Advertisement

ಕನಸು ನಾಳೆ ನನಸು: ಸಕಲ ವೈಭವದಿಂದ ಕಂಗೊಳಿಸುತ್ತಿರುವ ಅಯೋಧ್ಯೆ

10:30 AM Aug 04, 2020 | Hari Prasad |

ಅಯೋಧ್ಯೆ: ಶ್ರೀ ರಾಮ ಪಟ್ಟಾಭಿಷೇಕದ ಮುನ್ನಾದಿನ ಅಯೋಧ್ಯೆ ಹೇಗಿತ್ತು ಎನ್ನುವುದನ್ನು ಕಂಡವರಿಲ್ಲ.

Advertisement

ಆದರೆ ರಾಮಾಯಣದಲ್ಲಿ ಚಿತ್ರಿತವಾದ ಆ ದೇದೀಪ್ಯಮಾನ ನಗರಿಯ ಗತ ಚೆಲುವು ಈಗ ರಾಮಜನ್ಮಭೂಮಿಯಲ್ಲಿ ಮರಳಿ ಮೂಡುತ್ತಿದೆ.

ಆ. 5ರ ಐತಿಹಾಸಿಕ ಭೂಮಿಪೂಜೆಗಾಗಿ ಅಯೋಧ್ಯೆ ಸಕಲ ವೈಭವದಿಂದ ಕಂಗೊಳಿಸುತ್ತಿದೆ.

ನಗರದ ಪ್ರಧಾನ ದ್ವಾರಗಳಿಂದ ಮಂದಿರದವರೆಗೂ ವಿದ್ಯುದ್ದೀಪಗಳು ಸಾಲುಗಟ್ಟಿವೆ.

ನಗರದ ನೂರಾರು ಮಂದಿರಗಳಲ್ಲಿ ಸಾಧು ಸಂತರಿಂದ ರಾಮ ಜಪ ಮೊಳಗುತ್ತಿದೆ. ರಾಮಮಂದಿರದ ಅಕ್ಕಪಕ್ಕದ ವಿವಿಧ ದೇಗುಲಗಳಲ್ಲಿ ‘ರಾಮಾಯಣ ಮಾರ್ಗ’ ಪಠಣವು ಭಕ್ತಿಯ ಹೊಳೆ ಹರಿಸಿದೆ.

Advertisement

ಹಾದಿ ತುಂಬಾ ಬಣ್ಣ ಬಣ್ಣದ ರಂಗೋಲಿಗಳು, ಅಂಗಡಿಗಳ ಮುಂದಿನ ತಳಿರುತೋರಣಗಳು ರಾಮಭಕ್ತಿ ಮೆರೆಯುತ್ತಿವೆ.

ಗಣಪನಿಗೆ ಪೂಜೆ
ಸೋಮವಾರ ಅಯೋಧ್ಯೆಯಲ್ಲಿ ಗೌರೀ-ಗಣೇಶನಿಗೆ ಭಕ್ತಿಪೂರ್ವಕ ಆರಾಧನೆ ನೆರವೇರಿತು. ಪ್ರಥಮ ಪೂಜಿತನಿಗೆ ಕಾಶಿ, ಕಂಚಿ, ದಿಲ್ಲಿಯಿಂದ ಆಗಮಿಸಿದ ಪುರೋಹಿತರು ಪೂಜೆ ಸಲ್ಲಿಸಿದರು. ಬೆಳಗ್ಗೆ 8ರಿಂದಲೇ 11 ಮಂದಿ ಪುರೋಹಿತರು ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಈ ದಿವ್ಯಕ್ಷಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ವರ್ಚುವಲ್‌ ಆಗಿ ಉಪಸ್ಥಿತರಿದ್ದರು.

