Advertisement

Ayodhya: ಶ್ರೀರಾಮನು ಅದೇಕೆ ನಮ್ಮನ್ನೆಲ್ಲ ಅಷ್ಟೊಂದು ಆವರಿಸಿಬಿಟ್ಟಿದ್ದಾನೆ?!

12:05 PM Jan 22, 2024 | Team Udayavani |

ರಾಮನು ನಮ್ಮ ಪಾಲಿಗೆ ಭಗವಂತನ ಅವತಾರವಷ್ಟೇ ಅಲ್ಲ. ನಿತ್ಯಜೀವನಕ್ಕೆ ಧ್ಯೇಯನಾದ ಆದರ್ಶ ರಾಜನೂ, ವಿಧೇಯ ಪುತ್ರನೂ, ವಾತ್ಸಲ್ಯಮಯ ಭ್ರಾತನೂ, ಅಪ್ಪಟ ಮಿತ್ರನೂ, ಪ್ರೇಮಪೂರ್ಣ ಪತಿಯೂ, ದಕ್ಷ ನಾಯಕನೂ, ಮಹಾನ್‌ ಯೋಗೀಶ್ವರನೂ ಪ್ರಕೃತಿಪ್ರಿಯನೂ ಎಲ್ಲವೂ ಆಗಿದ್ದಾನೆ. ಆತನನ್ನು ಈ ಯಾವ ಕೋನದಿಂದ ನೋಡಿದರೂ ಅವನು ನಮಗೆ ಬೇಕೆನಿಸುತ್ತಾನೆ.

Advertisement

ಅಯೋಧ್ಯೆಯಲ್ಲಿ ರಾಮಮಂದಿರ ಪುನಃಪ್ರತಿಷ್ಠಾಪನಾಮಹೋತ್ಸವದ ಸಂದರ್ಭದಲ್ಲಿ ಎಲ್ಲೆಡೆ ರಾಮನದೇ
ಮಾತು! ಸರ್ವಂ ರಾಮಮಯಂ ಆಗಿಬಿಟ್ಟಿದೆ. ಶ್ರೀರಾಮನು ಅದೇಕೆ ನಮ್ಮನ್ನೆಲ್ಲ ಅಷ್ಟೊಂದು ಆವರಿಸಿ  ಬಿಟ್ಟಿದ್ದಾನೆ?! ಎಂತಹ ಐತಿಹಾಸಿಕ ಪೌರಾಣಿಕ ವ್ಯಕ್ತಿಯೇ ಆದರೂ, ಆತನ ಮಹತ್ವ ಜನಪ್ರಿಯತೆಗಳು ದೇಶ ಕಾಲ ಸಂದರ್ಭಗಳಿಗೆ ನಿಬದ್ಧವಾಗಿದ್ದು, ಮುಗಿಯುತ್ತದೆ. ಆದರೆ ರಾಮ ಕೃಷ್ಣ ಹನುಮಾದಿಗಳು ಬಂದು ಹೋಗಿ ಸಹಸ್ರಮಾನಗಳೇ ಕಳೆದರೂ ಅವರ ಪ್ರೇಮ ಮತ್ತು ಪ್ರಭಾವಗಳು ಭಾರತದ ಹೃದಯಹೃದಯದಲ್ಲಿ ಚಿರಸ್ಥಾಯಿಯಾಗಿ ನಿಂತಿರುವುದು ಹೇಗೆ? ಈ ಮಹತ್ತಮವಾದ ಆಸ್ಥೆ-ಶ್ರದ್ಧೆಗಳು ಅನಿತರಸಾಧಾರಣವೇ ಸರಿ!

