ಅಯೋಧ್ಯೆ: ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಮೊಕದ್ದಮೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಶುಕ್ರವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದು, ಈ ಮಹಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
“ಇದು ಅಯೋಧ್ಯೆ ನಗರಿ, ಇದು ಧರ್ಮದ ನಗರ, ಹಿಂದೂ ಮತ್ತು ಮುಸ್ಲಿಂ ಸಮುದಾಯದ ದೇವತೆಗಳು ಇಲ್ಲಿ ಇದ್ದಾರೆ. ಅಯೋಧ್ಯೆಯ ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಸಹೋದರತೆ ಮತ್ತು ಏಕತೆ ಇದೆ ಮತ್ತು ಯಾವುದೇ ಅಶಾಂತಿ ಇಲ್ಲ. ದೇವಸ್ಥಾನ, ಮಸೀದಿ, ಗುರುದ್ವಾರ ಎಂಬ ಭೇದಭಾವವಿಲ್ಲ. ಅಯೋಧ್ಯೆಗೆ ಬರುವವರಲ್ಲಿ ಸೌಹಾರ್ದತೆಯ ಭಾವನೆ ಇದೆ’ ಎಂದು ಆಹ್ವಾನ ಸ್ವೀಕರಿಸಿದ ಕೂಡಲೇ ಪಿಟಿಐಗೆ ಹೇಳಿಕೆ ನೀಡಿದ್ದಾರೆ.
ರಾಮ್ ಪಥ್ ಬಳಿಯ ಕೋಟ್ಯ ಪಂಜಿತೋಲದಲ್ಲಿರುವ ನಿವಾಸದಲ್ಲಿ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಲಾಯಿತು ಎಂದು ಅವರ ಪುತ್ರಿ ಶಮಾ ಪರ್ವೀನ್ ಪಿಟಿಐಗೆ ತಿಳಿಸಿದ್ದಾರೆ.
ಜನವರಿ 22 ರಂದು ‘ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯ ಪಟ್ಟಣಕ್ಕೆ ಬರುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 7,000 ಅತಿಥಿಗಳು ಸೇರಿದ್ದಾರೆ.
ಅನ್ಸಾರಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ 2019ರ ತೀರ್ಪನ್ನು ಮುಸ್ಲಿಂ ಸಮುದಾಯ ಗೌರವಿಸುತ್ತದೆ ಎಂದು ಹೇಳಿದ್ದರು.
ಅನ್ಸಾರಿಯವರ ತಂದೆ ಹಾಶಿಮ್ ಅನ್ಸಾರಿ ಅವರು 2016 ರಲ್ಲಿ 90 ರ ಹರೆಯದಲ್ಲಿ ನಿಧನ ಹೊಂದಿದ್ದು ಕೊನೆಯವರೆಗೂ ಅಯೋಧ್ಯೆ ಪ್ರಕರಣದ ಪ್ರಮುಖ ದಾವೆದಾರರಲ್ಲಿ ಒಬ್ಬರಾಗಿದ್ದರು.