Advertisement

ಮಂದಿರ ನಿರ್ಮಾಣಕ್ಕೆ ಅಧ್ಯಾದೇಶ ಹೊರಡಿಸಿ

04:20 AM Nov 05, 2018 | Team Udayavani |

ಹೊಸದಿಲ್ಲಿ/ಬಿಕಾನೇರ್‌/ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತನ್ನಿ. ಅದು ಅಸಾಧ್ಯವಾದರೆ ಅಧ್ಯಾದೇಶ ಜಾರಿ ಮಾಡಿ…’ – ಹೀಗೆಂದು ದಿಲ್ಲಿಯಲ್ಲಿ ರವಿವಾರ ಮುಕ್ತಾಯ ಗೊಂಡ ಸಾಧು-ಸಂತರ ‘ಧರ್ಮಾದೇಶ’ ಸಮಿತಿ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ದೇಶದ ವಿವಿಧೆಡೆಯಿಂದ ಆಗಮಿಸಿದ್ದ 3 ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಮುಖಂಡರು, ಸಂತರು ಈ ಒತ್ತಾಯ ಮಾಡಿದ್ದಾರೆ. ಅಖೀಲ ಭಾರತ ಸಂತರ ಸಮಿತಿಯ ಮುಖ್ಯಸ್ಥ ರಮಾನಂದ ಹಂಸದೇವಾಚಾರ್ಯ ಮಾತನಾಡಿ, ‘ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಅಧ್ಯಾದೇಶ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ನಾವು ನಿರ್ದೇಶನ ನೀಡುತ್ತಿದ್ದೇವೆ’ ಎಂದು ಹೇಳಿದರು.

Advertisement

ಕೇಂದ್ರ ಸರಕಾರ ದೇಶಕ್ಕಾಗಿ ಕೈಗೊಂಡ ಕೆಲಸಗಳ ಬಗ್ಗೆ ತೃಪ್ತಿ ಇದೆ. ಆದರೆ ರಾಮಮಂದಿರ ನಿರ್ಮಾಣದ ನಿಟ್ಟಿನಲ್ಲಿ ಯಾವುದೇ ಮುತುವರ್ಜಿ ವಹಿಸಿಲ್ಲ ಎನ್ನುವುದಕ್ಕೆ ಖೇದವಿದೆ ಎಂದು ಧರ್ಮಾದೇಶ ನಿರ್ಣಯದಲ್ಲಿ ಅಭಿಪ್ರಾಯಪಡಲಾಗಿದೆ. ಮುಂದಿನ ಚುನಾವಣೆಯಲ್ಲಿಯೂ ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನೇ ಅಧಿಕಾರಕ್ಕೆ ತರಬೇಕು ಎಂಬ ಕರೆಯನ್ನೂ ಸಮ್ಮೇಳನ ನೀಡಿದೆ.

ಗಂಗಾ ನದಿ ಶುದ್ಧೀಕರಣ, ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರಗಳನ್ನು ಆದ್ಯತೆಯಲ್ಲಿ ಜಾರಿಗೊಳಿಸಬೇಕು ಎಂದೂ ಸರಕಾರವನ್ನು ಒತ್ತಾಯಿಸಲಾಗಿದೆ. ಸಮಾವೇಶದಲ್ಲಿ ಮಾತನಾಡಿದ ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ, ಅಯೋಧ್ಯೆ ವಿವಾದ‌ ಪರಿಹಾರಕ್ಕೆ ಕೋರ್ಟ್‌ ತೀರ್ಪಿಗಿಂತ ಮಾತುಕತೆಯೇ ದಾರಿ ಎಂದಿದ್ದಾರೆ.


ಆತ್ಮಾಹುತಿಯ ಬೆದರಿಕೆ

ಈ ನಡುವೆ ಅಯೋಧ್ಯೆಯಲ್ಲಿರುವ ತಪಸ್ವಿ ಚ್ವಾನಿ ದೇಗುಲದ ಸ್ವಾಮಿ ಪರಮಹಂಸ ದಾಸ ಅವರು ರವಿವಾರ ಮಾತನಾಡಿ, ರಾಮಮಂದಿರ ವಾಗ್ಧಾನ ಪೂರೈಸಲು ಕೇಂದ್ರ ವಿಫ‌ಲವಾದರೆ ಆತ್ಮಾಹುತಿ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಡಿ.5ರ ಒಳಗಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಅವರು ಅ.6ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ದೀಪ ಹೊತ್ತಿಸಿರಿ
‘ರಾಮ ಮಂದಿರ ನಿರ್ಮಾಣಕ್ಕಾಗಿ ದೀಪ ಹೊತ್ತಿಸಿರಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜನರಿಗೆ ಮನವಿ ಮಾಡಿದ್ದಾರೆ. ಈ ಬಾರಿಯ ದೀಪಾವಳಿಯಂದೇ ಅದು ಶುರುವಾಗಲಿ ಎಂದು ಹೇಳಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಜಲಾವೋ ಏಕ್‌ ದಿಯಾ ರಾಮ್‌ ಮಂದಿರ್‌ ಕೆ ನಾಮ್‌ ಕಾ’ ಎಂಬ ಹ್ಯಾಶ್‌ಟ್ಯಾಗ್‌ ಅನ್ನೂ ಸೃಜಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾದರೆ ರಾಮನ ಹೆಸರಿನಲ್ಲಿ ದೀಪವನ್ನು ಹೊತ್ತಿಸಬೇಕು ಎಂದು ರಾಜಸ್ಥಾನದ ಬಿಕಾನೇರ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ಅದುವೇ ಮುಂದೆ ನಿಜವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದ್ದಾರೆ.

