ಅಯೋಧ್ಯೆ/ನವದೆಹಲಿ: ಭವ್ಯ ರಾಮಮಂದಿರದ ಉದ್ಘಾಟನೆ ಜನವರಿ 22ರಂದು ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ 150ಕ್ಕೂ ಅಧಿಕ ಸಿಐಎಸ್ ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಅನ್ನು ಕೇಂದ್ರ ಸರ್ಕಾರ ನಿಯೋಜಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Mumbai: ಚೆಂಡು ಬಡಿದು ಫೀಲ್ಡಿಂಗ್ ಮಾಡುತ್ತಿದ್ದ ಆಟಗಾರ ಸಾವು
ಅಯೋಧ್ಯೆಧಾಮ್ ನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ 68ನೇ ನಾಗರಿಕ ವಿಮಾನ ನಿಲ್ದಾಣವಾಗಿದ್ದು, ಇದು ಕೇಂದ್ರದ ವಿಶೇಷ ವಾಯುಯಾನ ಭದ್ರತಾ ಗ್ರೂಪ್ (ಎಎಸ್ ಜಿ) ಅಡಿ ಬರಲಿದೆ ಎಂದು ವರದಿ ತಿಳಿಸಿದೆ.
2023ರ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್), ಭಯೋತ್ಪಾದಕ ನಿಗ್ರಹ ಹಾಗೂ ವಿಧ್ವಂಸಕ ನಿಗ್ರಹ ಕಾರ್ಯವನ್ನು ನಿರ್ವಹಿಸಲಿದೆ.
ಅಲ್ಲದೇ ಸಿಐಎಸ್ ಎಫ್ ಪ್ರಯಾಣಿಕರು ಹಾಗೂ ಅವರ ಲಗೇಜ್ ಗಳನ್ನು ಕೂಡಾ ಪರಿಶೀಲಿಸುವ ಕಾರ್ಯ ನಡೆಸಲಿದೆ. ಡೆಪ್ಯುಟಿ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ 150ಕ್ಕೂ ಅಧಿಕ ಸಿಐಎಸ್ ಎಫ್ ಸಿಬಂದಿಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಬೃಹತ್ ವಿಮಾನ ನಿಲ್ದಾಣ:
ಮೊದಲ ಹಂತದಲ್ಲಿ 65,000 ಚದರ ಅಡಿಯ ವಿಸ್ತಾರದ ವಿಮಾನ ನಿಲ್ದಾಣ ಹೊಂದಿರಲಿದ್ದು, ಈ ನಿಲ್ದಾಣದಲ್ಲಿ ಪ್ರತಿ ಗಂಟೆಗೆ 2ರಿಂದ 3 ವಿಮಾನಗಳು ಬಂದಿಳಿಯಬಹುದಾಗಿದೆ. ಸುಮಾರು 2,200 ಮೀಟರ್ ದೂರದ ರನ್ ವೇ ಹೊಂದಿರಲಿದೆ. ಅಂದರೆ ಏರ್ ಪೋರ್ಟ್ ನಲ್ಲಿ ಬೋಯಿಂಗ್ 737, ಏರ್ ಬಸ್ 319 ಮತ್ತು 320 ವಿಮಾನಗಳು ಲ್ಯಾಂಡ್ ಆಗಬಹುದಾಗಿದೆ. ಎರಡನೇ ಹಂತದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದಿಂದ ಶೀಘ್ರವೇ ಅನುಮತಿ ಪಡೆಯಲಾಗುವುದು ಎಂದು ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಎರಡನೇ ಹಂತದಲ್ಲಿ 2,200 ಮೀಟರ್ ದೂರದ ರನ್ ವೇಯನ್ನು 3,700 ಮೀಟರ್ ಗೆ ವಿಸ್ತರಿಸಲಾಗುವುದು. ಈ ಮೂಲಕ ರನ್ ವೇ ಸುಮಾರು 4 ಕಿಲೋ ಮೀಟರ್ ದೂರದವರೆಗೆ ವಿಸ್ತರಿಸಲಿದೆ. ಇದರಿಂದ ಅಂತಾರಾಷ್ಟ್ರೀಯ ವಿಮಾನಗಳಾದ ಬೋಯಿಂಗ್ 787 ಮತ್ತು ಬೋಯಿಂಗ್ 777 ಕೂಡಾ ಅಯೋಧ್ಯೆಯಲ್ಲಿ ಲ್ಯಾಂಡ್ ಆಗಬಹುದಾಗಿದೆ.