ಭಾವೈಕ್ಯ ಸಾರಿದ ಭೂಮಿಪೂಜೆ
ಭೂಮಿಪೂಜೆಯಲ್ಲೂ ಅಯೋಧ್ಯೆ ಭಾವೈಕ್ಯ ಸಾರಿದೆ. ರಾಮ ಜನ್ಮಭೂಮಿಯ ಭೂವಿವಾದದಲ್ಲಿ ಪ್ರಮುಖ ಕಕ್ಷಿದಾರ ಇಕ್ಬಾಲ್‌ ಅನ್ಸಾರಿ ಅವರಿಗೆ ಆ. 5ರ ಭೂಮಿಪೂಜೆಯ ಮೊದಲ ಆಹ್ವಾನ ಪತ್ರಿಕೆ ತಲುಪಿದೆ. ಎಲ್ಲರನ್ನೂ ಪ್ರೀತಿಸುತ್ತ, ಸಹಬಾಳ್ವೆಯೊಂದಿಗೆ ಸಾಗುವುದು ರಾಮಾಯಣದ ಉದ್ದಕ್ಕೂ ಶ್ರೀ ರಾಮ ಬಿತ್ತಿದ ಮಹಾನ್‌ ಆದರ್ಶ. ಅದೇ ಸಹಬಾಳ್ವೆ, ಭಾವೈಕ್ಯಕ್ಕೆ ಭೂಮಿಪೂಜೆ ಮುನ್ನುಡಿ ಬರೆದಿದೆ. ಆಹ್ವಾನ ತಲುಪಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಅನ್ಸಾರಿ, ಮೊದಲ ಆಮಂತ್ರಣ ಪತ್ರ ನನಗೆ ಸಿಕ್ಕಿರುವುದು ಬಹುಶಃ ಶ್ರೀರಾಮನ ಇಚ್ಛೆ ಎಂದೇ ಭಾವಿಸುತ್ತೇನೆ. ಹೃತ್ಪೂರ್ವಕವಾಗಿ ಇದನ್ನು ಸ್ವೀಕರಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಸುರು ರಾಮನಿಗೆ ನಮೋ
ವಾರದಲ್ಲಿ ನಿತ್ಯ ಒಂದೊಂದು ಬಣ್ಣದ ವಸ್ತ್ರ ಧರಿಸುವ ರಾಮಲಲ್ಲಾ ಬುಧವಾರ ನಡೆಯಲಿರುವ ಭೂಮಿ ಪೂಜೆಯಂದು ಹಸುರು, ಕಿತ್ತಳೆ ವರ್ಣದ ವಸ್ತ್ರದಲ್ಲಿ ಕಂಗೊಳಿಸಲಿದ್ದಾನೆ. ಬಾಲರಾಮನ ವಿಗ್ರಹಕ್ಕೆ ಉಡುಪನ್ನು ಮಕ್ಮಲ್‌ ಬಟ್ಟೆಯಿಂದ ಹೊಲಿಯಲಾಗುತ್ತದೆ. ಭೂಮಿ ಪೂಜೆಗಾಗಿ ಈಗಾಗಲೇ ಹೊಲಿದಿರುವ, ಎರಡು ಜೋಡಿ ಭವ್ಯ ವಸ್ತ್ರಗಳನ್ನು ರಾಮಲಲ್ಲಾ ವಸ್ತ್ರವಿನ್ಯಾ ಸಕ ಶಂಕರಲಾಲ್‌ ಸಹೋದರರು ಟ್ರಸ್ಟ್‌ಗೆ ಹಸ್ತಾಂ ತರಿಸಿದ್ದಾರೆ. ಇವುಗಳನ್ನು ಚಿನ್ನದ ದಾರದಲ್ಲಿ ಹೊಲಿದು, ನವರತ್ನಗಳಿಂದ ಅಲಂಕರಿಸಿರುವುದು ವಿಶೇಷ.


ಮನೆಗಳಲ್ಲಿ ದೀಪ ಬೆಳಗಿ

ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಸೋಮವಾರ ಅಯೋಧ್ಯೆಗೆ ಭೇಟಿ ನೀಡಿ, ಹನುಮಾನ್‌ಗರಿಯಲ್ಲಿ ನಡೆಯುವ ನಿಶಾನ್‌ ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳವಾರ ಮತ್ತು ಬುಧವಾರ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ದೀಪ ಹಚ್ಚುವಂತೆ ಕರೆ ನೀಡಿದ್ದಾರೆ.

