ಹೊಸದಿಲ್ಲಿ : ಆಯೋಧ್ಯೆಯಲ್ಲಿನ ರಾಮ ಜನ್ಮಭೂಮಿ – ಬಾಬರಿ ಮಸೀದಿ ಭೂ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಕರಣದ ವಿಚಾರಣೆ ದಿನಾಂಕವನ್ನು ಸೂಕ್ತ ಪೀಠವು ಇದೇ ಜನವರಿ 10ರಂದು ಪ್ರಕಟಿಸಿ ಆದೇಶ ಹೊರಡಿಸಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಎಸ್ ಕೆ ಕೌಲ್ ಅವರನ್ನು ಒಳಗೊಂಡ ಪೀಠ ಈ ವಿಷಯವನ್ನು ಇಂದು ಪ್ರಕಟಿಸಿತು.
ರಾಮ ಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದ ಕೇಸು ಇಂದು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದ ಒಡನೆಯೇ ವರಿಷ್ಠ ನ್ಯಾಯಮೂರ್ತಿಗಳಿದ್ದ ಪೀಠ ಈ ನಿರ್ಧಾರ ಕೈಗೊಂಡಿತು.
ಬೇರೆ ಬೇರೆ ಕಕ್ಷಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ರಾಜೀವ್ ಧವನ್ ಅವರು ಪೀಠದ ಮುಂದೆ ವಿಷಯಕ್ಕೆ ಸಂಬಂಧಿಸಿ ಯಾವುದೇ ನಿವೇದನೆಯನ್ನು ಮುಂದಿಡುವ ಆವಕಾಶವನ್ನೇ ಪೀಠ ನೀಡಲಿಲ್ಲ. ಕೇಸಿಗೆ ಸಂಬಂಧಿಸಿದ ಇಂದಿನ ವಿಚಾರಣಾ ಕಲಾಪ 30 ಸೆಕೆಂಡುಗಳ ಕಾಲವೂ ನಡೆಯಲಿಲ್ಲ.
ರಾಮ ಜನ್ಮಭೂಮಿ – ಬಾಬರಿ ಮಸೀದಿಯ ವಿವಾದಿತ 2.77 ಎಕರೆ ನಿವೇಶನವನ್ನು ಮೂವರು ಕಕ್ಷಿದಾರರಾಗಿರುವ ಸುನ್ನಿ ವಕ್‌ಫ್ ಬೋರ್ಡ್, ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ಅವರೊಳಗೆ ಸಮಾನವಾಗಿ ಹಂಚಬೇಕೆಂದು ನಾಲ್ಕು ಸಿವಿಲ್ ದಾವೆಗಳಲ್ಲಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 14 ಅಪೀಲುಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಮೂವರು ನ್ಯಾಯಾಧೀಶರರನ್ನು ಒಳಗೊಂಡ ಪೀಠವನ್ನು ರಚಿಸುವ ಸಾಧ್ಯತೆ ಇದೆ.