ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ಟೀಸರ್ ರಿಲೀಸ್ ಮಾಡಿದ್ದ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಚಿತ್ರದಲ್ಲಿ ರಾವಣ ಮತ್ತು ಹನುಮಂತ ಸೇರಿದಂತೆ ಪುರಾಣದ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ವಿವಾದಗಳು ಆರಂಭವಾಗಿದೆ.
ಇದೀಗ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕರು ಕೂಡಾ ಚಿತ್ರದ ವಿರುದ್ಧ ಕಿಡಿಕಾರಿದ್ದು, ಆದಿ ಪುರುಷ್ ಚಿತ್ರವನ್ನು ಬ್ಯಾನ್ ಮಾಡಬೇಕು, ಪ್ರಭಾಸ್ ಚಲನಚಿತ್ರವು ದೇವತೆಗಳನ್ನು “ತಪ್ಪಾಗಿ ಚಿತ್ರಿಸಲಾಗಿದೆ” ಎಂದು ಹೇಳಿದ್ದಾರೆ.
ಸಿನಿಮಾವನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದ ಅರ್ಚಕ ಸತ್ಯೇಂದ್ರ ದಾಸ್, ಸಿನಿಮಾದಲ್ಲಿ ರಾವಣನನ್ನು ಚಿತ್ರಿಸಿದ ರೀತಿ “ಸಂಪೂರ್ಣ ತಪ್ಪು ಮತ್ತು ಖಂಡನೀಯ” ಎಂದು ಆರೋಪಿಸಿದರು.
ಇದನ್ನೂ ಓದಿ:ಕಾರ್ತಿಕ ಮಾಸದಲ್ಲಿ ಅಲ್ಲೋಲ-ಕಲ್ಲೋಲ: ಕೋಡಿಮಠದ ಶ್ರೀ ಭವಿಷ್ಯ
ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್, ಸೈಫ್ ಆಲಿ ಖಾನ್, ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಮಿಂಚಿದ್ದರೆ, ರಾವಣನ ಪಾತ್ರದಲ್ಲಿ ಸೈಫ್ ಆಲಿ ಖಾನ್ ಕಾಣಿಸಿಕೊಂಡಿದ್ದಾರೆ.
“ಮಹಾಕಾವ್ಯದಲ್ಲಿ ಉಲ್ಲೇಖಿಸಿರುವಂತೆ ಭಗವಾನ್ ರಾಮ ಮತ್ತು ಹನುಮಂತನನ್ನು ಆದಿಪುರುಷ್ ಸಿನಿಮಾದಲ್ಲಿ ತೋರಿಸಿಲ್ಲ. ಇದು ಅವರ ಘನತೆಗೆ ವಿರುದ್ಧವಾಗಿದೆ” ಎಂದು ಅಯೋಧ್ಯೆ ಅರ್ಚಕರು ಹೇಳಿದ್ದಾರೆ.