Advertisement

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

04:20 AM Aug 06, 2020 | Hari Prasad |

ಹೊಸದಿಲ್ಲಿ: ಭೂಮಿ ಪೂಜೆಗಾಗಿ ಅಯೋಧ್ಯೆಗೆ ಆಗಮಿಸಿರುವ ನರೇಂದ್ರ ಮೋದಿ, ಸುಮಾರು 29 ವರ್ಷಗಳ ಅನಂತರ ಆ ಊರಿಗೆ ಕಾಲಿಟ್ಟಿದ್ದಾರೆ.

Advertisement

1992ರಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಶಿಯವರ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಆಯೋಜಿಸಲಾಗಿದ್ದ ತಿರಂಗಾ ಯಾತ್ರಾ ಅಭಿಯಾನಕ್ಕೆ ನರೇಂದ್ರ ಮೋದಿ ರಾಷ್ಟ್ರೀಯ ಸಂಚಾಲಕರಾಗಿದ್ದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವಂತೆ ಆಗ್ರಹಿಸಿ ಆಯೋಜಿಸಲಾಗಿದ್ದ ಆ ತಿರಂಗಾ ಯಾತ್ರೆಯ ಅಂಗವಾಗಿ ಅಯೋಧ್ಯೆಯಲ್ಲಿ ನಡೆದಿದ್ದ ಬೃಹತ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಯೋಧ್ಯೆಗೆ ಆಗಮಿಸಿದ್ದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರಿಗೆ ತಾನು ಈ ನೆಲಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಆ ಶಪಥ ಈಗ ಈಡೇರಿದೆ. ವಿಶೇಷವೆಂದರೆ, ಅವರೇ ಖುದ್ದಾಗಿ ಆಗಮಿಸಿ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವಂಥ ಸುಯೋಗ ಒದಗಿದೆ.

ಮತ್ತೊಂದೆಡೆ, 1992ರಲ್ಲಿ ಅವರು ಯಾವ ಉದ್ದೇಶಕ್ಕಾಗಿ ಅಯೋಧ್ಯೆಗೆ ಕಾಲಿಟ್ಟಿದ್ದರೋ ಆ ಉದ್ದೇಶವೂ (ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು) ಅವರ ನೇತೃತ್ವದ ಸರಕಾರದಡಿಯೇ ಕೈಗೂಡಿದೆ. ಅತ್ತ, ಉತ್ತರ ಪ್ರದೇಶ ಸರಕಾರವು, ಅಯೋಧ್ಯೆಯ ವಿವಾದದ ಕೇಂದ್ರ ಬಿಂದುವಾಗಿದ್ದ ರಾಮಜನ್ಮಭೂಮಿಗೆ ಕಾಲಿಟ್ಟ ದೇಶದ ಮೊದಲ ಪ್ರಧಾನಿ ಎಂದು ಬಣ್ಣಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದ ರಾಮ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿಪೂಜೆ ಸಮಾರಂಭದ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮ, ಮಂದಿರದ ರೂಪುರೇಷೆ ಚಿತ್ರಗಳು ರಾರಾಜಿಸಿದವು. ವಾಟ್ಸ್‌ಆಪ್‌ ಸ್ಟೇಟಸ್‌ಗಳು, ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಹನುಮನ ತೈಲವರ್ಣ, ರೇಖಾಚಿತ್ರಗಳು, ಬಣ್ಣ ಬಣ್ಣದ ಚಿತ್ರಗಳು, ಶುಭಾಶಯ ಕೋರಿಕೆ, ಜೈಕಾರ ಘೋಷಣೆಗಳು ಕಂಡು ಬಂದವು. ಶ್ರೀರಾಮನ ಪಟ್ಟಾಭಿಷೇಕ, ಬಿಲ್ಲನ್ನು ಹಿಡಿದಿರುವ, ರಾಮನ ಕೆಳಗೆ ಹನುಮ ಕುಳಿತಿರುವ ಚಿತ್ರಗಳನ್ನು ಹೆಚ್ಚಾಗಿ ಬಳಸಲಾಗಿತ್ತು.


ಟ್ವಿಟರ್‌ನಲ್ಲೂ ರಾಮನ ಕುರಿತು ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಗೆ ತ್ವರಿತವಾಗಿ ನಿರ್ಧಾರ ಕೈಗೊಂಡದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರಿಗೆ ಸಾಕಷ್ಟು ಮಂದಿ ಧನ್ಯವಾದ ಅರ್ಪಿಸಿದರು. ಇನ್ನೂ ಕೆಲವರು ಮಂದಿರ ಶಿಲಾನ್ಯಾಸದ ಚಿತ್ರಗಳನ್ನು ಹಾಕಿಕೊಂಡು ಸಂಭ್ರಮಿಸಿದರು. ‘ತ್ಯಾಗದ ಪ್ರತಿರೂಪವಾದ ಶ್ರೀರಾಮ ಚಂದ್ರನ ದೇಹಕ್ಕೆ ಸಾವಾಗಿರಬಹುದು, ಆದರೆ ಆತ ಎತ್ತಿ ಹಿಡಿದ ಮೌಲ್ಯಗಳು ಅಜರಾಮರವಾಗಿರುತ್ತವೆ’ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವು. ಅಧಿಕ ಸಂಖ್ಯೆಯಲ್ಲಿ ಮೂರು ಅಕ್ಷರದ “ಜೈ ಶ್ರೀ ರಾಮ್‌’ ಉದ್ಘೋಷಗಳನ್ನು ಮೊಳಗಿಸಲಾಗಿತ್ತು.

Advertisement

ಮಂದಿರ ಹಿಂದೂಗಳ ನಂಬಿಕೆಯ ಸಂಕೇತ: ಶಾ
ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಯು ಶತಮಾನಗಳಿಂದಲೂ ವಿಶ್ವದ ಹಲವು ದೇಶಗಳ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಇದು ಭಾರತದ ಐತಿಹಾಸಿಕ ಹಾಗೂ ಹೆಮ್ಮೆಯ ದಿನವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರಾಮಜನ್ಮ ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ.

ಶತಮಾನಗಳ ಸುದೀರ್ಘ‌ ಕಾಲ ಅಸಂಖ್ಯ ರಾಮಭಕ್ತರ ತ್ಯಾಗ, ಹೋರಾಟ, ಪ್ರಾಯಶ್ಚಿತ್ತದ ಫ‌ಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ರಕ್ಷಿಸಲು ಪ್ರಧಾನಿ ಮೋದಿ ನೇತೃತ್ವದ ಸರಕಾರ‌ ಬದ್ಧವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಕೋವಿಡ್ 19 ಸೋಂಕಿತರಾಗಿರುವ ಕಾರಣ ಅಮಿತ್‌ ಶಾ ಭೂಮಿ ಪೂಜೆ ಸಮಾರಂಭದಿಂದ ದೂರ ಉಳಿದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next