ಈ ಸನಾತನಶ್ರದ್ಧೆಯನ್ನು ಭಾರತೀಯರ ಮತಿಮನಗಳಿಂದ ತೊಡೆದುಹಾಕಲು, ಅಂದು ಆಂಗ್ಲರ ಶಿಕ್ಷಣ-ಮಾಧ್ಯಮ- ಮತಾಂತರ ಕುತಂತ್ರಗಳೂ, ಇಂದು ವಾಮರ-ಮತಾಂತರಿಗಳ ಕುತಂತ್ರಗಳೂ ಹರಡಿದ ವೈಚಾರಿಕವಿಷವದೆಷ್ಟು! ರಾಮಕೃಷ್ಣರನ್ನು ಮೈಥೊಲಾಜಿಕಲ್‌(ಕಲ್ಪಿತ) ಎಂದೂ, ಇಂದಿನ ಬದುಕಿಗೆ ಅಪ್ರಸ್ತುತರೆಂದೂ, ಸ್ತ್ರೀಶೋಷಕರೆಂದೂ ಜಾತಿವಾದಿಗಳೆಂದೂ ಫೆಮಿನಿಸಂ, ಲಿಬರಲಿಸಂ, ವೋಕಿಸಂ, ಸಮಾಜವಾದಗಳ ಮುಖವಾಡದಲ್ಲಿ ದೂಷಿಸುವ ಟೂಲ್‌ -ಕಿಟ್‌ಗಳನ್ನು ದಶಕಗಳಿಂದ ಬಳಸಿರುವುದದೆಷ್ಟು! ಆದರೂ ರಾಮೋ ವಿಗ್ರಹವಾನ್‌ ಧರ್ಮಃ ಎನ್ನುವ ಆಸ್ಥೆಯು ನಮ್ಮಮತಿಮನಗಳಿಂದ ಅಳಿಯಲಿಲ್ಲ. ನಮ್ಮ ಹೃನ್ಮನಗಳಲ್ಲೂ ವಿಚಾರ ವಿಮರ್ಶೆಗಳಲ್ಲೂ ಸಾಹಿತ್ಯ ಕಾವ್ಯಗಳಲ್ಲೂ ಹಬ್ಬಹರಿದಿನಗಳಲ್ಲೂ ಗೀತ-ನೃತ್ಯ-ನಾಟಕ-ಹರಿಕಥೆಗಳಲ್ಲೂ ಜಾನಪದದ ಮುಗ್ಧಸುಂದರ ಆಚರಣೆಗಳಲ್ಲೂ ರಾಮ ತುಳುಕುತ್ತಲೇ ಇದ್ದಾನೆ! ಇದು ನಿಜಕ್ಕೂ ಗಮನೀಯ ಮನನೀಯ.

ರಾಮನು ಭಾರತೀಯರ ಧಾರ್ಮಿಕ ಆಸ್ತಿಕ್ಯಾ ವಸ್ತುವಷ್ಟೇ ಆಗಿ ಉಳಿದಿಲ್ಲ. ನಮ್ಮ ಜೀವನದ ಸಾಚಾರವಿಚಾರಗಳ ಹಲವು ಮಜಲುಗಳನ್ನು ತುಂಬಿಬಿಟ್ಟಿದ್ದಾನೆ. ರಾಮನು ನಮ್ಮ ಪಾಲಿಗೆ ಭಗವಂತನ ಅವತಾರವಷ್ಟೇ ಅಲ್ಲ. ನಿತ್ಯಜೀವನಕ್ಕೆ ಧ್ಯೇಯನಾದ ಆದರ್ಶ ರಾಜನೂ, ವಿಧೇಯ ಪುತ್ರನೂ, ವಾತ್ಸಲ್ಯಮಯ ಭ್ರಾತನೂ, ಅಪ್ಪಟ ಮಿತ್ರನೂ, ಪ್ರೇಮಪೂರ್ಣ ಪತಿಯೂ, ದಕ್ಷ ನಾಯಕನೂ, ಮಹಾನ್‌ ಯೋಗೀಶ್ವರನೂ ಪ್ರಕೃತಿಪ್ರಿಯನೂ ಎಲ್ಲವೂ ಆಗಿದ್ದಾನೆ. ಆತನನ್ನು ಈ ಯಾವ ಕೋನದಿಂದ ನೋಡಿದರೂ ಅವನು ನಮಗೆ ಬೇಕೆನಿಸುತ್ತಾನೆ. ರಾಜಕುವರನಾದರೂ ಅಪಾರ ಸೌಜನ್ಯ, ಸ್ನೇಹ, ಮೈತ್ರೀ, ಕರುಣೆ ಸರಳತೆ, ಭೇದರಾಹಿತ್ಯಗಳನ್ನು ಪಾಲಿಸಿದ ಆತನು ನಮಗೆ ಆತ್ಮೀಯನೆನಿಸುತ್ತಾನೆ.

