Advertisement
ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಸೋಮವಾರ ಪ್ರಾಣ ಪ್ರತಿಷ್ಠೆಯಾಗುತ್ತಿದ್ದಂತೆ ಕರಾವಳಿ ಭಾಗದ ವಿವಿಧ ಸ್ಥಳಗಳು ಸಂಪೂರ್ಣ ರಾಮಮಯವಾಗಿ ಕಂಗೊಳಿಸಿತು. ಅಯೋಧ್ಯಾಧಿಪತಿಯ ಪುರಪ್ರವೇಶದ ಸಂಭ್ರಮ ಅಲ್ಲಿ ಮನೆ ಮಾಡಿದ್ದರೆ ಅದನ್ನು ನೇರ ಪ್ರಸಾರದಲ್ಲಿ ಕಂಡ ಕರಾವಳಿ ಮಂದಿ ಭಕ್ತಿ ಭಾವದಿಂದ ಸಂಭ್ರಮಿಸಿದರು.
ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆಯೂ ವರದಿಯಾಗಿಲ್ಲ.
Related Articles
ಎಲ್ಲ ದೇವಾಲಗಳಲ್ಲಿ ಬೃಹತ್ ಎಲ್‌ಸಿಡಿ ಪರದೆಗಳಲ್ಲಿ, ಟಿ.ವಿ.ಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸಣ್ಣ ದೊಡ್ಡ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಅನ್ನ ಪ್ರಸಾದದ ವಿತರಣೆ ನಡೆಯಿತು. ಸಂಜೆ ಕೆಲವು ದೇವಾಲಯಗಳಲ್ಲಿ ದೀಪೋತ್ಸವ ನಡೆಯಿತು.
Advertisement
ವಿಹಿಂಪ ವತಿಯಿಂದ ಕದ್ರಿ ದೇಗುಲದಲ್ಲಿ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಂದ ಬೌದ್ಧಿಕ್ ನೆರವೇರಿತು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಮೊದಲಾದವರು ಭಾಗವಹಿಸಿದ್ದರು.
ರಾಮ ಮಂದಿರದ ಪವಿತ್ರ ಕ್ಷಣಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಣ್ತುಂಬಿಕೊಂಡರು. ಅಯೋಧ್ಯೆಯಿಂದ ನೇರ ಪ್ರಸಾರವನ್ನು ವೀಕ್ಷಿಸಿದ ನಳಿನ್ ಅವರು ಕಟೀಲಿನಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ನೇತಾರರು ಈ ವೇಳೆ ಉಪಸ್ಥಿತರಿದ್ದರು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ ಅವರು ಮಂಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.