Advertisement
ಎರಡೂ ಆಯತಗಳೂ ಸಂಧಿಸುವ ಬಿಂದುವಿನಲ್ಲಿ, ನಗರದ ಹೃದಯಭಾಗದಲ್ಲಿ ರಾಜಭವನವಿತ್ತು. ಅಲ್ಲಿಂದ ಆರಂಭಗೊಂಡು ನಾಲ್ಕೂ ದಿಕ್ಕಿಗೆ ನಾಲ್ಕು ರಾಜಮಾರ್ಗಗಳು ತೆರಳಿದ್ದವು. ರಾಜಮಾರ್ಗಗಳು ಸುವಿಶಾಲವಾಗಿದ್ದವು ಮತ್ತು ಸುವ್ಯವಸ್ಥಿತವಾಗಿ ವಿಭಾಗಿಸಲ್ಪಟ್ಟಿದ್ದವು. ರಾಜ ಮಾರ್ಗದ ಎರಡೂ ಪಾರ್ಶ್ವಗಳಲ್ಲಿ ಏಳುಮಹಡಿಯ ಸೌಧಗಳು ಸಾಲು ಸಾಲಾಗಿ ವ್ಯವಸ್ಥಿತವಾಗಿ ನಿರ್ಮಿಸಲ್ಪಟ್ಟಿ ದ್ದವು. ಭವನಗಳ ನಡುವೆ, ಒಳಗೆ, ಹೊರಗೆ ಸಾಕಷ್ಟು ಅವಕಾಶವನ್ನು ಕಲ್ಪಿ ಸಲಾಗಿತ್ತು. ಅಂಗಡಿ-ಮುಂಗಟ್ಟುಗಳೂ ಅಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿಯೇ ಸುವ್ಯವಸ್ಥಿತವಾದ ಮತ್ತು ಯೋಜಿತವಾದ ರೀತಿಯಲ್ಲಿ ಇದ್ದವು.
Related Articles
Advertisement
ಅಲ್ಲಿ ಪ್ರತಿನಿತ್ಯ ಅಭ್ಯಂಜನ ಸ್ನಾನವನ್ನು ಮಾಡದ, ಅನುಲೇಪನಗಳನ್ನು ಧರಿಸದ, ಸುಗಂಧ ದ್ರವ್ಯಗಳನ್ನು ಪೂಸದ ಮೈಯಿಲ್ಲ; ಮೃಷ್ಟಾನ್ನವುಣ್ಣದ ಬಾಯಿಲ್ಲ; ಕಂಕಣವಿಲ್ಲದ ಕರವಿಲ್ಲ; ಕುಂಡಲವಿಲ್ಲದ ಕಿವಿಯಿಲ್ಲ; ತೋಳಬಂದಿಯಿಲ್ಲದ ತೋಳಿಲ್ಲ; ಹಾರವಿಲ್ಲದ ಕೊರಳಿಲ್ಲ; ಉರೋಭೂಷಣವಿಲ್ಲದ ಉರವಿಲ್ಲ;
ಶಿರೋಭೂಷಣವಿಲ್ಲದ ಶಿರವಿಲ್ಲಸುಖ-ಭೋಗಗಳ ಕೊರತೆ ಇರುವವರಿಲ್ಲ. ಕೈಬಿಚ್ಚಿ ದಾನ ಮಾಡದವರಿಲ್ಲ. ಹೀಗೆ ಬಹಳ ಭೋಗಗಳ, ಬಹಳ ತ್ಯಾಗಗಳ ಅಪರೂಪದ ಊರಾಗಿತ್ತು ಅಯೋಧ್ಯೆ. ಇಷ್ಟೆಲ್ಲ ಸಮೃದ್ಧಿಗಳ ನಡುವೆಯೂ ಅಯೋಧ್ಯೆಯಲ್ಲಿ ಸಂಯಮವಿಲ್ಲದ ವರಿರಲಿಲ್ಲ. ಸಮೃದ್ಧಿಯು ಸಂಯಮವನ್ನು ಕೆಡಿಸುವುದು ಸಾಮಾನ್ಯ ಸಂಗತಿ; ಆದರೆ ಅಯೋಧ್ಯೆಯಲ್ಲಿ ಸಮೃದ್ಧಿಯ ಸಾಗರವು ಸಂಯಮದ ಮೇರೆಯನ್ನು ಮೀರದಿರುವುದು ಪರಮಾಶ್ಚರ್ಯವೇ ಅಲ್ಲವೇ? ಸ್ತ್ರೀ ಎಂದರೆ ಸಾಕ್ಷಾತ್ ಶ್ರೀ. ಆಕೆ ನಲಿದರೆ ದೇವತೆಗಳೆಲ್ಲ ಒಲಿಯುತ್ತಾರೆ. ಆಕೆ ನೊಂದರೆ ಆ ಕುಲಕ್ಕೇ ಅದು ಕೇಡು ಎಂಬುದು ಧರ್ಮಶಾಸನ. ಅಯೋಧ್ಯೆಯು ವರನಾರಿಯರ ಸಮೂಹಗಳಿಂದ ಭೂಷಿತವಾಗಿತ್ತು. ಮಾತ್ರವಲ್ಲ, ಅವರು ಸುಖವಾಗಿರಲು ಬೇಕಾದ ಎಲ್ಲ ಉಪಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಉದಾಹರಣೆಗೆ ಅಯೋಧ್ಯೆಯಲ್ಲಿ ಅಡಿಗಡಿಗೆ ಕೂಟಾಗಾರಗಳಿದ್ದವು. ಕೂಟಾಗಾರವೆಂದರೆ ನಾರಿಯರ ವಿಹಾರಗೃಹ. ಅವರ ಮನಸ್ಸಂತೋಷಕ್ಕೆಂದೇ ಕಲ್ಪಿತವಾದ ಸ್ಥಾನ. ಅಲ್ಲಿ ಮನವು ಮುದಗೊಳ್ಳುವಲ್ಲಿ ಸಲ್ಲುವ ಸಾಧನಗಳು, ವಿಧಾನಗಳು ಮತ್ತು ವಾತಾವರಣವನ್ನು ಕಲ್ಪಿಸಲಾಗುತ್ತಿತ್ತು. “ಅಂದಿನ ಕಾಲದಲ್ಲಿ ಸ್ತ್ರೀಯರು ಸೌಟಿಗೆ ಸೀಮಿತವಾಗಿರಲಿಲ್ಲ’ ಎಂಬುದಕ್ಕೆ ಇನ್ನೊಂದು ಉದಾಹರಣೆ- ಅಯೋಧ್ಯೆಯಲ್ಲಿ ಸರ್ವತ್ರ ಕಂಡು ಬರುತ್ತಿದ್ದ ನಾರೀ-ನಾಟಕ-ಸಂಘಗಳು. ಇಲ್ಲಿಯೂ ಪುರುಷರಿಗೆ ನಾಟ್ಯ-ನಾಟಕಗಳನ್ನು ನೋಡಲು ಮಾತ್ರವೇ ಅವಕಾಶ. ನಾರಿಯರು ಸಂಘಗಳನ್ನು ಕಟ್ಟಿ, ಭವನಗಳನ್ನು ಹೊಂದಿ, ಯಾವುದೇ ರೀತಿಯ ಕಿರುಕುಳಗಳಿಲ್ಲದೇ ನಾಟ್ಯ- ನಾಟಕಗಳನ್ನು ಅಭ್ಯಾಸ ಮಾಡುವ, ಆಡುವ ಅವಕಾಶವು ನಗರದಲ್ಲಿ ಎಲ್ಲೆಡೆ ಕಲ್ಪಿತವಾಗಿತ್ತು. ನಮ್ಮ ನಿಮ್ಮ ಪ್ರಶಂಸೆಗಳ ಮಾತು ಹಾಗಿರಲಿ, ದಶರಥನ ರಾಜ್ಯಕ್ಕೆ ದೇವರ ಪ್ರಶಸ್ತಿಯೇ ಸಂದಿತು! “ಧರೆಯೊಳಗೊಂದು ವೈಕುಂಠದ ಖಂಡ’ ಎಂಬಂತಿದ್ದ ದಶರಥನ ರಾಜ್ಯದಲ್ಲಿ ತಾನೇ ಬಂದು ನೆಲೆಸಲು ದೇವರ ದೇವನೇ ನಿಶ್ಚಯಿಸಿದನು. ಅಷ್ಟು ಮಾತ್ರವಲ್ಲ, ದಶರಥನ ಬಳಿಕ ದೊರೆಯಾಗಿ ಆ ರಾಜ್ಯವನ್ನು ತಾನೇ ಮುಂದುವರಿಸಲೂ ಸಂಕಲ್ಪಿಸಿದನು! ಹೀಗೆ ದೇವರೇ ಇಳಿದು ಬಂದ ದಿವ್ಯಭೂಮಿ ಅಯೋಧ್ಯೆ. ಅದು ರಾಮನ ತವರು; ರಾಮಾಯಣದ ಬೆರಗು.