ಪಿತೃಭಕ್ತಿಯಲ್ಲೂ, ಪ್ರಜಾಸೇವೆಯಲ್ಲೂ ಅಪ್ರತಿಮನೆನಿಸಿ ನಮ್ಮ ಹೃದಯವನ್ನು ಗೆಲ್ಲುತ್ತಾನೆ. ತನ್ನ ಹಿತವನ್ನು ಬದಿಗೊತ್ತಿ ಸದಾ ಸಮಷ್ಟಿಹಿತವನ್ನೇ ಚಿಂತಿಸಿ, ಅದಕ್ಕಾಗಿ ಮಹತ್ತಮ ತ್ಯಾಗವನ್ನು ಗೈದ ರಾಜನಾಗಿ ನಮ್ಮ ಹೃನ್ಮನಗಳು ತುಂಬಿಬರುತ್ತವೆ. ಅಪಹೃತಳಾದ ಪತ್ನಿಯನ್ನರಸಿ ಸಾವಿರಾರು ಮೈಲಿಗಳು ನಡೆದು ಸಮುದ್ರಕ್ಕೇ ಸೇತುವನ್ನು ಕಟ್ಟಿ, ಅದ್ವಿತೀಯವೀರನಾದ ರಾವಣನನ್ನೂ ಅವನ ಸೈನ್ಯವನ್ನೂ ನುಚ್ಚುನೂರು ಮಾಡಿದ ಪ್ರೇಮಪೂರ್ಣಪತಿಯಾಗಿ ನಮ್ಮ ಹೃದಯವನ್ನು ಸೆಳೆಯುತ್ತಾನೆ. ಎಂತಹ ಸಂಕಷ್ಟಗಳಲ್ಲೂ ಆತನು ಮೆರೆದ ಶಾಂತಿನಿರ್ಲಿಪ್ತಿಗಳಂತೂ ಭಗವದ್ಗೀತೆ ವೇದಾಂತಗಳ ಕ್ಷಾಂತಿಗುಣಸಾಧನೆಗೆ ಉಜ್ವಲ ನಿದರ್ಶನಗಳೇ ಆಗಿವೆ. ಸಂಘಟನೆ ರಾಜತಂತ್ರ ಯುದ್ಧಕೌಶಲ ನಾಯಕತ್ವಗಳನ್ನು ಮೆರೆದ ಧೀರನಾಗಿಯೂ ನಮ್ಮನ್ನು ಬೆರಗಾಗಿಸುತ್ತಾನೆ. ಅಪಾರ ಪ್ರಕೃತಿಪ್ರೇಮ, ಪಶು-ಪಕ್ಷಿ-ತಿರ್ಯಕ್‌ ಜಂತುಗಳಲ್ಲೂ ಮೆರೆಸಿದ ಸ್ನೇಹದ ಮೂಲಕವೂ ಮನಸೆಳೆಯುತ್ತಾನೆ.

