೃಷ್ಣಾರ್ಪಣ). ಬಡವರಿಗೆ ಮನೆ ಕಟ್ಟಿಸಿಕೊಡುವುದು, ವೈದ್ಯಕೀಯ ಸೇವೆಗೆ ನೆರವು ಹೀಗೆ ಇದನ್ನು ಅವರವರ ಶಕಾöನುಸಾರ ಮಾಡಬಹುದು. ಹೀಗೆ ಮಾಡಿದರೆ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next