ಅಯೋಧ್ಯೆ: ರಾಮಮಂದಿರಕ್ಕೆ ಭೂಮಿ ಪೂಜೆ ಆಗಿದ್ದೇ ಆಗಿದ್ದು, ಅಯೋಧ್ಯೆ ಚಹರೆಯೇ ಬದಲಾಗುತ್ತಿದೆ. ರೈಲ್ವೆ ನಿಲ್ದಾಣದ ಮರುವಿನ್ಯಾಸದ ಯೋಜನೆ ಬಳಿಕ ಇದೀಗ ಅಯೋಧ್ಯೆ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ.
ಪ್ರಸ್ತುತವಿರುವ ಸಣ್ಣ ವಿಮಾನ ನಿಲ್ದಾಣ ಅಭಿವೃದ್ಧಿಗೆ ಈ ಹಿಂದೆ 285 ಎಕರೆ ಭೂಮಿ ಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈಗ 600 ಎಕರೆಗೆ ವಿಮಾನ ನಿಲ್ದಾಣ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ಅಯೋಧ್ಯೆ ಏರ್‌ಪೋರ್ಟ್‌ಗೆ 525 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ರಾಮನ ಹೆಸರು: ಅಯೋಧ್ಯೆಗೆ ಭೇಟಿ ನೀಡಿದ್ದ ಉ.ಪ್ರ. ನಾಗರಿಕ ವಿಮಾನಯಾನ ಸಚಿವ ನಂದಗೋಪಾಲ್ ಗುಪ್ತಾ ನಂದಿ, “ಅಯೋಧ್ಯೆ ವಿಮಾನ ನಿಲ್ದಾಣವನ್ನು ಜಾಗತಿಕ ದರ್ಜೆಗೆ ಏರಿಸಲಾಗುವುದು. ಏರ್‌ಪೋರ್ಟ್‌ಗೆ ಶ್ರೀರಾಮನ ಹೆಸರನ್ನು ಇಡಲಾಗುವುದು’ ಎಂದು ತಿಳಿಸಿದರು.
“ಏರ್‌ಪೋರ್ಟ್ ಕಾಮಗಾರಿ ಪೂರ್ಣಗೊಂಡ ಬಳಿಕ ವಿದೇಶದ ಪ್ರಮುಖ ನಗರ ಗಳಿಗೆ ವಾಯುಸಂಪರ್ಕ ಕಲ್ಪಿಸಲಾಗುತ್ತದೆ. 777 ಬೋಯಿಂಗ್ ಮತ್ತು ಡಬಲ್ ಡೆಕ್ಕರ್ ವಿಮಾನಗಳಿಗೆ ಲ್ಯಾಂಡಿಂಗ್ ಸೌಲಭ್ಯವಿ ರಲಿದೆ. ರಾಮಮಂದಿರ ನಿರ್ಮಾಣ ದೊಂದಿಗೆ ವಿಮಾನ ನಿಲ್ದಾಣದ ಮೊದಲ ಹಂತದ ಯೋಜನೆಗಳೂ ಪೂರ್ಣಗೊಳ್ಳಲಿವೆ’ ಎಂದು ಭರವಸೆ ನೀಡಿದರು.
ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) ಅಡಿಯಲ್ಲಿ ರಾಜ್ಯ ಸರಕಾರ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಉ.ಪ್ರ., ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಅದನ್ನು ನವೀಕರಿಸಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿಸಲು ನಿರ್ಧರಿಸಿದೆ.
ಸುತ್ತಮುತ್ತಲೂ ಏರ್‌ಪೋರ್ಟ್
ಅಯೋಧ್ಯೆ ಸುತ್ತಮುತ್ತಲಿನ ಅಜಂಗಢ, ಸೋನ್‌ಭದ್ರ, ಅಲಿಗಢದಲ್ಲಿ ರಾಜ್ಯ ಸರಕಾರ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಕುಶಿ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರವೇ ವಾಯುಸಂಚಾರಕ್ಕೆ ಮುಕ್ತವಾಗಲಿದೆ.