Advertisement

ನಾರಾಯಣಾವತಾರವಾಗಿ ಕಣ್ಮುಚ್ಚಿ ಭಕ್ತಿಯಿಂದ ಭಜಿಸಲೂ ರಾಜರಾಮನ ತಾರಕನಾಮವೇ ನಮಗೆ ಅತ್ಯಂತ ಮಾನ್ಯ ಭಾವ್ಯ! ರಾಮನ ಗುಣರಾಶಿಯನು ನಮ್ಮ ಮುಂದೆ ವಿವರಿಸುವಂತಹ ರಾಮಾಯಣವಂತೂ ನಿತ್ಯಪಾಠ ಪ್ರವಚನ ಪಾರಾಯಣಗಳ ಸಾಧನವೇ ಆಗಿದೆ. ನವರಸಗಳನ್ನು ಅಭಿವ್ಯಂಜಿಸಲು ಆಸ್ವಾದಿಸಲು ಉತ್ಕಟರಸೋದ್ದೀಪ ಪ್ರಸಂಗಗಳ ರಾಮಾಯಣವು ನವರಸಗಳ ರಸಾಗಾರವೇ ಆಗಿದ್ದು ಸಹಸ್ರಮಾನಗಳಿಂದಲೂ ಭಾರತಾದ್ಯಂತ ಎಲ್ಲ ಬಗೆಯ ಶಾಸ್ತ್ರೀಯ ಹಾಗೂ ಜಾನಪದೀಯ ಕಥೆ-ಕಾವ್ಯ -ಗೀತ-ನೃತ್ಯ-ನಾಟಕ-ಚಿತ್ರ-ಶಿಲ್ಪ-ಹರಿಕಥೆ-ಜಾನಪದ-ಮೇ ಳಪ್ರಕಾರಗಳಿಗೆ ಜನಪ್ರಿಯ ವಸ್ತುವಿಶೇಷವೆನಿಸಿದೆ. ಸತ್ಯಧರ್ಮಗಳನ್ನೂ ಧರ್ಮಾರ್ಥಕಾಮಮೋಕ್ಷಗಳನ್ನೂ ಚರ್ಚಿಸುವಾಗಲೂ ಚಿಂತಕರಿಗೆ ಒದಗುವ ರಾಮಾಯಣವು, ರಾಜಧರ್ಮ, ಸಮಷ್ಟಿಹಿತ, ಪ್ರಜಾತಂತ್ರಗಳನ್ನು ವಿಶ್ಲೇಶಿಸುವಾಗಲೂ ಆಧುನಿಕಕಾಲಕ್ಕೂ ಪ್ರಸ್ತುತವೆನಿಸುತ್ತದೆ. ಪ್ರಜಾಹಿತೇ ಸುಖಂ ರಾಜ್ಞಃ ಎಂಬ ಮಾತಿಗೆ ನಿದರ್ಶನದಂತೆ ಬದುಕಿದ ಸೀತಾ ರಾಮರದ್ದೇ ಮಹೋನ್ನತ ಉದಾಹರಣೆಗಿಂತ ನಾಯಕತ್ವದ ಉನ್ನತ ಉದಾಹರಣೆ ಮತ್ತೊಂದು ಹೊಳೆಯದು!