Advertisement


ಕೆರಳಿಸಿದಂತಾಗುತ್ತದೆ

ಇದೇ ವೇಳೆ ಮಸೀದಿಯ ಸಮೀಪದಲ್ಲಿಯೇ ರಾಮ ಮಂದಿರ ನಿರ್ಮಿಸುವುದು ಎಂದರೆ ಹಿಂದೂಗಳನ್ನು ಕೆರಳಿಸಿದಂತಾಗುತ್ತದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ವಿಶ್ವದಲ್ಲಿಯೇ ಹಿಂದೂಗಳು ಅತ್ಯಂತ ತಾಳ್ಮೆಯುಳ್ಳವರು. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ಸಮೀಪದಲ್ಲಿಯೇ ಮಸೀದಿ ನಿರ್ಮಿಸಿದರೆ ಹಿಂದೂಗಳು ಸಹನೆ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಅವರು ಆಹ್ವಾನ ನೀಡಿದ್ದಾರೆ. ಅದರಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್‌ನ ಪಾಪಗಳನ್ನು ತೊಳೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಮದೀನಾದಲ್ಲಿ ದೇಗುಲ ಅಥವಾ ವ್ಯಾಟಿಕನ್‌ ಸಿಟಿಯಲ್ಲಿ ಮಸೀದಿ ನಿರ್ಮಿಸಬಾರದು ಎಂದಿದ್ದರೆ ಅಯೋಧ್ಯೆಯಲ್ಲಿ ಕೂಡ ದೇಗುಲದ ಜತೆಗೆ ಮಸೀದಿ ನಿರ್ಮಾಣ ಎನ್ನುವುದು ಸರಿಯಲ್ಲ ಎಂದರು.

ಹೃದಯದಲ್ಲಿ ರಾಮಮಂದಿರ ನಿರ್ಮಿಸಿ: ಶಶಿ ತರೂರ್‌
ಹಿಂದೂಗಳ ಯಾವುದೇ ಗ್ರಂಥದಲ್ಲಿ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಒಂದು ವೇಳೆ ರಾಮನನ್ನು ನಿರ್ಮಿಸಿ ಎಂದು ಗ್ರಂಥಗಳಲ್ಲಿ ಹೇಳಿದ್ದರೆ, ಅದನ್ನು ನಿಮ್ಮ ಹೃದಯದಲ್ಲಿ ನಿರ್ಮಿಸಿ. ಏಕೆಂದರೆ ಆತ ಎಲ್ಲೆಲ್ಲಿಯೂ ಇದ್ದಾನೆ ಎಂದು ಹೇಳಿದ್ದಾರೆ. ಯಾವನೇ ಓರ್ವ ಉತ್ತಮ ಹಿಂದೂ ಹಿಂಸೆಯಿಂದಾಗಿ ದೇಗುಲ ನಿರ್ಮಾಣಕ್ಕೆ ಪ್ರೋತ್ಸಾಹಿಸಲಾರ ಎಂಬ ಮಾತುಗಳನ್ನು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯವನ್ನು ತಡೆಯಲು ಪ್ರಪಂಚದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ಏಕೆಂದರೆ ಈ ಬಗ್ಗೆ ಜನರು ಹೊಂದಿರುವ ಸಹನೆ ಈಗ ಮೀರತೊಡಗಿದೆ.
– ಗಿರಿರಾಜ್‌ ಸಿಂಗ್‌, ಕೇಂದ್ರ ಸಚಿವ

ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಶುರುವಾಗಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತ. ಅದು ನಿಜಕ್ಕೂ ಅಪಾಯಕಾರಿ. 2019ರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ಇದಾಗಿದೆ.
– ಮೌಲಾನಾ ವಾಲಿ ರೆಹಮಾನಿ, ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next