Advertisement

Ayodhya: ಪೇಜಾವರ ಶ್ರೀಗಳ ನೇತೃತ್ವದ ಮಂಡಲೋತ್ಸವ ಇಂದು ಸಂಪನ್ನ

12:36 AM Mar 10, 2024 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ಜ. 22ರಂದು ಬಾಲರಾಮನ ಪ್ರಾಣಪ್ರತಿಷ್ಠೆ ಬಳಿಕ ಆರಂಭವಾದ ಮಂಡಲೋತ್ಸವ ಮಾ. 10ರಂದು ಸಹಸ್ರ ಕಲಶಾಭಿಷೇಕ ದೊಂದಿಗೆ ಸಮಾಪನಗೊಳ್ಳಲಿದೆ.

Advertisement

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯು ಜ. 22ರಂದು ನೆರವೇರಿತ್ತು. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾ ಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜ. 23ರಿಂದ ಮಂಡಲೋತ್ಸವ ಆರಂಭವಾಗಿತ್ತು. ಮಾ. 10ರಂದು 48 ದಿನಗಳ ಮಂಡಲೋತ್ಸವ ಸಂಪನ್ನಗೊಳ್ಳಲಿದೆ. ರವಿವಾರ ನಡೆಯುವ ಸಹಸ್ರ ಕಲಶಾಭಿಷೇಕದೊಂದಿಗೆ ಮಂಡ ಲೋತ್ಸವ ಪೂರ್ಣಗೊಳ್ಳಲಿದ್ದು, ಈ ಮೂಲಕ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ವಿಧಿ, ವಿಧಾನಗಳು ಸಂಪೂರ್ಣವಾಗಲಿವೆ.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಶ್ರೀಪಾದರು, ಸಮಾಜದಲ್ಲಿ ಸೇವಾ ಕಾರ್ಯ ಮಾಡಿಕೊಂಡು ಬರುತ್ತಿರುವ ದಾನಿಗಳು ಸೇವೆಯ ರೂಪದಲ್ಲಿ ಶ್ರೀ ರಾಮದೇವರಿಗೆ ರಜತ ಕಲಶ ಅಭಿಷೇಕವನ್ನು ಮಂಡಲೋತ್ಸವ ದಲ್ಲಿ ಮಾಡಿಸಿದ್ದಾರೆ.

ಮಾ. 10ರಂದು 48ನೇ ದಿನ. ಈ ಸಹಸ್ರ ಕಲಶಾಭಿಷೇಕದೊಂದಿಗೆ ಶ್ರೀ ದೇವರ ಪ್ರಾಣಪ್ರತಿಷ್ಠೆಗೆ ಪೂರಕವಾದ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿವೆ. ಇದಾದ ಬಳಿಕ ಪ್ರಾಣಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳು ಇರುವುದಿಲ್ಲ. ದೊಡ್ಡ ಹೋಮ, ಹವನ ಯಾವುದೂ ಸದ್ಯಕ್ಕೆ ಇರದು. ಉಳಿದಂತೆ ನಿತ್ಯಪೂಜೆಯೊಂದಿಗೆ ಕಾಲ ಕಾಲಕ್ಕೆ ನಡೆಯುವ ಉತ್ಸವಗಳು ಎಂದಿನಂತೆ ಇರಲಿವೆ ಎಂದು ಮಾಹಿತಿ ನೀಡಿದರು.

ಕಲಶಾಭಿಷೇಕದ ಅನಂತರ ರಜತ ಕಲಶ ಸಹಿತವಾಗಿ ಪ್ರಸಾದವನ್ನು ದಾನಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಮಂಡಲೋತ್ಸವದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನ್ಯಾಯಾಧೀಶರು, ತಾರೆಯರ ಸಹಿತ ದೇಶದ ವಿವಿಧ ಭಾಗದ ಕ್ಷೇತ್ರದ ಹಲವು ಗಣ್ಯರು ಪಾಲ್ಗೊಂಡು ರಜತ ಕಲಶ ಸೇವೆಯನ್ನು ಒಪ್ಪಿಸಿದ್ದಾರೆ. ಮಂಡಲೋತ್ಸವದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸಹಿತ ದೇಶದ ವಿವಿಧ ಭಾಗದ ವಿದ್ಯಾಪೀಠಗಳ ವಿದ್ವಾಂಸರು ಪಾಲ್ಗೊಂಡು ನಾನಾ ಹೋಮ, ಹವನಾದಿಗಳನ್ನು ನಡೆಸಿದ್ದಾರೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ವಾಂಸರು ಪಾಲ್ಗೊಂಡಿರುವುದು ವಿಶೇಷ ಎಂದರು.

Advertisement

ಮಂಡಲೋತ್ಸವದ ಹಿನ್ನೆಲೆಯಲ್ಲಿ ನಿತ್ಯವೂ ಅಯೋಧ್ಯೆಯಲ್ಲಿ ಪಲ್ಲಕ್ಕಿ ಉತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ರಾಜ್ಯದ ಹಲವು ಪ್ರಮುಖರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆಯ ಅನಂತರದಲ್ಲಿ ನಡೆಯುತ್ತ ಬಂದ ಮಂಡಲೋತ್ಸವವು ಹಬ್ಬದ ವಾತಾವರಣಕ್ಕೆ ಇನ್ನಷ್ಟು ಮೆರುಗು ತುಂಬಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next