ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ತಮ್ಮ ತಮಿಳು ನಾಡು ಭೇಟಿಯಲ್ಲಿ ಮಾಜಿ ರಾಷ್ಟ್ರಪತಿ ದಿ| ಅಬ್ದುಲ್ ಕಲಾಂ ಅವರ ಸ್ಮಾರಕದ ಉದ್ಘಾಟನೆಗೈದ ಬಳಿಕ ರಾಮೇಶ್ವರದಿಂದ ಅಯೋಧ್ಯೆಗೆ ಪ್ರಯಾಣಿಸುವ ಶ್ರದ್ಧಾ ಸೇತು ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.
ದೇಶದ ಎರಡು ಪ್ರಮುಖ ಯಾತ್ರಾ ಕೇಂದ್ರಗಳಾಗಿರುವ ಅಯೋಧ್ಯೆ ಮತ್ತು ರಾಮೇಶ್ವರದ ನಡುವೆ 2,921 ಕಿ.ಮೀ. ಅಂತರವಿದೆ. ಪ್ರಧಾನಿ ಮೋದಿ ಅವರು ಮಂಡಪಂ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶ್ರದ್ಧಾ ಸೇತು ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಹೊಸ ರೈಲು ಆಗಸ್ಟ್ 6ರಿಂದ ತನ್ನ ಕ್ರಮಬದ್ಧ ಸೇವೆಯನ್ನು ಆರಂಭಿಸಲಿದೆ.
ಆಯೋಧ್ಯೆಯ ಮೂಲಕ ಸಾಗುವ ರಾಮೇಶ್ವರಂ – ಫೈಜಾಬಾದ್ – ರಾಮೇಶ್ವರಂ ಟ್ರೈನ್ ಸಂಖ್ಯೆ 16794 ಪ್ರತೀ ಬುಧವಾರ ರಾತ್ರಿ 11.55ಕ್ಕೆ ಫೈಜಾಬಾದ್‌ನಿಂದ ಹೊರಡುತ್ತದೆ. ಶನಿವಾರ ಬೆಳಗ್ಗೆ 8.50ಕ್ಕೆ ರಾಮೇಶ್ವರವನ್ನು ತಲುಪುತ್ತದೆ.
ಮರಳುವ ಪ್ರಯಾಣದಲ್ಲಿ ರೈಲು ಸಂಖ್ಯೆ 16793 ರಾಮೇಶ್ವರದಿಂದ ಪ್ರತೀ ಭಾನುವಾರ ರಾತ್ರಿ 11.50ಕ್ಕೆ ಹೊರಟು ಬುಧವಾರ ಬೆಳಗ್ಗೆ 8.30ಕ್ಕೆ ಫೈಜಾಬಾದ್‌ಗೆ ಆಗಮಿಸುತ್ತದೆ. ಇದು 2017ರ ಆಗಸ್ಟ್ 6ರಿಂದ ಆರಂಭವಾಗುತ್ತದೆ.
ಒಟ್ಟು 18 ಕೋಚ್‌ಗಳನ್ನು ಹೊಂದಿರುವ ಈ ಹೊಸ ರೈಲು ಮನಮಧುರೆ, ತಿರುಚಿನಾಪಳ್ಳಿ, ತಂಜಾವೂರು, ವಿಲ್ಲುಪುರಂ, ಚೆನ್ನೈ ಎಗ್‌ಮೋರ್, ಗುಡೂರು, ವಿಜಯವಾಡ, ವಾರಂಗಲ್, ಬಲ್ಲಾರ್‌ಶಾ, ನಾಗ್ಪುರ, ಇಟಾರ್ಸಿ, ಜಬಲ್ಪುರ, ಸಾತ್ನಾ, ಅಲಹಾಬಾದ್, ಜಾನ್‌ಪುರ, ಅಯೋಧ್ಯೆ ಸ್ಟೇಶನ್‌ಗಳಲ್ಲಿ ತನ್ನ ಎರಡೂ ದಿಕ್ಕಿನ ಪ್ರಯಾಣದಲ್ಲಿ ನಿಲುತ್ತದೆ.