ತನ್ನ ಮಗನೂ ಪತಿಯೂ ಪುತ್ರನೂ ರಾಮನಂತಿರಬೇಕೆಂದು ಭಾರತದ ಸ್ತ್ರೀಹೃದಯ ಕೋರುತ್ತದೆ. ತಮ್ಮ ರಾಜನೂ ನಾಯಕನೂ ರಾಮನಂತಿರಬೇಕೆಂದು ಎಲ್ಲ ಸಾಮಜಿಕರೂ ಕೋರುತ್ತಾರೆ. ಒಟ್ಟಿನಲ್ಲಿ ಔತ್ತಮ್ಯಕ್ಕೂ ಔದಾರ್ಯಕ್ಕೂ ಸಕಲಸನ್ಮಂಗಲಕ್ಕೂ ರಾಜಾರಾಮನು ಆದರ್ಶ. ಈ ರಾಮಪ್ರೇಮವನ್ನು ಇದೆಲ್ಲ ಕೇವಲ ಭಾವುಕತೆಯ ಅಲೆಗಳು ಬಿಡಿ ಎಂದು ತಳ್ಳಿಹಾಕುವಂತಿಲ್ಲ. ಭಾವುಕತೆಯ ಪ್ರಭಾವವು ಒಂದಷ್ಟು ಜನರನ್ನು ಒಂದಷ್ಟು ಕಾಲ ಮಾತ್ರವೇ ಹಿಡಿದಿಡಬಲ್ಲುದು. ಆದರೆ ದೇಶಕಾಲಾತೀತವಾಗಿ ರಾಮನ ವ್ಯಕ್ತಿತ್ವ ಸಾಧನೆಗಳು ಪೀಳಿಗೆ ಪೀಳಿಗೆಗಳನ್ನು ಸಹಸ್ರಮಾನಗಳಿಂದ ಒಂದೇ ಮಟ್ಟದಲ್ಲಿ ಪ್ರಭಾವಗೊಳಿಸುತ್ತ ಮುನ್ನಡೆಸಿದ ಎಂದ ಮೇಲೆ, ಇಲ್ಲಿನ ಸತ್ವವನ್ನು ನಾವು ಅಲ್ಲಗಳೆಯುವಂತಿಲ್ಲ.

ಯಾವುದೇ ಆರೋಪಿತವಾದ ಮತ-ಆಚರಣೆ- ಅಭಿಪ್ರಾಯಗಳು, ಮುಖಕ್ಕೆ ಹಚ್ಚಿದ ಕ್ರೀಂ ತರಹ ಕೆಲಕಾಲದ ನಂತರ ಮಾಸಲೇಬೇಕು. ಅಪ್ರಸ್ತುತವಾಗಲೇ ಬೇಕು. ಆದರೆ, ಆಯಾ ಪ್ರದೇಶ, ಸಂಸ್ಕೃತಿ, ಜನಜೀವನದ ಅಗತ್ಯ ಸಂವೇದನೆಗಳಿಗೆ ಒದಗುವಂತೆ ಸಹಜಸುಂದರವಾಗಿ ಒಡಮೂಡಿದ ಸತ್ಯಧರ್ಮಾದರ್ಶಗಳು ಮಾತ್ರ ಚಿರಶಾಶ್ವತವಾಗಿ ಉಳಿಯುತ್ತವೆ ಬೆಳೆಯುತ್ತವೆ. ಅಂತಹದ್ದನ್ನೇ ಸನಾತನ ಎಂದು ಕರೆಯುತ್ತೇವೆ ಈ ನೆಲದಲ್ಲಿ. ಇಂತಹ ಸನಾತನ ನೀತಿಯು ಜನಸಾಮಾನ್ಯರಿಗೆ ಜೀವನಮೌಲ್ಯಗಳನ್ನು ಕಟ್ಟಿಕೊಡುತ್ತ, ಆಚಾರಕ್ಕೂ ವಿಚಾರಕ್ಕೂ ಜ್ವಲಂತ ಆದರ್ಶಗಳನ್ನು ಒದಗಿಸುತ್ತ, ಜನಾಂಗಜನಾಂಗಗಳನ್ನು ನಿರಂತರವಾಗಿ ಸುದೃಢವಾಗಿ ಮುನ್ನಡೆಸುತ್ತ ವಿಕಾಸಕ್ಕೊಯ್ಯುತ್ತದೆ. ರಾಮನ ಆದರ್ಶವೂ ಅಂತಹದ್ದೇ. ನಮ್ಮ ದೇಶಧರ್ಮಸಂಸ್ಕೃತಿಗಳನ್ನೂ ರಾಜನೀತಿ ಸಮಾಜನೀತಿ ಪಾರಿವಾರಿಕ ನೀತಿಗಳನ್ನೂ ಬೆಳೆಸಿದೆ, ಬೆಳಗಿದೆ.

