ನವದೆಹಲಿ:ಬಾಬ್ರಿ ಮಸೀದಿ ಧ್ವಂಸ ಹಾಗೂ ರಾಮಜನ್ಮಭೂಮಿ ವಿವಾದ ಪ್ರಕರಣದ ಅಂತಿಮ ವಿಚಾರಣೆ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಶೇಷ ಪೀಠದಲ್ಲಿ ಮಂಗಳವಾರ ಆರಂಭಗೊಂಡಿದೆ. ಪೀಠ ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡಿದೆ.
ಬಾಬ್ರಿ ಮಸೀದಿ, ರಾಮಜನ್ಮಭೂಮಿ ವಿವಾದದ ಪ್ರಕರಣದ ಬಗ್ಗೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿರುವ ತೀರ್ಪಿನ ವಿರುದ್ಧ 13 ಮೇಲ್ಮನವಿಗಳು ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿದ್ದವು. ಈ ಎಲ್ಲಾ ಮೇಲ್ಮನವಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂ ವಿಶೇಷ ಪೀಠ ಕೈಗೆತ್ತಿಕೊಂಡಿದೆ.
ಸುನ್ನಿ ವಕ್ಫ್ ಬೋರ್ಡ್ ಪರ ವಕೀಲರಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಈ ಪ್ರಕರಣದ ತುರ್ತು ವಿಚಾರಣೆ ಕೈಗೆತ್ತಿಕೊಂಡ ಬಗ್ಗೆ ಕೋರ್ಟ್ ಕಾರಣ ನೀಡಬೇಕೆಂದು ಹೇಳಿದರು.
ಸುಪ್ರೀಂಕೋರ್ಟ್ ಯಾವಾಗಲೇ ಆಗಲಿ ಅಯೋಧ್ಯೆ ವಿಷಯವನ್ನು ಕೈಗೆತ್ತಿಕೊಂಡಾಗ ಕೋರ್ಟ್ ಹೊರಗೆ ಗಂಭೀರ ಚರ್ಚೆಗಳು ನಡೆಯುತ್ತಿರುತ್ತದೆ. ಆ ನಿಟ್ಟಿನಲ್ಲಿ ಈ ವಿಚಾರಣೆಯನ್ನು 2019ರ ಜುಲೈ 15ರ ಹೊತ್ತಿಗೆ ನಡೆಸಬೇಕೆಂದು ಸಿಬಲ್ ಮನವಿ ಮಾಡಿಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಅಂತಿಮ ವಿಚಾರಣೆ ಮುಗಿದ ಬಳಿಕ, 2019ರ ಸಾರ್ವತ್ರಿಕ ಚುನಾವಣೆಯ ಫಲಿತಂಶ ಪ್ರಕಟವಾದ ನಂತರವೇ ತೀರ್ಪು ಪ್ರಕಟಿಸಬೇಕೆಂದು ವಿನಂತಿಸಿಕೊಂಡರು.
ಏತನ್ಮಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮತ್ತೆ ವಿಚಾರಣೆ ಮುಂದಕ್ಕೆ:
ಬಾಬ್ರಿ ಮಸೀದಿ ಧ್ವಂಸ, ಅಯೋಧ್ಯೆ ಪ್ರಕರಣದ ಬಗ್ಗೆ ಡಿಸೆಂಬರ್ 5ರಿಂದ ಪ್ರತಿದಿನ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿತ್ತು. ಆದರೆ ಇದೀಗ ತ್ರಿಸದಸ್ಯ ಪೀಠ ವಿಚಾರಣೆಯನ್ನು 2018ರ ಫೆ.8ಕ್ಕೆ ಮುಂದೂಡಿದೆ. ಅಲ್ಲದೇ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ವಕೀಲರಿಗೆ ಸೂಚಿಸಿದೆ.