ದೂರ ಉಳಿದ ಉಮಾಭಾರತಿ
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಭೂಮಿಪೂಜೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಮವಾರ ಅವರು ಟ್ವೀಟ್‌ ಮಾಡಿದ್ದು, ನಾನು ಇಂದು ಭೋಪಾಲ್‌ನಿಂದ ಹೊರಟರೆ ನಾಳೆ ಸಂಜೆ ವೇಳೆ ಅಯೋಧ್ಯೆ ಸೇರಬಹುದು. ರೈಲಿನಲ್ಲಿ ಪ್ರಯಾಣಿಸುವುದರಿಂದ ನನಗೂ ವೈರಸ್‌ ಸೋಂಕು ತಗುಲಬಹುದು. ಮೋದಿ ಅವರು ಭೂಮಿಪೂಜೆ ಮುಗಿಸಿಕೊಂಡು ದಿಲ್ಲಿಗೆ ಹೊರಟ ಬಳಿಕ ಅಯೋಧ್ಯೆಗೆ ಹೋಗುತ್ತೇನೆ. ಸರಯೂ ನದಿಯ ತಟದಲ್ಲಿ ವಿಹರಿಸುತ್ತೇನೆ ಎಂದಿದ್ದಾರೆ.


ವೇದಿಕೆಯಲ್ಲಿ ಸೀಮಿತ ಗಣ್ಯರು

ಚಾರಿತ್ರಿಕ ಭೂಮಿಪೂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಜೀ ಭಾಗವತ್‌, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನ್ಯಾಸ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್‌ ಮಾತ್ರವೇ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಕೇವಲ 175 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆಹ್ವಾನ ಪತ್ರಿಕೆಗೆ ಸೆಕ್ಯುರಿಟಿ ಕೋಡ್‌ ಹಾಕಲಾಗಿದ್ದು, ಒಮ್ಮೆ ಮಾತ್ರ ಸ್ಕ್ಯಾನ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಆಹ್ವಾನಿತರಲ್ಲಿ ಬಹುತೇಕರು ಅಯೋಧ್ಯೆಯವರೇ ಆಗಿದ್ದಾರೆ.

ಒಂದೇ ಬಟ್ಟೆಯಿಂದ ಉಡುಪು
‘ನಾನು ಬೇರೆಯಲ್ಲ, ನೀನು ಬೇರೆಯಲ್ಲ’ ಎಂಬ ಸಮಾನಭಾವದ ಮಾತುಗಳನ್ನು ಶ್ರೀರಾಮನು ಸಹೋದರ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಮತ್ತು ಹನುಮನಿಗೆ ಹೇಳಿರುವುದು ರಾಮಾಯಣಕ್ಕಷ್ಟೇ ಸೀಮಿತವಲ್ಲ. ಅಯೋಧ್ಯೆಯಲ್ಲಿ ನೆಲೆನಿಂತಿರುವ ವಿಗ್ರಹರೂಪಿ ರಾಮಲಲ್ಲಾ ಕೂಡ ತನ್ನ ಉಡುಗೆ – ತೊಡುಗೆಯಲ್ಲೂ ಇದಕ್ಕೆ ಮಾದರಿ.

ಶ್ರೀ ರಾಮನಿಗೆ ಬಳಸುವ ಬಟ್ಟೆಯಿಂದಲೇ ಲಕ್ಷ್ಮಣ, ಭರತ, ಶತ್ರುಘ್ನ, ಶಾಲಗ್ರಾಮ, ಹನುಮನಿಗೂ ಉಡುಪನ್ನು ತಯಾರಿಸುವ ಸಂಪ್ರದಾಯವಿದೆ. ರಾಮಲಲ್ಲಾನ ಉಡುಪಿಗಾಗಿ ಈ ಹಿಂದೆ 11 ಮೀಟರ್‌ ಉದ್ದದ ಬಟ್ಟೆ ಅಗತ್ಯವಿತ್ತು. ಈಗ 17 ಮೀಟರ್‌ ಬಟ್ಟೆಯನ್ನು ಬಳಸುತ್ತಿದ್ದೇವೆ. ಒಂದೇ ಬಟ್ಟೆಯಲ್ಲಿ ಎಲ್ಲರಿಗೂ ಸುಂದರ ಉಡುಪು ಸಿದ್ಧಪಡಿಸುತ್ತೇವೆ ಎನ್ನುತ್ತಾರೆ ವಸ್ತ್ರ ತಯಾರಕ ಶಂಕರ್‌ಲಾಲ್‌.

Advertisement

Udayavani is now on Telegram. Click here to join our channel and stay updated with the latest news.