ರಾಜಧರ್ಮವನ್ನು ಪಾಲಿಸಲು ರಾಮನು ಗೈದ ತ್ಯಾಗವದೆಷ್ಟು! ಒಂದೇ ರಾತ್ರಿಯ ನಿಮಿಷಗಳಲ್ಲಿ ಸಿಂಹಾಸನವು ತಪ್ಪಿಹೋದಾಗ, ನಿಷ್ಕಾರಣ ವನವಾಸವೊದಗಿದಾಗ, ಆತನ ವರ್ತನೆ ಹೇಗಿತ್ತು ಎನ್ನುವುದು ನಮಗೆಲ್ಲ ಅತ್ಯಂತ ಬೋಧಕ. ಅಂತಹ ಆಘಾತವಾದಾಗ ಯಾರೇ ಆದರೂ ಸರಿ, ಅತ್ತುಕರೆದು, ವಿನಂತಿಸಿ, ಪ್ರಶ್ನಿಸಿ, ವಾದಿಸಿ, ಜನರನ್ನು ಸೇರಿಸಿ, ಹೋರಾಟಗೈದು, ಅಥವಾ ಕನಿಷ್ಟಪಕ್ಷ ಹೊರಡುವಿಕೆಯನ್ನಾದರೂ ಬೇಕೆಂದೇ ವಿಳಂಬಗೈದು… ಏನೆಲ್ಲ ನಾಟಕವನ್ನಾಡುತ್ತಿದ್ದರೋ! ಆದರೆ
ರಾಮನು?! ಈ ದಾರುಣ ನಿಮಿಷಗಳಲ್ಲಿ “ತನಗಾದ ಅನ್ಯಾಯ’ವನ್ನಷ್ಟೇ ಚಿಂತಿಸಿ ದುಡುಕಲಿಲ್ಲ ರಾಮನು. ಬದಲಾಗಿ, ರಾಜ್ಯದ ಹಿತವನ್ನು, ಶಾಂತಿಸಾಧನೆಯನ್ನು ಮುಂದಾಲೋಚಿಸಿದನು.

ವಚನಬದ್ಧನಾದ ಅಸಾಹಯಕ ವೃದ್ಧರಾಜನನ್ನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಕ್ಕಿಸಲಿಲ್ಲ. ಕೈಕೇಯಿಯ ಪ್ರತಿಭಟಿಸಿ ಖಂಡಿಸಿ ದೂಷಿಯಾಗಿಸಲಿಲ್ಲ. ಜನರೆದುರು ಕಣ್ಣೀರುಗರೆದು ಜನರ ಅನುಕಂಪವನ್ನು ಗಿಟ್ಟಿಸಿಕೊಳ್ಳಲೆಣೆಸಲಿಲ್ಲ. ರಾಜನನ್ನೇ ಸೆರೆಗೆ ತಳ್ಳಿ
ಸಿಂಹಾಸನವನ್ನೇರುವ ಹುನ್ನಾರವನೂ ಹಾಕಲಿಲ್ಲ. ವನವಾಸಗಮನವನ್ನು ಆದಷ್ಟು ವಿಲಂಬಗೊಳಿಸಿ ಪರಿಹಾರವನ್ನು
ಹುಡುಕಲೆಣೆಸಲಿಲ್ಲ. ಕಾರಣವಿಷ್ಟೇ.. ತಾನು ಅಂತಹದ್ದೇನನ್ನೇ ಮಾಡಿದರೂ ಜನಾಭಿಪ್ರಾಯಗಳಲ್ಲಿ ಭಿನ್ನತೆಗಳು ಮೂಡಿ,
ರಾಜ್ಯದಲ್ಲಿ ಕೋಲಾಹಲ, ಗಲಾಟೇಗಳಾಗುತ್ತಿದ್ದವು. ರಾಜನ ಹಾಗೂ ರಘುವಂಶದ ಮರ್ಯಾದೆ ಹೋಗುತ್ತಿತ್ತು. ತನ್ನ ನೋವನ್ನು ನುಂಗಿಕೊಂಡು ತ್ಯಾಗಮಾಡಿದರೆ, ಲೋಕಹಿತವೂ, ರಾಜ್ಯದಲ್ಲಿ ಶಾಂತಿಯೂ, ತಂದೆಯ ವಚನಪಾಲನವೂ ಸಿದ್ಧಿಸುತ್ತವಾದರೆ, ತಾನೇಕೆ ತ್ಯಾಗ ಮಾಡಬಾರದು? ಎಂದು ಅಲೋಚಿಸಿದ ಉದಾರಿ ರಾಮನು! ಪ್ರಜಾವಿಕೋಪವೇಳುವ ಮುನ್ನವೇ ತ್ವರೆಯಲ್ಲಿ ಕಾಡಿಗೆ ಹೊರಟ ನಿಃಸ್ವಾರ್ಥಿ. ತಮ್ಮ ಭರತನಾದರೋ ವಿದ್ಯೆಯಲ್ಲೂ ಗುಣದಲ್ಲೂ ಪರಾಕ್ರಮದಲ್ಲೂ ಸಾಮರ್ಥ್ಯದಲ್ಲೂ ಯೋಗ್ಯನಾದ್ದರಿಂದ ತಂದೆಗೂ ಪ್ರಜೆಗಳಿಗೂ ಕೈಕೇಯಿಗೂ ಸಮಾಧಾನ ಎನ್ನುವ ಲೆಕ್ಕಾಚಾರವೂ ಇಲ್ಲಿದೆ.

ಇಂತಹ ಔದಾರ್ಯವಿರುವ ಬೇರಾವ ರಾಜ ತಾನೇ ಕಾಣಸಿಕ್ಕಾನು? ಮುಂದೆ ರಾಜರಾಮನು ಸಿಂಹಾಸನವೇರಿದಾಗಲೂ, ಹೆಚ್ಚಿನ ಪ್ರಜೆಗಳಲ್ಲಿ ರಾಣಿ ಸೀತೆಯ ವಿಷಯದಲ್ಲಿದ್ದ ಅಸಮಾ  ಧಾನವು ಸರ್ವತ್ರ ಗುಲ್ಲೇಳುತ್ತಿರುವುದನ್ನು ಗಮನಿಸಿ, ತಕ್ಷಣ ತನ್ನ ದಂಪತ್ಯದ ಸುಖ್ಯವನ್ನೇ ತ್ಯಾಗಗೈಯಲು ಮುಂದಾಗುತ್ತಾನೆ. ರಾಜ್ಯದ ಹಿತಸಾಧನೆಯ ಹೆಸರಲ್ಲಿ ಪ್ರಮಾಣವಚನಸ್ವೀಕರಿಸಿದ ಮೇಲೂ, ತಾನೂ ತನ್ನ ಪರಿವಾರ ತನ್ನ ಜಾತಿ ತನ್ನ ಊರಿನವರು ತನ್ನ ಹೊಗಳುಭಟ್ಟರು ತನಗೆ ಮತ ನೀಡುವವರು (ಅವರು ಗೂಂಡಾಗಳೇ ಆಗಲಿ ಆತಂಕವಾದಿಗಳೇ ಆಗಲಿ) ಅಂತಹವರ್ಗಾಗಿ ಮಾತ್ರವೇ ಅನುಕೂಲವನ್ನೊದಗಿಸುವಂತಹ
ವರು ಇರುವ ಈ ಕಾಲದಲ್ಲಿ, ಪ್ರಜಾಭಿಮತಕ್ಕೆ ಇಷ್ಟೊಂಡು ಗೌರವವನ್ನಿತ್ತ ರಾಮನ ವ್ಯಕ್ತಿತ್ವ ಅನೂಹ್ಯ ಎತ್ತರದಲ್ಲಿ ಕಾಣಬರುತ್ತದೆ. ಅವನ ಆ ರಾಜಧರ್ಮ ನಿಷ್ಠೆಯನ್ನರಿತಂತ ರಾಣಿ ಸೀತೆಯೂ ಅದನ್ನು ಅನುಮೋದಿಸಿ ದಳಲ್ಲದೆ, ಬೆಂಬಲಿಸಿದ್ದು ಅವಳ ಸಮಾನೌ ದಾರ್ಯ ವನ್ನು ತೋರುತ್ತದೆ.

ಇಂತಹ ಅಪೂರ್ವ ರಾಜರಾಣಿಯರ ತ್ಯಾಗ- ಸಹನೆ ಗಳಲ್ಲಿ ರಾಮರಾಜ್ಯವು ಒಡಮೂಡಲು ಸಾಧ್ಯವಾಯಿತು. ತನ್ನ ವೈಯಕ್ತಿಕ ನೋವನ್ನು ನುಂಗಿ ಕ್ಷಮೆಯನ್ನು ಮೆರೆದ ರಾಮನು ಸಮಷ್ಟಿಹಿತಕ್ಕೆ ತೊಂದರೆ ಕೊಟ್ಟವರನ್ನು ಮಾತ್ರ
ಕ್ಷಮಿಸಲಿಲ್ಲವೆನ್ನುವುದೂ ಗಮನೀಯ. ಸಜ್ಜನರಿಗೆ ಮುನಿಜನರಿಗೆ ಪ್ರಜಾಹಿತಕ್ಕೆ ಸಮಷ್ಟಿಹಿತಕ್ಕೇ ಧರ್ಮಕ್ಕೆ ನ್ಯಾಯಕ್ಕೆ ಧಕ್ಕೆತಂದಂತಹವರು ಯಾರೇ ಇರಲಿ, ಎಂತಹ ಪ್ರಚಂಡರಾಕ್ಷಸರೇ ಇರಲಿ, ರಾಮನು ಅವರನ್ನು ಉಳಿಸಲಿಲ್ಲ.
ಹುಡುಕಿಹೋಗಿ ಸಂಹರಿಸುತ್ತಿದ್ದ. ರಾಜಮರ್ಯಾದೆಗಳನ್ನು ಪಾಲಿಸಿದಷ್ಟೇ ನಿಷ್ಠೆಯಿಂದ ವನವಾಸದಲ್ಲಿ ತಾಪಸಧರ್ಮದ ನೇಮಗಳನ್ನೂ ಪಾಲಿಸಿದ.

ಎಲ್ಲಿದ್ದರೂ ಕ್ಷಾತ್ರಧರ್ಮವನ್ನೂ ಮಾನವೀಯತೆಯನ್ನೂ ಮೆರೆದ. ಕಷ್ಟ, ಪ್ರತಿಕೂಲಪರಿಸ್ಥಿತಿಗಳ ನೆಪವೊಡ್ಡಿ ನಿಯಮ ಪಾಲನೆ ಯಿಂದ ನುಣೂಚಿಕೊಳ್ಳುವ ದುರ್ಬಲಮತಿಯ ಮಾನವಕುಲಕ್ಕೆ, ರಾಮನ ಆದರ್ಶವು ಅದಕ್ಕೇ ಅಷ್ಟು ಧ್ಯೇಯ, ಮಾನ್ಯ. ಹೀಗೆ ಹೇಳುತ್ತ ಹೋದರೆ ರಾಮನ ವ್ಯಕ್ತಿತ್ವದ ಹಲವು ಆಯಾಮಗಳೂ, ಜೀವನಮೌಲ್ಯಗಳೂ, ಆಚಂದ್ರಾರ್ಕವಾಗಿ
ಮಾನವಾದರ್ಶಗಳಾಗುವಂತಹವಾಗಿರುವುದನ್ನು ಉದಾಹರಿಸುತ್ತ ಸಾಗಬಹುದು.

ಡಾ.ಆರತೀ ವಿ.ಬಿ.
ಸಂಸ್ಕೃತಿ ಚಿಂತಕರು

Advertisement

Udayavani is now on Telegram. Click here to join our channel and stay updated with the latest news.

Next